Site icon Suddi Belthangady

ಉಜಿರೆ: ಎಸ್.ಡಿ.ಎಂ. ಕಾಲೇಜಿನಲ್ಲಿ ‘ಎಂ ಜಿ ಐ ಆರ್ ಐ ತಂತ್ರಜ್ಞಾನ ಆಧಾರಿತ ಉದ್ಯಮಶೀಲತೆ ಅಭಿವೃದ್ಧಿಯ ಸಾಧ್ಯತೆಗಳು’ ರಾಷ್ಟ್ರಮಟ್ಟದ ಜಾಗೃತಿ ಕಾರ್ಯಾಗಾರ-ಯುವಜನತೆ ಉದ್ಯಮಶೀಲತೆ ಕಡೆ ಗಮನ ನೀಡುವುದು ಅಗತ್ಯ: ಜನಾರ್ದನ್

ಉಜಿರೆ:ಔಪಚಾರಿಕ ಶಿಕ್ಷಣವೇ ಅಂತಿಮವಲ್ಲ.ದೇಶದ ಯುವಜನತೆ ತಮ್ಮ ಶಕ್ತಿಯನ್ನು ಗುರುತಿಸಿಕೊಂಡು ಉದ್ಯಮಶೀಲತೆ ಕಡೆ ಗಮನ ನೀಡುವ ಅಗತ್ಯವಿದೆ ಎಂದು ಬೆಳ್ತಂಗಡಿಯ ‘ಸಿರಿ’ ಗ್ರಾಮೋದ್ಯೋಗ ಸಂಸ್ಥೆಯ ವ್ಯವಸ್ಥಾಪಕ ನಿರ್ದೇಶಕ ಜನಾರ್ದನ್ ಕೆ.ಎನ್.ಅವರು ಕರೆ ನೀಡಿದರು.ಉಜಿರೆ ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಕಾಲೇಜಿನ ಸೆಮಿನಾರ್ ಹಾಲ್ ನಲ್ಲಿ ಆ.12ರಂದು‘ಎಂ ಜಿ ಐ ಆರ್ ಐ ತಂತ್ರಜ್ಞಾನ ಆಧಾರಿತ ಉದ್ಯಮಶೀಲತೆ ಅಭಿವೃದ್ಧಿಯ ಸಾಧ್ಯತೆಗಳು’ ಕುರಿತು ಒಂದು ದಿನದ ರಾಷ್ಟ್ರಮಟ್ಟದ ಜಾಗೃತಿ ಕಾರ್ಯಾಗಾರವನ್ನು ಉದ್ಘಾಟಿಸಿ ಅವರು ಮಾತನಾಡಿದರು.

ವರ್ಧಾ (ಮಹಾರಾಷ್ಟ್ರ)ದ ಮಹಾತ್ಮ ಗಾಂಧಿ ಇನ್ಸ್ಟಿಟ್ಯೂಟ್ ಫಾರ್ ರೂರಲ್ ಇಂಡಸ್ಟ್ರಿಯಲೈಸೇಶನ್ (ಎಂ ಜಿ ಐ ಆರ್ ಐ) ಸಂಸ್ಥೆಯ ವತಿಯಿಂದ ಕಾಲೇಜಿನ ಎಸ್.ಡಿ.ಎಂ.ರೋಟರಿ ಕರಿಯರ್ ಗೈಡೆನ್ಸ್ ಮತ್ತು ಪ್ಲೇಸ್ಮೆಂಟ್ ಸೆಂಟರ್ ಹಾಗೂ ಎಸ್.ಡಿ.ಎಂ. ತಾಂತ್ರಿಕ ಮಹಾವಿದ್ಯಾಲಯ (ಎಸ್.ಡಿ.ಎಂ.ಐ.ಟಿ., ಉಜಿರೆ) ಸಹಯೋಗದಲ್ಲಿ ಕಾರ್ಯಕ್ರಮ ಆಯೋಜಿಸಲಾಗಿತ್ತು.