Site icon Suddi Belthangady

ತಾಲೂಕು ಆಸ್ಪತ್ರೆಗೆ ಡಿಎಚ್ಓ ಭೇಟಿ

ಬೆಳ್ತಂಗಡಿ ಸಮುದಾಯ ಆಸ್ಪತ್ರೆಯಲ್ಲಿ ಒಂದೂವರೆ ತಿಂಗಳ ಮಗುವೊಂದು ಚಿಕಿತ್ಸೆಗೆ ಸ್ಪಂದಿಸದೇ ಸಾವನ್ನಪ್ಪಿದ್ದು ಮಗುವಿನ ಕುಟುಂಬಸ್ಥರು ಆಸ್ಪತ್ರೆಯ ನಿರ್ಲಕ್ಷ್ಯದಿಂದ ಮಗು ಸಾವನ್ನಪ್ಪಿದೆ ಎಂದು ಆರೋಪ ಮಾಡಿದ್ದರು.

ಈ ಬಗ್ಗೆ ಮಾಹಿತಿ ಪಡೆದುಕೊಂಡ ಬೆಳ್ತಂಗಡಿ ಮಾಜಿ ಶಾಸಕ ವಸಂತ ಬಂಗೇರ ರಾತ್ರೋರಾತ್ರಿ ಆಸ್ಪತ್ರೆಗೆ ಭೇಟಿ ನೀಡಿ ಸಿಬ್ಬಂದಿಗಳನ್ನು ತರಾಟೆಗೆ ತೆಗೆದುಕೊಂಡರಲ್ಲದೇ ಡಿಎಚ್‌ಒ ಅವರನ್ನು ಸಂಪರ್ಕಿಸಿ ಮಗು ಸಾವಿನ ಬಗ್ಗೆ ತನಿಖೆ ನಡೆಸುವಂತೆ ಆಗ್ರಹಿಸಿದರು.ಅ10 ರಂದು ಆಸ್ಪತ್ರೆಗೆ ಭೇಟಿ ನೀಡಿದ ಜಿಲ್ಲಾ ವೈದ್ಯಾಧಿಕಾರಿ ಡಾ.ಕಿಶೋರ್ ಕುಮಾರ್ ಅವರು ಮಗುವಿನ ಪೋಷಕರು ಹಾಗೂ ಚಿಕಿತ್ಸೆ ನೀಡಿದ ಸಿಬ್ಬಂದಿಗಳಲ್ಲಿ ಮಾಹಿತಿ ಪಡೆದುಕೊಂಡರು.ನಂತರ ಮಾಧ್ಯಮದವರೊಂದಿಗೆ ಮಾತನಾಡಿದ ಅವರು ಮಗು ನ್ಯೂಮೋನಿಯದಿಂದ ಬಳಲುತಿದ್ದು ಆಸ್ಪತ್ರೆಯಲ್ಲಿ ಚಿಕಿತ್ಸೆಗಾಗಿ ದಾಖಲಿಸಿಕೊಂಡಿದ್ದಾರೆ.ಮಕ್ಕಳ ವೈದ್ಯರು ತಪಾಸಣೆ ನಡೆಸಿದ್ದಾರೆ.ಆದರೆ ಮಗು ಚಿಕಿತ್ಸೆಗೆ ಸ್ಪಂದಿಸದೇ ಸಾವನ್ನಪ್ಪಿದೆ.ಇಂಜೆಕ್ಷನ್ ಕೊಟ್ಟು ಸಾವು ಸಂಭವಿಸಿರುವುದಿಲ್ಲ.ಈಗಾಗಲೇ ಮಗುವಿನ ಪೋಷಕರಲ್ಲಿ ಸಂಪೂರ್ಣ ಮಾಹಿತಿಯನ್ನು ಪಡೆದುಕೊಳ್ಳಲಾಗಿದೆ.ಇನ್ನಷ್ಟು ವಿಚಾರಣೆ ನಡೆಸಲಾಗುವುದು ಒಂದು ವೇಳೆ ಆಸ್ಪತ್ರೆಯವರ ನಿರ್ಲಕ್ಷ್ಯದಿಂದ ಈ ಘಟನೆ ನಡೆದಿದ್ದಲ್ಲಿ ತಕ್ಷಣ ಅವರ ಮೇಲೆ ಸೂಕ್ತ ಕ್ರಮ ಕೈಗೊಳ್ಳಲಾಗುವುದು ಎಂದರು.ಆಸ್ಪತ್ರೆಯಲ್ಲಿ ವೈದ್ಯರು ಸಮಯಕ್ಕೆ ಸರಿಯಾಗಿ ಬರುತ್ತಿಲ್ಲ ಬಂದರೂ ತಮ್ಮ ಖಾಸಗಿ ಚಿಕಿತ್ಸಾ ಕೇಂದ್ರಕ್ಕೆ ಬರುವ ಬಗ್ಗೆ ರೋಗಿಗಳಿಗೆ ಸೂಚಿಸುತ್ತಾರೆ ಎಂಬ ಆರೋಪದ ಬಗ್ಗೆ ಉತ್ತರಿಸಿದ ಅವರು ಕೆಲವೊಂದು ವೇಳೆ ಡಾಕ್ಟರ್ ಬರುವಾಗ ಸ್ವಲ್ಪ ತಡವಾಗಬಹುದು. ಆದರೆ ಪ್ರತಿದಿನ ತಡವಾಗಿ ಬರುವಂತಿಲ್ಲ.ಅದೇ ರೀತಿ ಆಸ್ಪತ್ರೆ ಕರ್ತವ್ಯ ಸಮಯ ಖಾಸಗಿ ಆಸ್ಪತ್ರೆ ಸೇರಿದಂತೆ ಇತರ ಕಡೆಗಳಲ್ಲಿ ಕೆಲಸ ನಿರ್ವಹಿಸುವಂತಿಲ್ಲ.ತನ್ನ ಕೆಲಸದ ಅವಧಿ ಮುಗಿದ ನಂತರ ಬೇರೆ ಕಡೆ ಕರ್ತವ್ಯ ನಿರ್ವಹಿಸಬಹುದು.ಒಂದು ವೇಳೆ ಅಂತಹ ಏನಾದರೂ ಸಮಸ್ಯೆ ಕಂಡು ಬಂದಲ್ಲಿ ತಕ್ಷಣ ಜಿಲ್ಲಾ ವೈದ್ಯಾಧಿಕಾರಿಗಳ ಗಮನಕ್ಕೆ ತನ್ನಿ ಎಂದರು.

ಆಸ್ಪತ್ರೆಗೆ ಮಾಜಿ ಶಾಸಕ ವಸಂತ ಬಂಗೇರ ಭೇಟಿ ನೀಡಿ ಡಿಎಚ್‌ಒ ಅವರಿಂದ ಮಾಹಿತಿ ಪಡೆದುಕೊಂಡರು.

ಈ ಸಂದರ್ಭದಲ್ಲಿ ಜಯ ವಿಕ್ರಂ ಕಲ್ಲಾಪು, ಸೇರಿದಂತೆ ಕಾಂಗ್ರೆಸ್ ಪಕ್ಷದ ಪ್ರಮುಖರು ಉಪಸ್ಥಿತರಿದ್ದರು.

Exit mobile version