ಬೆಳ್ತಂಗಡಿ: ಕಳೆದ ವಾರ ಧರ್ಮಸ್ಥಳ ದ್ವಾರದ ಮುಂಭಾಗದ ಬಸ್ ನಿಲ್ದಾಣದಲ್ಲಿ ಮುಸ್ಲಿಂ ಆಟೋ ಚಾಲಕನ ಮೇಲೆ ಅಪರಿಚಿತ ತಂಡ ಹಲ್ಲೆ ಮಾಡಿದ್ದು, ಇದೀಗ ಧರ್ಮಸ್ಥಳ ಸಬ್ ಇನ್ಸ್ಪೆಕ್ಟರ್ ಅನಿಲ್ ಕುಮಾರ್ ಡಿ ತಂಡ ಕಾರ್ಯಾಚರಣೆ ನಡೆಸಿ ಮೂವರು ಆರೋಪಿಗಳನ್ನು ಬಂಧಿಸಿದ್ದಾರೆ.
ಧರ್ಮಸ್ಥಳ ನಿವಾಸಿ ಅವಿನಾಶ್(26), ಧರ್ಮಸ್ಥಳ ನಿವಾಸಿ ನಂದೀಪ್(20), ಪುತ್ತೂರು ತಾಲೂಕಿನ ಉಪ್ಪಿನಂಗಡಿ ನಿವಾಸಿ ಅಕ್ಷತ್(22) ಬಂಧಿತ ಆರೋಪಿಗಳು.ಮೂವರನ್ನು ಬೆಳ್ತಂಗಡಿ ನ್ಯಾಯಾಲಯಕ್ಕೆ ಮೂವರನ್ನು ಹಾಜರುಪಡಿಸಿದ್ದು ಮೂವರಿಗೂ ನ್ಯಾಯಂಗ ಬಂಧನ ವಿಧಿಸಲಾಗಿದೆ. ಉಳಿದ ಆರೋಪಿಗಳಿಗಾಗಿ ಧರ್ಮಸ್ಥಳ ಪೊಲೀಸರು ಶೋಧ ಕಾರ್ಯಾಚರಣೆ ಮುಂದುವರಿಸಿದ್ದಾರೆ.
ಘಟನೆಯ ವಿವರ: ಬೆಂಗಳೂರಿನ ನಿವಾಸಿ ಹಿಂದೂ ವಿದ್ಯಾರ್ಥಿನಿಯೊಬ್ಬಳು ಉಜಿರೆ ಖಾಸಗಿ ಕಾಲೇಜಿನಲ್ಲಿ ವಿದ್ಯಾಭ್ಯಾಸ ಮಾಡಿಕೊಂಡಿದ್ದು ಕಳೆದ ವಾರ ಕಾಲೇಜ್ ಕೊನೆಗೊಂಡಿದ್ದರಿಂದ ಕಳೆದ ಬುಧವಾರ ರಾತ್ರಿ ಬೆಂಗಳೂರು ಊರಿಗೆ ಲಗೇಜ್ ಜೊತೆ ತೆರಳಲು ಉಜಿರೆ ದ್ವಾರದ ಎದುರು ನಿಂತು ಪರಿಚಯಸ್ಥ ಮುಸ್ಲಿಂ ಆಟೋ ಚಾಲಕನಿಗೆ ಕರೆ ಮಾಡಿದ್ದು ಆತ ಬಂದು ಉಜಿರೆಯಿಂದ ಧರ್ಮಸ್ಥಳ ಬಸ್ ನಿಲ್ದಾಣಕ್ಕೆ ಆ.2 ರಂದು ರಾತ್ರಿ ಸುಮಾರು 9 ಗಂಟೆಗೆ ಡ್ರಾಪ್ ಮಾಡಿ ಹೊರಡುವಾಗ ಅಪರಿಚಿತ ಯುವಕರ ತಂಡವೊಂದು “ನಿನಗೆ ಹಿಂದೂ ಯುವತಿಯರೆ ಬೇಕಾ” ಎಂದು ಬೆದರಿಕೆ ಹಾಕಿ ಬೆಳ್ತಂಗಡಿ ತಾಲೂಕಿನ ಉಜಿರೆ ಗ್ರಾಮದ ಅತ್ತಾಜೆ ನಿವಾಸಿ ಅಬ್ದುಲ್ ಹಮೀದ್ ಅವರ ಏಳನೇ ಪುತ್ರ ಆಟೋ ಚಾಲಕ ಮೊಹಮ್ಮದ್ ಅಶೀಕ್(22) ಮೇಲೆ ಹಲ್ಲೆ ನಡೆಸಿದ್ದರು.ಯುವಕ ಬೆಳ್ತಂಗಡಿ ಸರಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ.ಈ ಬಗ್ಗೆ ಧರ್ಮಸ್ಥಳ ಪೊಲೀಸ್ ಠಾಣೆಯಲ್ಲಿ ಕಲಂ 143,147,341,323,504,506, R/W 149 ಅಡಿಯಲ್ಲಿ ಪ್ರಕರಣ ದಾಖಲಾಗಿತ್ತು.