ದೇಶಕ್ಕೆ ಸ್ವಾತಂತ್ರ್ಯ ಬಂದು ಎಪ್ಪತ್ತೈದು ವರ್ಷಗಳಾದರೂ ಕೂಡ ಉದ್ಯಮಶೀಲತೆಗಿಂತ ಔಪಚಾರಿಕ ಶಿಕ್ಷಣಕ್ಕೇ ಒತ್ತು ನೀಡಲಾಗುತ್ತಿದೆ. ಆದರೆ, ನಿರುದ್ಯೋಗ ತಡೆಯುವ ನಿಟ್ಟಿನಲ್ಲಿ ಉದ್ಯಮಶೀಲತೆಗೆ ಒತ್ತು ನೀಡುವ ಅಗತ್ಯವಿದೆ. ಯುವಜನತೆ ತಮ್ಮ ಸಾಮರ್ಥ್ಯ ಅರಿತು, ಅದನ್ನು ಆದಾಯ ಗಳಿಕೆಗೆ ಬಳಸಿಕೊಳ್ಳಬೇಕು. ಭಾರತದಂಥ ವಿಶಾಲ ಜನಸಂಖ್ಯೆಯುಳ್ಳ ದೇಶದಲ್ಲಿ ಖಾದಿ ಉದ್ಯಮದಂಥ ಕ್ಷೇತ್ರಗಳಲ್ಲಿ ಉತ್ತಮ ಅವಕಾಶಗಳಿವೆ ಎಂದು ಅವರು ಅಭಿಪ್ರಾಯಪಟ್ಟರು.“ಹಳ್ಳಿಗಳ ದೇಶವಾದ ಭಾರತದಲ್ಲಿ ಉದ್ಯೋಗ ಅರಸಿ ನಗರಗಳಿಗೆ ವಲಸೆ ಹೋಗುವ ಪದ್ಧತಿ ಆರಂಭವಾಯಿತು. ಪ್ರಸ್ತುತ ಉದ್ಯೋಗಕ್ಕೆ ತೀವ್ರ ಸ್ಪರ್ಧೆ, ಪೈಪೋಟಿ ಇದೆ.

ನಿರುದ್ಯೋಗ ಸಮಸ್ಯೆ ಉಳಿದುಕೊಂಡಿದೆ. ಹೀಗಿರುವಾಗ, ನವ್ಯೋದ್ಯಮದಲ್ಲಿ ಯಶಸ್ಸು ಸಾಧಿಸಬಹುದಾಗಿದೆ. ನಮ್ಮ ಪ್ರತಿಭೆ, ಅಭಿರುಚಿಯನ್ನು ಗುರುತಿಸಿಕೊಂಡು, ಆ ಮೂಲಕ ಉದ್ಯಮಶೀಲರಾಗಬಹುದು” ಎಂದು ಅವರು ತಿಳಿಸಿದರು.“ಹಾಗೆಂದು ಉದ್ಯಮವೆಂದರೆ ಹೂವಿನ ಹಾಸಿಗೆಯಲ್ಲ. ಅಲ್ಲಿ ಸಮಸ್ಯೆ, ಸವಾಲುಗಳಿವೆ. ಆದರೆ ಅವಕಾಶಗಳಿವೆ. ಸ್ಪಷ್ಟವಾದ ಗುರಿ ಹೊಂದಿ, ಸವಾಲು ಸ್ವೀಕರಿಸಿ, ಕಠಿಣ ಹಾದಿ ಕ್ರಮಿಸಿ ಸಾಧಿಸುವ ಛಾತಿಯ ಅಗತ್ಯವಿದೆ. ನಮ್ಮ ಸಾಮರ್ಥ್ಯ ಅರಿತುಕೊಂಡು, ದೋಷ ಸರಿಪಡಿಸಿಕೊಂಡು, ಅಗತ್ಯ ತರಬೇತಿ ಪಡೆದುಕೊಂಡು ಮುಂದುವರಿಯಬೇಕು” ಎಂದು ಅವರು ಕಿವಿಮಾತು ಹೇಳಿದರು.