Site icon Suddi Belthangady

ಆ.28: ಬೆಳ್ತಂಗಡಿಯಲ್ಲಿ ಸೌಜನ್ಯಳ ನ್ಯಾಯಕ್ಕಾಗಿ ಮಹಾಧರಣಿ ಚಲೋ ಬೆಳ್ತಂಗಡಿ: ವಸಂತ ಬಂಗೇರ- ಪತ್ರಿಕಾಗೋಷ್ಠಿ

ಬೆಳ್ತಂಗಡಿ: ಕರ್ನಾಟಕ ರಾಜ್ಯ ಜನಪರ ಸಂಘಟನೆಗಳ ವೇದಿಕೆ ದ.ಕ.ಜಿಲ್ಲಾ ಸಮಿತಿ ನೇತೃತ್ವದಲ್ಲಿ ಆ.28 ರಂದು ಬೆಳ್ತಂಗಡಿ ಮಿನಿ ವಿಧಾನಸೌಧದ ಎದುರು ರಾಜ್ಯ ಮಟ್ಟದ ಚಲೋ ಬೆಳ್ತಂಗಡಿ ಮಹಾಧರಣಿ ನಡೆಯಲಿದೆ ಎಂದು ಮಾಜಿ ಶಾಸಕ ಕೆ.ವಸಂತ ಬಂಗೇರ ಹೇಳಿದರು.ಅವರು ಆ.22 ರಂದು ಬೆಳ್ತಂಗಡಿ ಶ್ರೀ ಗುರುನಾರಾಯಣ ಸಂಕೀರ್ಣದಲ್ಲಿ ಕರೆದ ಪತ್ರಿಕಾ ಗೋಷ್ಠಿಯಲ್ಲಿ ಮಾತನಾಡಿದರು.

ಸೌಜನ್ಯಳಿಗೆ ನ್ಯಾಯ ಸಿಗಬಾರದೆಂದು ಇರುವ ಕೆಲವು ವಿರೋಧಿ ಶಕ್ತಿಗಳು ಆ.28 ರಂದು ಬೆಳ್ತಂಗಡಿಯಲ್ಲಿ ಧರಣಿ ಇಲ್ಲ ಎಂದು ಸುಳ್ಳು ಪ್ರಚಾರ ಮಾಡುತ್ತಿರುವುದು ಕಂಡು ಬಂದಿದೆ.ಆದರೆ ಆಗಸ್ಟ್ 28 ರಂದು ರಾಜ್ಯ ಮಟ್ಟದ ಹೋರಾಟ ಬೆಳ್ತಂಗಡಿಯಲ್ಲಿ ಚಲೋ ಬೆಳ್ತಂಗಡಿ ನಡೆಯಲಿದೆ.ಸುಳ್ಳು ಸುದ್ದಿಗಳಿಗೆ, ಸುಳ್ಳು ವದಂತಿಗಳಿಗೆ ಬಲಿಯಾಗದೆ ಸೌಜನ್ಯಾಳ ನ್ಯಾಯದ ನಿರೀಕ್ಷೆಯಲ್ಲಿರುವ ಎಲ್ಲಾ ಜನರು ಬೆಳ್ತಂಗಡಿಗೆ ಬಂದು ಮಹಾಧರಣಿಯಲ್ಲಿ ಭಾಗವಹಿಸಬೇಕೆಂದು ಈ ಮೂಲಕ ಜನತೆಗೆ ಕರೆ ನೀಡುತ್ತಿದ್ದೇವೆ.

ಕರ್ನಾಟಕ ರಾಜ್ಯದ ಜನಪರ ಸಂಘಟನೆಗಳು ಹಾಗೂ ರಾಜ್ಯದ ಹಲವಾರು ಸಮಾನ ಮನಸ್ಕ ಸಂಘಟನೆಗಳು ಒಂದಾಗಿ ನಡೆಸಲಿರುವುದರಿಂದ ಅದರಲ್ಲಿ ತಾಲೂಕಿನ ಜನಪರ ಸಂಘಟನೆಗಳು, ಸಮಾಜಸೇವಾ ಸಂಘಟನೆಗಳು ಎಲ್ಲರೂ ಭಾಗವಹಿಸಿ ಪ್ರಜ್ಞಾವಂತ ನಾಗರಿಕರು, ರೈತರು, ಕಾರ್ಮಿಕರು, ಶೋಷಿತರು, ದಲಿತರು, ಹಿಂದುಳಿದ ವರ್ಗದವರು ಮಹಿಳೆಯರು, ವಿದ್ಯಾರ್ಥಿ ಯುವಜನರ ದೊಡ್ಡ ಸಂಖ್ಯೆಯಲ್ಲಿ ಧರಣಿಯಲ್ಲಿ ಪಾಲ್ಗೊಳ್ಳುವಂತೆ ಮನವಿ ಮಾಡುತ್ತೇವೆ.

