ಬೆಳ್ತಂಗಡಿ: ಜೀವನ ಶೈಲಿಯಲ್ಲಿ ಬದಲಾವಣೆ, ಉತ್ತಮ ಆಹಾರ ಕ್ರಮ, ಕಾಲಕಾಲಕ್ಕೆ ಸೂಕ್ತ ಆರೋಗ್ಯ ತಪಾಸಣೆ, ಯೋಗಾಭ್ಯಾಸ ಮುಂತಾದ ವಿಧಾನಗಳ ಮೂಲಕ ಕ್ಯಾನ್ಸರ್ ರೋಗ ಬರದ ಹಾಗೆ ನೋಡಿಕೊಳ್ಳಬಹುದು.ಧೃಢ ಮನಸ್ಸು ಹಾಗೂ ಆತ್ಮವಿಶ್ವಾಸ ಇದ್ದರೆ ಕ್ಯಾನ್ಸರ್ ರೋಗವನ್ನು ಗೆಲ್ಲಬಹುದು ಎಂದು ಸೀರೊ ಮಲಬಾರ್ ಯೂತ್ ಮೂವ್ ಮೆಂಟ್ ನಿರ್ದೇಶಕರಾದ ವಂದನೀಯ ಫಾ.ತೋಮಸ್ ಪುಲ್ಲಾಟ್ ಅಭಿಪ್ರಾಯಪಟ್ಟರು.
ಅವರು 22 ಆಗಸ್ಟ್ 2023 ರಂದು ಡಿ.ಕೆ.ಆರ್.ಡಿ.ಎಸ್ ಬೆಳ್ತಂಗಡಿ ನೇತೃತ್ವದಲ್ಲಿ ಕಾರಿತಾಸ್ ಇಂಡಿಯಾ ನವದೆಹಲಿ ಪ್ರಾಯೋಜಿತ ಸ್ಪರ್ಶ ಕಾರ್ಯಕ್ರಮ, ಗ್ರಾಮ ಪಂಚಾಯತ್ ಚಾರ್ಮಾಡಿ, ಪ್ರಾಥಮಿಕ ಆರೋಗ್ಯ ಕೇಂದ್ರ ಚಾರ್ಮಾಡಿ, ಸೀರೊ ಮಲಬಾರ್ ಯೂತ್ ಮೂವ್ ಮೆಂಟ್ ತೋಟತ್ತಾಡಿ ವಲಯ, ಸ್ನೇಹ ಜ್ಯೋತಿ ಮಹಿಳಾ ತಾಲೂಕು ಒಕ್ಕೂಟ ಬೆಳ್ತಂಗಡಿ, ಸ್ನೇಹ ಕಿರಣ್ ಜಿಲ್ಲಾ ಒಕ್ಕೂಟ ಬೆಳ್ತಂಗಡಿ, ಹಾಗೂ ಚೈತನ್ಯ ಮಹಾಸಂಘ ತೋಟತ್ತಾಡಿ ಇವುಗಳ ಆಶ್ರಯದಲ್ಲಿ ಕಕ್ಕಿಂಜೆ ಪೇಟೆಯಲ್ಲಿ ನಡೆದ ಕ್ಯಾನ್ಸರ್ ರೋಗದ ವಿರುದ್ಧದ ಜನಜಾಗೃತಿ ಕಾರ್ಯಕ್ರಮವನ್ನು ಕ್ಯಾನ್ಸರ್ ರೋಗದ ಬಗ್ಗೆ ತಯಾರಿಸಿದ ಕರಪತ್ರವನ್ನು ಅನಾವರಣ ಮಾಡುವ ಮೂಲಕ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ಡಿ.ಕೆ.ಆರ್.ಡಿ.ಎಸ್ ಸಂಸ್ಥೆಯ ನಿರ್ದೇಶಕರಾಗಿರುವ ವಂದನೀಯ ಫಾ.ಬಿನೋಯಿ ಎ. ಜೆ. ಮಾತನಾಡಿ, ಸಂಸ್ಥೆಯ ಮೂಲಕ ನಡೆಸಲ್ಪಡುವ ಸ್ಪರ್ಶ-ಕ್ಯಾನ್ಸರ್ ರೋಗದ ವಿರುದ್ಧದ ಅಭಿಯಾನ ಹಾಗೂ ಕ್ಯಾನ್ಸರ್ ರೋಗದ ಬಗ್ಗೆ ವಿವರಿಸಿದರು.