ಗ್ರಾಮೀಣ ಯುವಜನತೆಗೆ ಉದ್ಯಮಶೀಲತೆ ತರಬೇತಿ ನೀಡುವ ನಿಟ್ಟಿನಲ್ಲಿ ಧರ್ಮಸ್ಥಳದ ಧರ್ಮಾಧಿಕಾರಿ ಡಾ. ಡಿ. ವೀರೇಂದ್ರ ಹೆಗ್ಗಡೆ ಅವರು ಸ್ಥಾಪಿಸಿದ ರುಡ್’ಸೆಟ್ ಸಂಸ್ಥೆ ದೇಶದಲ್ಲಿಯೇ ಮಾದರಿ ಸಂಸ್ಥೆಯಾಗಿದೆ. ಅದರಿಂದ ಪ್ರೇರಣೆ ಪಡೆದು ಆರ್’ಸೆಟಿ ಸಂಸ್ಥೆಗಳು ದೇಶಾದ್ಯಂತ ಕಾರ್ಯಾಚರಿಸುತ್ತಿವೆ. ಇವುಗಳು ಸಾಫ್ಟ್ ಸ್ಕಿಲ್ ತರಬೇತಿ ನೀಡಿ ಉದ್ಯಮಶೀಲತೆಗೆ ನೆರವು ನೀಡುತ್ತಿವೆ ಎಂದ ಅವರು,“ಇದಕ್ಕೆ ಪೂರಕವಾಗಿ ಈ ಕಾರ್ಯಾಗಾರ ಶ್ಲಾಘನೀಯವಾಗಿದೆ” ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.

ಕಾರ್ಯಕ್ರಮದ ಮುಖ್ಯ ಅತಿಥಿ, ಎಂ.ಜಿ.ಐ.ಆರ್.ಐ. ಸಂಸ್ಥೆಯ ನಿರ್ದೇಶಕ ಡಾ. ಅಶುತೋಷ್ ಎ. ಮುರ್ಕುಟೆ ಅವರು ಮಾತನಾಡಿ, ತಂತ್ರಜ್ಞಾನ ಮತ್ತು ಪರಿಕಲ್ಪನೆಗಳ ಸಮರ್ಪಕ ಅನುಷ್ಠಾನದಿಂದ ಸಾಧನೆ ಮಾಡಲು ಸಾಧ್ಯ ಎಂದರು.“ಹೆಗ್ಗಡೆ ಅವರು ಉದ್ಯೋಗ ಸೃಷ್ಟಿಯಲ್ಲಿ ತಮ್ಮ ಸಂಪೂರ್ಣ ಜೀವನ ಕಳೆದಿದ್ದಾರೆ. ಎಂ.ಜಿ.ಐ.ಆರ್.ಐ. ಮತ್ತು ಈ ರೀತಿಯ ಇತರ ಸರಕಾರಿ ಸಂಸ್ಥೆಗಳ ಉದ್ದೇಶ ಕೂಡ ಯಶಸ್ವಿ ವ್ಯಕ್ತಿಗಳು, ಯಶಸ್ವೀ ನವ್ಯೋದ್ಯಮಿಗಳನ್ನು ಸೃಷ್ಟಿಸಿ, ಆ ಮೂಲಕ ದೇಶಕ್ಕೆ ಕೊಡುಗೆ ನೀಡುವುದಾಗಿದೆ” ಎಂದರು.ಮತ್ತೋರ್ವ ಅತಿಥಿ, ಎಸ್.ಡಿ.ಎಂ. ಶಿಕ್ಷಣ ಸಂಸ್ಥೆಗಳ ಕಾರ್ಯದರ್ಶಿ ಡಾ. ಸತೀಶ್ಚಂದ್ರ ಎಸ್. ಅವರು ಮಾತನಾಡಿ,“ಗಾಂಧೀಜಿ ಅವರ ಮಾತಿನಂತೆ, ಹಳ್ಳಿಗಳ ಅಭಿವೃದ್ಧಿಯಿಂದ ನೈಜ ಭಾರತದ ನಿರ್ಮಾಣ ಸಾಧ್ಯ. ಎಂ.ಜಿ.ಐ.ಆರ್.ಐ. ಸಂಸ್ಥೆ ಈ ನಿಟ್ಟಿನಲ್ಲಿ ಕೆಲಸ ಮಾಡುತ್ತಿದೆ. ಗ್ರಾಮೀಣ ಅಭಿವೃದ್ಧಿ ಕುರಿತಂತೆ ನಮ್ಮ ಯುವಜನತೆಯನ್ನು ತರಬೇತುಗೊಳಿಸುವ ನಿಟ್ಟಿನಲ್ಲಿ ನಮ್ಮ ಶಿಕ್ಷಣ ಸಂಸ್ಥೆಗಳು ಕೆಲಸ ಮಾಡುತ್ತಿವೆ” ಎಂದರು.

