Site icon Suddi Belthangady

ಸೇವಾಭಾರತಿ ಕನ್ಯಾಡಿ ಇವರ ಸಹಯೋಗದಲ್ಲಿ ಪಟ್ಟೂರಿನ ಶ್ರೀರಾಮ ವಿದ್ಯಾಸಂಸ್ಥೆಯ ವಿದ್ಯಾರ್ಥಿಗಳಿಗೆ ಉಚಿತ ಬರೆಯುವ ಪುಸ್ತಕ ವಿತರಣೆ

ಪಟ್ಟೂರು: ರಾಮನಗರದ ನವಚೇತನ ಚಾರಿಟೇಬಲ್ ಟ್ರಸ್ಟ್ ನ ವತಿಯಿಂದ ಸೇವಾಭಾರತಿ ಕನ್ಯಾಡಿ ಸಹಯೋಗದೊಂದಿಗೆ ಪಟ್ಟೂರಿನ ಶ್ರೀರಾಮ ವಿದ್ಯಾಸಂಸ್ಥೆಯ ವಿದ್ಯಾರ್ಥಿಗಳಿಗೆ ಉಚಿತ ಬರೆಯುವ ಪುಸ್ತಕಗಳನ್ನು ಆಗಸ್ಟ್ 21ರಂದು ನೀಡಿದರು.

ಈ ಸಂದರ್ಭದಲ್ಲಿ ಮಾತನಾಡಿದ ಟ್ರಸ್ಟ್ ನ ಅಧ್ಯಕ್ಷರಾದ ಕೆ.ಎಸ್.ಮಂಜುನಾಥ್ ವಿದ್ಯಾರ್ಥಿಗಳಿಗೆ ನೆರವಾಗುವಂತಹ ಈ ಕಾರ್ಯದಲ್ಲಿ ನನಗೆ ಆತ್ಮ ತೃಪ್ತಿ ಇದೆ.ನಾವು ಮಾಡುವ ಕಾರ್ಯ ಇನ್ನೊಬ್ಬರಿಗೆ ಪ್ರೇರಣೆ ನೀಡುವಂತಿರಬೇಕು. ವಿದ್ಯಾರ್ಥಿಗಳು ಕಲಿತ ಶಾಲೆಯನ್ನು ಮತ್ತು ಕಲಿಸಿದ ಗುರುಗಳನ್ನು ಯಾವತ್ತು ಮರೆಯಬಾರದು.ಚಿರಕಾಲ ಅವರಿಗೆ ಋಣಿಯಾಗಿರಬೇಕು ಎಂದರು. ವೇದಿಕೆಯಲ್ಲಿ ಉಪಸ್ಥಿತರಿದ್ದ ಕನ್ಯಾಡಿಯ ಸೇವಾ ಭಾರತಿಯ ಸ್ಥಾಪಕರಾದ ವಿನಾಯಕ್ ರಾವ್ ಕನ್ಯಾಡಿ ಮಾತನಾಡುತ್ತಾ, ಜೀವನದಲ್ಲಿ ನಡೆದ ಆಕಸ್ಮಿಕ ಘಟನೆಯಿಂದಾಗಿ ಇಂದು ಗಾಲಿ ಕುರ್ಚಿಯಲ್ಲಿ ಜೀವನಪರ್ಯಂತ ಓಡಾಡುವ ಪರಿಸ್ಥಿತಿ ನನಗಿದ್ದರೂ ಬದುಕಿನಲ್ಲಿ ಏನನ್ನಾದರೂ ಸಾಧಿಸಬೇಕೆಂಬ ಛಲ ನಿರಂತರವಾಗಿದೆ. ಜೀವನದಲ್ಲಿ ಎಲ್ಲವನ್ನು ಕಳೆದುಕೊಂಡಾಗ ಕುಗ್ಗದೆ ಧೈರ್ಯವಾಗಿ ಬದುಕು ನಡೆಸಿಕೊಂಡು ಹೋಗುವಂತಹ ಶಿಕ್ಷಣ ನಮ್ಮಲ್ಲಿರಬೇಕು ಎಂದರು. ವಿದ್ಯಾರ್ಥಿಗಳು ಉನ್ನತ ಶಿಕ್ಷಣವನ್ನು ಪಡೆದು ಕೀರ್ತಿವಂತರಾಗಿ ಬಾಳುವಂತೆ ಶುಭ ಹಾರೈಸಿದರು. ವೇದಿಕೆಯಲ್ಲಿ ಸೌತಡ್ಕ ಶ್ರೀ ಮಹಾಗಣಪತಿ ಸೇವಾ ಟ್ರಸ್ಟ್ ಅಧ್ಯಕ್ಷ ಕೃಷ್ಣ ಭಟ್ ಹಿತ್ತಿಲು, ಶಾಲಾ ಆಡಳಿತ ಸಮಿತಿಯ ಸಂಚಾಲಕರಾದ ಪ್ರಶಾಂತ್ ಶೆಟ್ಟಿ ದೇರಾಜೆ ಉಪಸ್ಥಿತರಿದ್ದರು.

ಶಾಲಾ ಮುಖ್ಯ ಶಿಕ್ಷಕ ಚಂದ್ರಶೇಖರ ಶೇಟ್ ನವಚೇತನ ಚಾರಿಟೇಬಲ್ ಟ್ರಸ್ಟ್ ರಾಮನಗರ ಹಾಗೂ ಸೇವಾ ಭಾರತಿ ಕನ್ಯಾಡಿ (ರಿ.) ಸಂಸ್ಥೆಗಳಿಗೆ ಧನ್ಯವಾದ ಅರ್ಪಿಸಿದರು. ಶಾಲಾ ಶಿಕ್ಷಕಿಯವರು, ಸಿಬ್ಬಂದಿ ವರ್ಗದವರು ಸಹಕರಿಸಿದರು.

Exit mobile version