Site icon Suddi Belthangady

ಯಕ್ಷಾವತರಣ 4 ಯಕ್ಷಸಾಂಗತ್ಯ ಸಪ್ತಕ ಸಮಾರೋಪ- ಯಕ್ಷಗಾನದಿಂದ ಸಂಸ್ಕೃತಿಯ ವಿಸ್ತರಣೆ: ಉಮಾಕಾಂತ ಭಟ್

ಬೆಳ್ತಂಗಡಿ: ಯಕ್ಷಾವತರಣ ಸಪ್ತಾಹದ ಮೂಲಕ ಕೇವಲ ಕಲೆಯ ವಿಸ್ತರಣೆ ಮಾತ್ರವಲ್ಲ, ಸಂಸ್ಕೃತಿ ಹಾಗೂ ಸಂಸ್ಕಾರದ ವಿಸ್ತರಣೆ ಆಗಿದೆ ಎಂದು ಹಿರಿಯ ಯಕ್ಷಗಾನ ಕಲಾವಿದ ವಿದ್ಯಾವಾಚಸ್ಪತಿ ಉಮಾಕಾಂತ ಭಟ್ ಕೆರೇಕ್ಕೆ ಹೇಳಿದರು.

ಕುರಿಯ ವಿಠಲ ಶಾಸ್ತ್ರಿ ಸಾಂಸ್ಕೃತಿಕ ಪ್ರತಿಷ್ಠಾನ, ಉಜಿರೆ, ಶ್ರೀ ಸುಬ್ರಹ್ಮಣ್ಯ ಸ್ಥಾನಿಕ ಬ್ರಾಹ್ಮಣ ಸಭಾ ಹಾಗೂ ರೋಟರಿ ಕ್ಲಬ್‌ ಬೆಳ್ತಂಗಡಿ ಇವರ ಸಹಯೋಗದಲ್ಲಿ ನಡೆದ ತಾಳಮದ್ದಳೆ ಸಪ್ತಾಹ ‘ಯಕ್ಷಾವತರಣ’ ಇದರ ಸಮಾರೋಪ ಸಮಾರಂಭದಲ್ಲಿ ಗೌರವ ಸ್ವೀಕರಿಸಿ ಅವರು ಮಾತನಾಡಿದರು.ದಕ್ಷಿಣ ಕನ್ನಡದ ಕಲಾವಿದರ ಔದಾರ್ಯ ಹಾಗೂ ಪ್ರೀತಿ-ವಿಶ್ವಾಸ ದೊಡ್ಡದು. ಅವರ ಹೃದಯ ವೈಶಾಲ್ಯದ ಎದುರು ತಲೆ ಬಾಗಿದ್ದೇನೆ. ತಮ್ಮ ಜಿಲ್ಲೆಯ ಹೊರಗಿನವರನ್ನೂ ಅವರು ಒಳಗೊಳ್ಳುವ ಪರಿ ಅನುಸರಣೀಯ ಎಂದರು.

ಕುರಿಯ ವಿಠಲ ಶಾಸ್ತ್ರಿ ಸಾಂಸ್ಕೃತಿಕ ಪ್ರತಿಷ್ಠಾನದ ಸಂಚಾಲಕರಾದ ಉಜಿರೆ ಅಶೋಕ ಭಟ್ ಮಾತನಾಡಿ, ಉಮಾ ಕಾಂತ ಭಟ್ಟರು ದೇಶದ ವಿದ್ವಾಂಸರ ಸಾಲಿನಲ್ಲಿ ಮೊದಲ ಎಣಿಕೆಯಲ್ಲಿರುವವರು, ಅವರ ಅರ್ಥ ಪ್ರಸ್ತುತಿಯನ್ನು ಕೇಂದ್ರೀಕರಿಸಿ ಸಪ್ತಾಹವನ್ನು ಆಯೋಜಿಸುವ ಮೂಲಕ ಪ್ರತಿಷ್ಠಾನವು ದಾಖಲೀಕರಣದ ಕೆಲಸ ಮಾಡಿದೆ ಎಂದರು.ಉಮಾಕಾಂತ ಭಟ್ಟರು ಅರ್ಥಗಾರಿಕೆಯ ವ್ಯಾಪ್ತಿಯನ್ನು ವಿಸ್ತರಿಸಿದ್ದಾರೆ. ಅವರ ಅರ್ಥಗಾರಿಕೆ ಪ್ರವಚನ ಅಲ್ಲ.ಕಾವ್ಯ ಅವರಂತೆ ಪುರಾಣ ಶಾಸ್ತ್ರಗಳ ಕುರಿತು ಇದಮಿತ್ಥಂ ಎಂದು ಹೇಳಬಲ್ಲವರು ಇಂದು ಆಪರೂಪವಾಗಿದ್ದಾರೆ ಎಂದರು.

ಉದ್ಯಮಿ ಕೆ. ಅನಂತಕೃಷ್ಣರಾವ್, ರೋಟರಿ ಕ್ಲಬ್‌ ಅಧ್ಯಕ್ಷ ಅನಂತ ಭಟ್, ಮಚ್ಚಿಮಲೆ, ಕಾರ್ಯದರ್ಶಿ ವಿದ್ಯಾಕುಮಾರ್ ಕಾಂಚೋಡು ಉಪಸ್ಥಿತರಿದ್ದರು.

ಯಕ್ಷಾವತರಣದ ಕೊನೆಯ ದಿನದ ಅಂಗವಾಗಿ `ಕೃಷ್ಣ ಪರಂಧಾಮ’ ತಾಳಮದ್ದಳೆ ನಡೆಯಿತು, ಕೊಳಗಿ ಕೇಶವ ಹೆಗಡೆ, ಕೆ. ಜೆ. ಸುಧೀಂದ್ರ, ಕೆ. ಜಿ. ದೀಪ್ತ ಹಿಮ್ಮೇಳದಲ್ಲಿ ಸಹಕರಿಸಿದರು. ಅರ್ಥಧಾರಿಗಳಾಗಿ ಉಮಾಕಾಂತ ಭಟ್ ಕೆರೇಕೈ (ಕೃಷ್ಣ), ಉಜಿರೆ ಅಶೋಕ ಭಟ್ (ದೂರ್ವಾಸ), ಸಿಬಂತಿ ಪದ್ಮನಾಭ (ಬಲರಾಮ), ಶಶಾಂಕ ಅರ್ನಾಡಿ (ಜಾ) ಹಾಗೂ ಆರತಿ ಪಟಮೆ (ಅರ್ಜುನ) ಭಾಗವಹಿಸಿದರು.

Exit mobile version