ಉಜಿರೆ ಎಸ್.ಡಿ.ಎಂ. ಕಾಲೇಜಿನ ಪ್ರಾಂಶುಪಾಲ ಡಾ. ಬಿ.ಎ. ಕುಮಾರ ಹೆಗ್ಡೆ ಅಧ್ಯಕ್ಷತೆ ವಹಿಸಿ ಮಾತನಾಡಿ, ಸಿರಿ ಗ್ರಾಮೋದ್ಯೋಗ ಸಂಸ್ಥೆ, ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯಂತಹ ಸಂಸ್ಥೆಗಳು ಗ್ರಾಮೀಣ ಅಭಿವೃದ್ಧಿಯಲ್ಲಿ ಹಲವು ಪ್ರಯೋಗಗಳನ್ನು ಕೈಗೊಂಡಿವೆ ಎಂದರು.“ಕೊರೊನಾ ಸಾಂಕ್ರಾಮಿಕದ ಬಳಿಕ ಹರ್ಬಲ್ ಉತ್ಪನ್ನಗಳಿಗೆ ಬೇಡಿಕೆ ಹೆಚ್ಚಾಗಿದ್ದು, ಪಶ್ಚಿಮ ಘಟ್ಟಗಳ ತಪ್ಪಲಿನಲ್ಲಿರುವ ನಾವು ಈ ನಿಟ್ಟಿನಲ್ಲಿ ಗ್ರಾಮೀಣ ಪ್ರದೇಶಗಳಲ್ಲಿ ಸಾಧ್ಯತೆಗಳನ್ನು ಅನ್ವೇಷಿಸಿ, ಅವಕಾಶ ಸದುಪಯೋಗಪಡಿಸಿಕೊಳ್ಳಲು ಕಾರ್ಯತಂತ್ರ ರೂಪಿಸಿದರೆ ಪ್ರಯೋಜನವಾಗಬಹುದು” ಎಂದು ಅವರು ಸಲಹೆ ನೀಡಿದರು.ಇದೇ ಸಂದರ್ಭದಲ್ಲಿ, ನಿವೃತ್ತ ಸೈನಿಕರಾದ ಸುಬೇದಾರ್ ಮೇಜರ್ ಪಿ. ಜಗನ್ನಾಥ ಶೆಟ್ಟಿ ಹಾಗೂ ಸುಬೇದಾರ್ ಗೋಪಾಲಕೃಷ್ಣ ಕಾಂಚೋಡು ಅವರನ್ನು ಕೇಂದ್ರ ಸರಕಾರದ ‘ಮೇರಿ ಮಾಟಿ, ಮೇರಾ ದೇಶ್’ ಅಭಿಯಾನದ ಅಂಗವಾಗಿ ಸಮ್ಮಾನಿಸಲಾಯಿತು. ಅತಿಥಿ ಡಾ. ಅಶುತೋಷ್ ಎ. ಮುರ್ಕುಟೆ ಅವರನ್ನು ಗೌರವಿಸಲಾಯಿತು.