ಸೌಜನ್ಯ ಪ್ರಕರಣ ಅರಂಭದಿಂದಲೂ ಹಳಿತಪ್ಪಿದ ರೈಲುದಾರಿಯಿಂದಾಗಿದೆ.ಅಮಾಯಕ ಸಂತೋಷ ರಾವ್ ಎಂಬಾತನನ್ನು ಆರೋಪಿಯನ್ನಾಗಿ ಪೊಲೀಸರ ಕ್ರಮ ಹಾಗೂ ಸಿಓಡಿ ಅಧಿಕಾರಿಗಳ ನಡೆ ಇಂದು ಈ ಎಲ್ಲಾ ಅವಾಂತರಗಳಿಗೆ ಕಾರಣವಾಗಿದೆ.ಇದರಿಂದ ಆಗಲೇ ರಾಜ್ಯದ ಮುಖ್ಯಮಂತ್ರಿಯಾಗಿದ್ದ ಸದಾನಂದ ಗೌಡ ಸರಕಾರದಲ್ಲಿ ನಮಗೆ ನಂಬಿಕೆ ಇಲ್ಲದಂತಾಗಿದೆ ಎಂದು ಪ್ರಕರಣವನ್ನು ಸಿಬಿಐಗೆ ಒಪ್ಪಿಸಲು ಆಗ್ರಹಿಸಿ ನಡೆದ ಹೋರಾಟದ ಪರಿಣಾಮ 2013 ರಲ್ಲಿ ಅಧಿಕಾರಕ್ಕೆ ಬಂದ ಸಿದ್ದರಾಮಯ್ಯ ಸರಕಾರದಲ್ಲಿ ನಾನು ಶಾಸಕರಾಗಿ ಇದ್ದದ್ದರಿಂದ ವಿಧಾನ ಸಭೆಯಲ್ಲಿ ಪ್ರಸ್ತಾಪಿಸಿದ್ದರಿಂದ ಈ ಪ್ರಕರಣವನ್ನು ಸಿಬಿಐಗೆ ವಹಿಸಲಾಯಿತು.

ನಡೆಯುತ್ತಿದ್ದ ತನಿಖೆಯನ್ನು ತಡೆಯಲು ಸಿಬಿಐ ಅಧಿಕಾರಿಗಳನ್ನು ಬದಲಾಯಿಸಿ ತನಿಖೆಯ ಹಳಿ ತಪ್ಪಿಸಿರುವುದು ಇಂದು ನಮಗೆಲ್ಲ ತಿಳಿದಿರುವ ಬಹಿರಂಗ ಸತ್ಯ.ಆದ್ದರಿಂದ ಕೇಂದ್ರ ಸರಕಾರದ ಅಧೀನದಲ್ಲಿರುವ ಸಿಬಿಐಯಿಂದ ಪ್ರಕರಣವನ್ನು ಹಿಂಪಡೆದು ನಿವೃತ್ತ ನ್ಯಾಯಾಧೀಶರೊಬ್ಬರ ಸುಪರ್ದಿಯಲ್ಲಿ ಎಸ್.ಐ.ಟಿ ತನಿಖೆ ನಡೆಸಲು ಸರಕಾರ ಕ್ರಮ ಕೈಗೊಳ್ಳಬೇಕು ಎಂಬುದು ನಮ್ಮ ಆಗ್ರಹ. ತಾಲೂಕಿನ ಅಸಹಜ ಸಾವುಗಳ ಮತ್ತು ಪತ್ತೆಯಾಗದ ಕೊಲೆಗಳ ನ್ಯಾಯಾಂಗ ತನಿಖೆ ನಡೆಸಿ ಕೊಲೆಗಳಿಗೆ ಕಾರಣ ಹಾಗೂ ಆರೋಪಿಗಳ ಪತ್ತೆ ಮಾಡಲು ಸರಕಾರವನ್ನು ಒತ್ತಾಯಿಸುತ್ತೇವೆ ಎಂದರು.

ಪತ್ರಿಕಾಗೋಷ್ಠಿಯಲ್ಲಿ ಕಾರ್ಮಿಕ ಮುಖಂಡ ಕರ್ನಾಟಕ ರಾಜ್ಯ ಜನಪರ ಸಂಘಟನೆಗಳ ವೇದಿಕೆಯ ಜಿಲ್ಲಾ ಸಂಚಾಲಕ ಬಿ.ಎಂ. ಭಟ್, ನ್ಯಾಯವಾದಿ ಮನೋಹರ ಇಳಂತಿಲ, ತಣ್ಣೀರುಪಂತ ಗ್ರಾಮ ಪಂಚಾಯತ್ ಮಾಜಿ ಅಧ್ಯಕ್ಷ ಜಯವಿಕ್ರಮ್ ಕೆಲ್ಲಾಪು ಹಾಜರಿದ್ದರು.

Exit mobile version