ಉಜಿರೆ: ವ್ಯಕ್ತಿಯ ಸರ್ವತೋಮುಖ ಬೆಳವಣಿಗೆ ಶಿಕ್ಷಣದಿಂದ ಮಾತ್ರ ಸಾಧ್ಯ.ಶಿಕ್ಷಣಕ್ಕೆ ಪರಿಪೂರ್ಣತೆ ನೀಡುವುದು ಉನ್ನತ ಶಿಕ್ಷಣ.ದೇಶಾದ್ಯಂತ ಉನ್ನತ ಶಿಕ್ಷಣದಲ್ಲಿ ವ್ಯಾಪಕ ಬದಲಾವಣೆಯ ಅಗತ್ಯವಿದೆ.ವಿದ್ಯಾರ್ಥಿಯ ಬದುಕಿನಲ್ಲಿ ನೈತಿಕ ಶಿಕ್ಷಣ ನೀಡುವಲ್ಲಿ ಗುರುವಿನ ಪಾತ್ರ ಅತಿ ಮುಖ್ಯವಾದುದು ಎಂದು ಉಜಿರೆ ಎಸ್.ಡಿ.ಎಂ.ಶಿಕ್ಷಣ ಸಂಸ್ಥೆಯ ಕಾರ್ಯದರ್ಶಿ ಡಾ|ಸತೀಶ್ಚಂದ್ರ ಎಸ್.ನುಡಿದರು.ಆ.19ರಂದು ಉಜಿರೆಯ ಶ್ರೀ ಸಿದ್ದವನ ಗುರುಕುಲದಲ್ಲಿ ಕರ್ನಾಟಕ ರಾಜ್ಯ ಮಹಾವಿದ್ಯಾಲಯ ಶಿಕ್ಷಕ ಸಂಘ (ರಿ )ಮಂಗಳೂರು ವಿಶ್ವವಿದ್ಯಾಲಯ ವಿಭಾಗ ಹಾಗು ಉಜಿರೆಯ ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಸ್ವಾಯತ್ತ ಕಾಲೇಜಿನ ಸಹಯೋಗದೊಂದಿಗೆ ನಡೆದ ಪ್ರೇರಣಾ ದಿನದಂಗವಾಗಿ ಅಧ್ಯಾಪಕ ಭೂಷಣ ಪ್ರಶಸ್ತಿ ಪ್ರದಾನ ಸಮಾರಂಭವನ್ನು ದೀಪ ಪ್ರಜ್ವಲಿಸಿ ಉದ್ಘಾಟಿಸಿ ಮಾತನಾಡಿದರು.
ಉಜಿರೆ ಎಸ್.ಡಿ.ಎಂ.ಕಾಲೇಜು ಪ್ರಾಚಾರ್ಯ ಡಾ|ಬಿ. ಎ .ಕುಮಾರ ಹೆಗ್ಡೆ ಅಧ್ಯಕ್ಷತೆ ವಹಿಸಿದ್ದರು.ಕರ್ನಾಟಕ ರಾಜ್ಯ ಮಹಾವಿದ್ಯಾಲಯ ಶಿಕ್ಷಕ ಸಂಘದ ರಾಜ್ಯಾಧ್ಯಕ್ಷ ಡಾ|ಗುರುನಾಥ ಬಡಿಗೇರ ಆಶಯ ಮಾತುಗಳನ್ನಾಡಿ ಸಂಘವು ರಾಜ್ಯ ಮಟ್ಟದಲ್ಲಿ ಪ್ರತಿ ವರ್ಷ ವಿವೇಕಾನಂದ ಜಯಂತಿ, ಸುಭಾಸಚಂದ್ರ ಬೋಸ್ ಜಯಂತಿ, ಕಾಯಕ ಸಂಕಲ್ಪ ದಿನ, ಗುರುವಂದನಾ ಹಾಗೂ ಪ್ರೇರಣಾ ದಿನಾಚರಣೆಯನ್ನು ಆಚರಿಸಿಕೊಂಡು ಬರುತ್ತಿದೆ. ಪ್ರೇರಣಾ ದಿನದಂದು ಶಿಕ್ಷಣ ಕ್ಷೇತ್ರದಲ್ಲಿ ಗಣನೀಯ ಸಾಧನೆಗೈದ ಶಿಕ್ಷಕರನ್ನು ಗುರುತಿಸಿ ಅವರಿಗೆ ಅಧ್ಯಾಪಕ ಭೂಷಣ ಪ್ರಶಸ್ತಿ ನೀಡಿ ಗೌರವಿಸಲಾಗುತ್ತಿದೆ ಎಂದರು.ರಾಜ್ಯ ಜಂಟಿ ಪ್ರಧಾನ ಕಾರ್ಯದರ್ಶಿ ಡಾ|ಮಾಧವ ಎಂ.ಕೆ. ಪ್ರಶಸ್ತಿ ಪುರಸ್ಕೃತರ ವಿಶೇಷ ಸಾಧನೆಯನ್ನು ಪರಿಚಯಿಸಿ, ದಕ್ಷಿಣ ಕನ್ನಡ, ಉಡುಪಿ ಮತ್ತು ಕೊಡಗು ಜಿಲ್ಲಾ ವ್ಯಾಪ್ತಿಯ ಮಂಗಳೂರು ವಿವಿ.ಯಲ್ಲಿ , ಶಿಕ್ಷಣ ಕ್ಷೇತ್ರದಲ್ಲಿ ಗಣನೀಯ ಸೇವೆ ಸಲ್ಲಿಸಿದವರನ್ನು ಗುರುತಿಸಿ ಗೌರವಿಸಲಾಗುತ್ತಿದೆ ಎಂದರು.