ಚಾರ್ಮಾಡಿ ಗ್ರಾಮ ಪಂಚಾಯತ್ ಸದಸ್ಯ ರವಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು.ಸೀರೊ ಮಲಬಾರ್ ಯೂತ್ ಮೂವ್ ಮೆಂಟ್ ಅಧ್ಯಕ್ಷರಾದ ಸುನಿಲ್ ಮೂಲನ್, ಸ್ನೇಹ ಜ್ಯೋತಿ ಮಹಿಳಾ ತಾಲೂಕು ಒಕ್ಕೂಟ ಬೆಳ್ತಂಗಡಿ ಇದರ ಅಧ್ಯಕ್ಷೆ ಮಂಜುಳಾ ಜೋನ್ ಹಾಗೂ ಕೋಶಾಧಿಕಾರಿ ಏಲಿಯಮ್ಮ ತೋಮಸ್ ವೇದಿಕೆಯಲ್ಲಿ ಉಪಸ್ಥಿತರಿದ್ದರು.ಒಕ್ಕೂಟದ ಅಧ್ಯಕ್ಷೆ ಮಂಜುಳಾ ಜೋನ್ ಸ್ವಾಗತಿಸಿದರು.
ಸಂಸ್ಥೆಯ ಕಾರ್ಯಕರ್ತರಾದ ಮಾರ್ಕ್ ಡಿ’ಸೋಜಾರವರು ಕಾರ್ಯಕ್ರಮ ನಿರೂಪಿಸಿದರು.ಕಾರ್ಯಕರರ್ತರಾದ ಜೋನ್ಸನ್ ರವರು ಧನ್ಯವಾದವಿತ್ತರು.
ಸಭಾ ಕಾರ್ಯಕ್ರಮದ ಬಳಿಕ ಕಕ್ಕಿಂಜೆ ಹಾಗೂ ಚಾರ್ಮಾಡಿ ಪೇಟೆಗಳಲ್ಲಿ ಕ್ಯಾನ್ಸರ್ ರೋಗದ ಬಗ್ಗೆ ಮೈಕ್ ಉದ್ಘೋಷಣೆ ಮಾಡಿ ಸಾರ್ವಜನಿಕರಿಗೆ ಕರಪತ್ರ ವಿತರಿಸಲಾಯಿತು.ಆರ್ಥಿಕವಾಗಿ ಹಿಂದುಳಿದ ಕ್ಯಾನ್ಸರ್ ರೋಗ ಪೀಡಿತ ವ್ಯಕ್ತಿಗಳಿಗೆ ನೆರವಾಗುವ ನಿಟ್ಟಿನಲ್ಲಿ ಸಾರ್ವಜನಿಕರಿಂದ ಹಾಗೂ ಅಂಗಡಿ ಮುಂಗಟ್ಟುಗಳ ವರ್ತಕರಿಂದ ಧನ ಸಹಾಯ ಸಂಗ್ರಹಣೆ ಮಾಡಲಾಯಿತು.ಮಂಗಳೂರು ರೋಶಿನಿ ನಿಲಯ, ಸಂತ ಅಲೋಶಿಯಸ್ ಕಾಲೇಜು ಹಾಗೂ ಉಜಿರೆ ಶ್ರೀ ಮಂಜುನಾಥೇಶ್ವರ ಕಾಲೇಜಿನ ಸ್ನಾತಕೋತ್ತರ ಸಮಾಜ ಕಾರ್ಯ ವಿಭಾಗದ ವಿದ್ಯಾರ್ಥಿಗಳು, ಒಕ್ಕೂಟದ ಪದಾಧಿಕಾರಿಗಳು, ಡಿ.ಕೆ.ಆರ್.ಡಿ.ಎಸ್ ಸಿಬ್ಬಂದಿ ವರ್ಗ ಕಾರ್ಯಕ್ರಮದ ಯಶಸ್ಸಿಗೆ ಸಹಕರಿಸಿದರು.