ವೇಣೂರು: ಟೆಲಿಗ್ರಾಂ ಮೂಲಕ ಸಂದೇಶ ಕಳುಹಿಸಿ ಶಿಕ್ಷಕಿಯೊಬ್ಬರನ್ನು ಬೆದರಿಸಿ ಒಂದು ಲಕ್ಷ ರೂ.ವಸೂಲಿಗೈದಿದ್ದ ಆರೋಪಿಯೊಬ್ಬನನ್ನು ವೇಣೂರು ಪೊಲೀಸರು ಸಿನಿಮೀಯ ಶೈಲಿಯಲ್ಲಿ ಸೆರೆ ಹಿಡಿದ ಘಟನೆ ನಡೆದಿದೆ.ಬೆಳ್ತಂಗಡಿ ತಾಲೂಕಿನ ಸುಲ್ಕೇರಿ ಗ್ರಾಮದ ಅಂಟ್ರಿಂಜ ನಿವಾಸಿ ಅಶ್ವತ್ಥ ಹೆಬ್ಬಾರ್ (23) ಬಂಧಿತ ಆರೋಪಿ ಎಂದು ಗುರುತಿಸಲಾಗಿದೆ.
ಬೆಳ್ತಂಗಡಿ ತಾಲೂಕಿನ ಸುಲ್ಕೇರಿ ಗ್ರಾಮದ ನಿವಾಸಿ, ಪೆರೋಡಿತ್ತಾಯ ಕಟ್ಟೆ ಶಾಲೆಯ ಶಿಕ್ಷಕಿ ಜ್ಯೋತಿ ಎಂಬವರಿಗೆ ಮೂರು ಲಕ್ಷ ರೂ.ನೀಡುವಂತೆ ಟೆಲಿಗ್ರಾಂ ನಕಲಿ ಖಾತೆಯ ಮೂಲಕ ವ್ಯಕ್ತಿಯೋರ್ವ ಬೇಡಿಕೆ ಇಟ್ಟು ಹಣ ನೀಡದಿದ್ದರೆ ಪತಿಯನ್ನು ಸಾಯಿಸುವುದಾಗಿ ಬೆದರಿಕೆ ಹಾಕಿದ್ದ.ಈ ಬಗ್ಗೆ ಜ್ಯೋತಿ ವೇಣೂರು ಠಾಣೆಗೆ ದೂರು ನೀಡಿದ್ದರು.
ಪೊಲೀಸರ ಸೂಚನೆಯಂತೆ ಜ್ಯೋತಿ ಒಂದು ಲಕ್ಷ ರೂ.ನೀಡುವುದಾಗಿ ಆರೋಪಿಯನ್ನು ಟೆಲಿಗ್ರಾಂ ಸಂದೇಶ ಕಳುಹಿಸಿ ಒಪ್ಪಿಸಿದ್ದರು. ಅದರಂತೆ ಆರೋಪಿ ಅಳದಂಗಡಿ ಕೆದ್ದು ಸಮೀಪ ಹಣ ಎಸೆದು ಹೋಗುವಂತೆ ಸೂಚಿಸಿದ್ದ. ಬಳಿಕ ಅಲ್ಲಿ ಬೇಡ ಎಂದು ಸಂದೇಶ ರವಾನಿಸಿ ಬೇರೊಂದು ಸ್ಥಳ ಸೂಚಿಸಿದ್ದ.ಹೀಗೆ 3-4 ಬಾರಿ ಸ್ಥಳವನ್ನು ಬದಲಾಯಿಸುತ್ತಾ ಮೆಸೇಜ್ ಮಾಡುತ್ತಿದ್ದ ಎನ್ನಲಾಗಿದೆ.ಹಣವನ್ನು ವಾಹನದಿಂದ ಎಸೆದು ಹೋಗುವಂತೆ ಸೂಚಿಸಿದ್ದ ಎನ್ನಲಾಗಿದೆ.ಅದರಂತೆ ಜ್ಯೋತಿ ಹಣದ ಕಟ್ಟನ್ನು ಎಸೆದು ಹೋಗಿದ್ದರು. ದ್ವಿಚಕ್ರ ವಾಹನದಲ್ಲಿ ಬಂದ ಆರೋಪಿ ಹಣವನ್ನು ಹೆಕ್ಕಿಕೊಳ್ಳುತ್ತಿದ್ದಂತೆ ಮೊದಲೇ ಕಾದು ಕುಳಿತಿದ್ದ ಪೊಲೀಸರು ಆತನನ್ನು ಹಿಡಿಯಲು ಯತ್ನಿಸಿದ್ದಾರೆ.ಆದರೆ ಆರೋಪಿ ದ್ವಿಚಕ್ರ ವಾಹನದಲ್ಲಿ ಪರಾರಿಯಾಗಿದ್ದ. ಪೊಲೀಸರು ತಡರಾತ್ರಿ ಆತನನ್ನು ಗುಂಡೇರಿ ಸಮೀಪ ಬಂಧಿಸಿರುವುದಾಗಿ ತಿಳಿಸಿದ್ದಾರೆ. ಆರೋಪಿಯಿಂದ ಒಂದು ಲಕ್ಷ ರೂ. ನಗದು, ಕೃತ್ಯಕ್ಕೆ ಬಳಸಿದ ಬೈಕನ್ನು ವಶಕ್ಕೆ ಪಡೆದುಕೊಂಡಿದ್ದಾರೆ. ಆರೋಪಿಯನ್ನು ಬೆಳ್ತಂಗಡಿ ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದ್ದು ನ್ಯಾಯಾಲಯವು 15 ದಿನಗಳ ನ್ಯಾಯಾಂಗ ಬಂಧನ ವಿಧಿಸಿದೆ.