Site icon Suddi Belthangady

ಕಸ್ತೂರಿ ರಂಗನ್ ವರದಿ ಸಚಿವರ ಹೇಳಿಕೆಗೆ ದ.ಕ ಮಲೆಕುಡಿಯ ಸಂಘ ತೀವ್ರ ಆಕ್ಷೇಪ

ಬೆಳ್ತಂಗಡಿ: ಕಸ್ತೂರಿ ರಂಗನ್ ವರದಿ ಯಥಾವತ್ತಾಗಿ ಜಾರಿಗೊಳಿಸಲಾಗುವುದು ಎಂದು ಮಾನ್ಯ ಅರಣ್ಯ ಸಚಿವರು ನೀಡಿರುವ ಹೇಳಿಕೆ ಅರಣ್ಯವಾಸಿಗಳಿಗೆ ಮರಣ ಶಾಸನವಾಗಲಿದೆ.ಬುಡಕಟ್ಟು ಸಮುದಾಯದ ಹಕ್ಕುಗಳಿಗಾಗಿ ಇರುವ ಅರಣ್ಯ ಹಕ್ಕು ಕಾಯ್ದೆ ಮತ್ತು ಇತರ ಪರಿಸರ ಸಂಬಂಧಿತ ಕಾನೂನುಗಳು ವ್ಯತಿರಿಕ್ತವಾಗಿದ್ದು ಅನೇಕ ನಿಯಾಮವಳಿಗಳಲ್ಲಿ ಗೊಂದಲ ಇರುವ ಕಾರಣಕ್ಕೆ ಅರಣ್ಯ ಹಕ್ಕು ಕಾಯ್ದೆ ಸಮರ್ಪಕವಾಗಿ ಅನುಷ್ಠಾನ ಆಗುತ್ತಿಲ್ಲ.ಬುಡಕಟ್ಟು ಸಮುದಾಯಗಳನ್ನು ಹೊರತುಪಡಿಸಿ ಅರಣ್ಯವನ್ನು ವ್ಯಾಖ್ಯಾನ ಮಾಡಲು ಸಾಧ್ಯವಿಲ್ಲ. ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು, ಶಾಸಕರು, ಸಂಸದರು ಶಾಸನ ಸಭೆಯಲ್ಲಿ ಶಾಸನ ರಚನೆ ಮಾಡುವಾಗ ಮಾಡಿದ ನಿರ್ಲಕ್ಷ್ಯಕ್ಕೆ ಇಂದಿಗೂ ಬುಡಕಟ್ಟು ಸಮುದಾಯಗಳು ಗೊಂದಲದಲ್ಲಿ ದಿನದೂಡುವಂತಾಗಿದೆ. ರಾಜ್ಯ ಸಭೆಯಲ್ಲಿ ಅರಣ್ಯ ಕಾಯ್ದೆ ಗೆ ತಿದ್ದುಪಡಿ ಮಸೂದೆ ಮಂಡನೆ ಮಾಡುತ್ತಿರುವುದು ಕೂಡ ಅರಣ್ಯ ಹಕ್ಕು ಕಾಯ್ದೆಯನ್ನು ಮೊಟಕುಗೊಳಿಸಿದಂತಾಗುತ್ತದೆ. ಕೇಂದ್ರ ಹಾಗೂ ರಾಜ್ಯ ಸರ್ಕಾರಗಳ ಈ ವಿವೇಚನಾ ರಹಿತ ನಿರ್ಧಾರಗಳನ್ನು ಮಲೆಕುಡಿಯ ಸಂಘ ದಕ್ಷಿಣ ಕನ್ನಡ ಜಿಲ್ಲೆ ತೀವ್ರವಾಗಿ ಖಂಡಿಸುತ್ತದೆ.ಎಂದು ಜಿಲ್ಲಾ ಮಲೆಕುಡಿಯ ಸಂಘದ ಅಧ್ಯಕ್ಷರಾದ ಹರೀಶ್ ಎಳನೀರು ರವರು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Exit mobile version