ವೇದಿಕೆಯಲ್ಲಿ ಉಜಿರೆ ಎಸ್.ಡಿ.ಎಂ.ಐ.ಟಿ. ಪ್ರಾಂಶುಪಾಲ ಡಾ.ಅಶೋಕ್ ಕುಮಾರ್ ಟಿ. ಹಾಗೂ ಉಜಿರೆ ಎಸ್.ಡಿ.ಎಂ. ಕಾಲೇಜಿನ ನೇಮಕಾತಿ ಅಧಿಕಾರಿ ಡಾ. ನಾಗರಾಜ್ ಪೂಜಾರಿ ಉಪಸ್ಥಿತರಿದ್ದರು.ಎಂ.ಜಿ.ಐ.ಆರ್.ಐ. ಸಂಸ್ಥೆಯ ಪ್ರಧಾನ ವೈಜ್ಞಾನಿಕ ಅಧಿಕಾರಿ (ಖಾದಿ ಮತ್ತು ಜವಳಿ) ಎಚ್.ಡಿ. ಸಿನ್ನೂರ್, ನಿವೃತ್ತ ಉಪ ನಿರ್ದೇಶಕ (ರೂರಲ್ ಕ್ರಾಫ್ಟ್ & ಎಂಜಿನಿಯರಿಂಗ್) ರವಿ ಕುಮಾರ್ ಕಂದಸಾಮಿ, ಪ್ರಧಾನ ವೈಜ್ಞಾನಿಕ ಅಧಿಕಾರಿ (ರೂರಲ್ ಎನರ್ಜಿ & ಇನ್ಫ್ರಾಸ್ಟ್ರಕ್ಚರ್) ಸಚಿನ್ ರಾವುತ್, ತಾಂತ್ರಿಕ ಸಹಾಯಕ (ಜೈವಿಕ ಸಂಸ್ಕರಣೆ & ಹರ್ಬಲ್) ಡಾ. ಜೈಕಿಶೋರ್ ಚಂಗನಿ ಹಾಗೂ ಸಹಾಯಕ ನಿರ್ದೇಶಕ & ರಾಜ್ಯ ನೋಡಲ್ ಅಧಿಕಾರಿ (ಪಿಎಂಇಜಿಪಿ ಯೋಜನೆ) ಲಿಂಗದುರೈ ಎಂ. ಸಂಪನ್ಮೂಲ ವ್ಯಕ್ತಿಗಳಾಗಿ ಭಾಗವಹಿಸಿದ್ದರು.ವಾಣಿಜ್ಯ ವಿಭಾಗ ಮುಖ್ಯಸ್ಥೆ ಡಾ. ರತ್ನಾವತಿ ಕೆ., ಪ್ರಾಧ್ಯಾಪಕ ಭಾನುಪ್ರಕಾಶ್ ಬಿ.ಇ., ಅಭಿಜಿತ್ ಬಡಿಗೇರ್ ಹಾಗೂ ಅರ್ಥಶಾಸ್ತ್ರ ವಿಭಾಗ ಮುಖ್ಯಸ್ಥ ಡಾ. ಗಣರಾಜ ಕೆ. ಅತಿಥಿಗಳನ್ನು ಪರಿಚಯಿಸಿದರು.ಕಾರ್ಯಕ್ರಮದ ಸಂಘಟನ ಕಾರ್ಯದರ್ಶಿಗಳಾದ ಹರೀಶ್ ಶೆಟ್ಟಿ ಪ್ರಸ್ತಾವಿಸಿ, ಸ್ವಾಗತಿಸಿ, ಡಾ. ಬಸವ ಟಿ. ವಂದಿಸಿದರು. ಶ್ರಾವ್ಯಾ ಮತ್ತು ಅನನ್ಯ ಜೈನ್ ಕಾರ್ಯಕ್ರಮ ನಿರೂಪಿಸಿದರು.

Exit mobile version