ಅಧ್ಯಾಪಕ ಭೂಷಣ ಪ್ರಶಸ್ತಿ ಪ್ರದಾನ: ಇದೇ ಸಂದರ್ಭದಲ್ಲಿ ರಾಜ್ಯದ ವಿವಿಧ ಕ್ಷೇತ್ರಗಳಲ್ಲಿ ವಿಶೇಷ ಸಾಧನೆಗೈದ ಐವರು ಶಿಕ್ಷಕರನ್ನು ಅಧ್ಯಾಪಕ ಭೂಷಣ ಪ್ರಶಸ್ತಿ ನೀಡಿ ಗೌರವಿಸಿ, ಅಭಿನಂದಿಸಲಾಯಿತು.
ಅತ್ತ್ಯುತ್ತಮ ಆಡಳಿತಗಾರರಾಗಿ ಕಾಲೇಜು ಶಿಕ್ಷಣ ಇಲಾಖೆಯ ವಿಶ್ರಾಂತ ಹೆಚ್ಚುವರಿ ನಿರ್ದೇಶಕ ಪ್ರೊ.ಎಸ್ ರಾಜಶೇಖರ ಹೆಬ್ಬಾರ್, ಅತ್ತ್ಯುತ್ತಮ ಸಂಶೋಧಕರಾಗಿ ಮಂಗಳೂರು ವಿ.ವಿ. ವಸ್ತು ವಿಜ್ಞಾನ ವಿಭಾಗದ ಅಧ್ಯಕ್ಷ ಹಾಗು ಪ್ರಾಧ್ಯಾಪಕ ಪ್ರೊ.ಮಂಜುನಾಥ ಪಟ್ಟಾಭಿ, ಅತ್ತ್ಯುತ್ತಮ ಶಿಕ್ಷಕರಾಗಿ ಮಡಿಕೇರಿ ಫೀಲ್ಡ್ ಮಾರ್ಷಲ್ ಕಾರ್ಯಪ್ಪ ಕಾಲೇಜಿನ ಭೌತ ಶಾಸ್ತ್ರ ವಿಭಾಗದ ಪ್ರಾಧ್ಯಾಪಕ ಮತ್ತು ಮುಖ್ಯಸ್ಥ ಪ್ರೊ.ನಾಗರಾಜ ಕೆ.ಪಿ, ಅತ್ತ್ಯುತ್ತಮ ಗ್ರಂಥಪಾಲಕಿಯಾಗಿ ಮಂಗಳೂರು ಸಂತ ಆಗ್ನೆಸ್ ಸ್ವಾಯತ್ತ ಕಾಲೇಜಿನ ಗ್ರಂಥ ಪಾಲಕಿ ಡಾ|ವಿಶಾಲ ಬಿ.ಕೆ. ಮತ್ತು ಅತ್ತ್ಯುತ್ತಮ ದೈಹಿಕ ಶಿಕ್ಷಣ ನಿರ್ದೇಶಕರಾಗಿ ಉಡುಪಿ ಅಜ್ಜರಕಾಡು ಡಾ|ಜಿ.ಶಂಕರ್ ಸರ್ಕಾರೀ ಮಹಿಳಾ ಪ್ರಥಮ ದರ್ಜೆ ಕಾಲೇಜು ಮತ್ತು ಪಿ.ಜಿ. ಅಧ್ಯಯನ ಕೇಂದ್ರದ ದೈಹಿಕ ಶಿಕ್ಷಣ ವಿಭಾಗದ ಡಾ|ರಾಮಚಂದ್ರ ಪಾಟ್ಕರ್ ಅವರಿಗೆ ಸಮಾರಂಭದ ಗಣ್ಯ ಅತಿಥಿಗಳು ಪ್ರಶಸ್ತಿ ಪ್ರದಾನಗೈದರು.ಪ್ರಶಸ್ತಿ ಪುರಸ್ಕೃತರು ತಮ್ಮ ಅನಿಸಿಕೆ ವ್ಯಕ್ತಪಡಿಸಿ ತಮಗೆ ದೊರೆತ ಪ್ರಶಸ್ತಿ ಇತರ ಶಿಕ್ಷಕರಿಗೆ ಆದರ್ಶ ಪ್ರೇರಣೆಯಾಗಿದೆ ಎಂದು ಕೃತಜ್ಞತೆ ಸಲ್ಲಿಸಿದರು.
ಸಂಘದ ಅಧ್ಯಕ್ಷೆ ಡಾ|ಸುಧಾ ಎಂ. ವೈದ್ಯ ಸ್ವಾಗತಿಸಿ, ಪ್ರಸ್ತಾವಿಸಿದರು.ವೇದಿಕೆಯಲ್ಲಿ ಮಗಳೂರು ವಿ.ವಿ.ಸಿಂಡಿಕೇಟ್ ಸದಸ್ಯ ಡಾ|ಕೆ.ಸಿ.ಮಹದೇಶ, ಕಾರ್ಯದರ್ಶಿ ವೆಂಕಟೇಶ ನಾಯಕ್, ಕೋಶಾಧಿಕಾರಿ ಆಶಾಲತಾ, ಪ್ರೇರಣಾ ದಿನದ ಸಂಯೋಜಕಿ ಡಾ|ರತಿ ಮೊದಲಾದವರು ಉಪಸ್ಥಿತರಿದ್ದರು.