ಉಜಿರೆ: ದೇಶದ ಆಂತರಿಕ ಸಮಸ್ಯೆಗಳನ್ನು ಹೋಗಲಾಡಿಸಲು ಪ್ರಯತ್ನಿಸುವ ಮೂಲಕ ದೇಶವಾಸಿಗಳು ಕಾರ್ಗಿಲ್ ವಿಜಯ ದಿವಸವನ್ನು ಅರ್ಥಪೂರ್ಣವಾಗಿ ಆಚರಿಸಲು ಸಾಧ್ಯ ಎಂದು ಉಜಿರೆ ಎಸ್.ಡಿ.ಎಂ. ಕಾಲೇಜಿನ ಪ್ರಾಂಶುಪಾಲ ಡಾ. ಬಿ.ಎ. ಕುಮಾರ ಹೆಗ್ಡೆ ಅಭಿಪ್ರಾಯಪಟ್ಟರು.
ಕಾಲೇಜಿನಲ್ಲಿ ಇಂದು (ಜು.26) ರಾಷ್ಟ್ರೀಯ ಸೇವಾ ಯೋಜನೆ (ಎನ್ನೆಸ್ಸೆಸ್) ಘಟಕಗಳು ಹಾಗೂ ಎನ್.ಸಿ.ಸಿ. ಘಟಕಗಳ ಸಹಯೋಗದಲ್ಲಿ ಆಯೋಜಿಸಲಾದ ಕಾರ್ಗಿಲ್ ವಿಜಯ ದಿವಸ ಆಚರಣೆಯನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಶ್ರೀರಾಮಚಂದ್ರನ ಮಾತಿನಂತೆ ತಾಯಿ ಮತ್ತು ಮಾತೃಭೂಮಿ ಸ್ವರ್ಗಕ್ಕಿಂತಲೂ ಮಿಗಿಲು. ಮಾತೃಭೂಮಿಯನ್ನು ಸಂರಕ್ಷಿಸುವ ನಿಟ್ಟಿನಲ್ಲಿ ಪ್ರತಿಯೊಬ್ಬ ನಾಗರಿಕನೂ ಪ್ರಯತ್ನ ಮಾಡಬೇಕು. ದೇಶದ ಗಡಿಯನ್ನು ಸೈನಿಕರು ರಕ್ಷಿಸುತ್ತಿದ್ದು, ಆಂತರಿಕ ರಕ್ಷಣೆಯನ್ನು ದೇಶವಾಸಿಗಳು ಮಾಡಬೇಕಾದ ಅಗತ್ಯವಿದೆ ಎಂದು ಅವರು ಹೇಳಿದರು.
“ನಮ್ಮ ಮಾತೃಭೂಮಿ, ದೇಶದ ಬಗ್ಗೆ ನಮ್ಮಲ್ಲಿ ಅಭಿಮಾನ, ಹೆಮ್ಮೆ ಇರಬೇಕು. ತೀವ್ರ ಪ್ರತಿಕೂಲ ಹವಾಮಾನ ಇರುವ ಪ್ರದೇಶಗಳಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ನಮ್ಮ ಯೋಧರ ತ್ಯಾಗ, ಬಲಿದಾನವನ್ನು ಊಹಿಸಲೂ ಅಸಾಧ್ಯ. ಅಂತಹ ಸೈನಿಕರಿಗೆ ಹಾಗೂ ಅವರ ಕುಟುಂಬಕ್ಕೆ ನೈತಿಕ ಬೆಂಬಲ ನೀಡುವ ಅಗತ್ಯವಿದೆ” ಎಂದು ಅವರು ಹೇಳಿದರು.
ಎನ್ನೆಸ್ಸೆಸ್ ಯೋಜನಾಧಿಕಾರಿ ಡಾ. ಮಹೇಶ್ ಕುಮಾರ್ ಶೆಟ್ಟಿ ಹೆಚ್. ಸ್ವಾಗತಿಸಿ, ಪ್ರಾಸ್ತಾವಿಕವಾಗಿ ಮಾತನಾಡಿದರು.
ಮುಂದಿನ ವರ್ಷ ಕಾರ್ಗಿಲ್ ವಿಜಯ ದಿವಸಕ್ಕೆ ರಜತ ಸಂಭ್ರಮ. ಕಾರ್ಗಿಲ್ ವಿಜಯ ದಿವಸಕ್ಕೆ ಇಪ್ಪತ್ತೈದು ವರ್ಷಗಳು ಪೂರ್ಣಗೊಳ್ಳುವ ಹಿನ್ನೆಲೆಯಲ್ಲಿ ಕಾಲೇಜಿನ ಎನ್ನೆಸ್ಸೆಸ್ ಘಟಕದ ವತಿಯಿಂದ ಇಪ್ಪತ್ತೈದು ಅರ್ಥಪೂರ್ಣ ಕಾರ್ಯಕ್ರಮಗಳನ್ನು ಪ್ರಸಕ್ತ ವರ್ಷದಿಂದ ನಡೆಸಲಾಗುವುದು ಎಂದು ಅವರು ತಿಳಿಸಿದರು.
ಕಾರ್ಗಿಲ್ ವಿಜಯ ದಿವಸ ಕುರಿತಂತೆ ಎನ್.ಸಿ.ಸಿ. ಘಟಕದ ವತಿಯಿಂದ ರಚಿಸಲಾದ ಭಿತ್ತಿಪತ್ರಿಕೆಯನ್ನು ಪ್ರಾಂಶುಪಾಲರು ಅನಾವರಣಗೊಳಿಸಿದರು. ಭಾರತಮಾತೆಯ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡುವ ಮೂಲಕ ಹುತಾತ್ಮ ಯೋಧರಿಗೆ ಭಾವಾಂಜಲಿ ಸಲ್ಲಿಸಲಾಯಿತು.
ಕಾಲೇಜಿನ ಕುಲಸಚಿವ (ಆಡಳಿತ) ಪ್ರೊ. ಶಶಿಶೇಖರ ಎನ್. ಕಾಕತ್ಕರ್, ಕಲಾ ನಿಕಾಯದ ಡೀನ್ ಡಾ. ಶಲೀಪ್ ಕುಮಾರಿ, ಎನ್.ಸಿ.ಸಿ. ಅಧಿಕಾರಿಗಳಾದ ಲೆಫ್ಟಿನೆಂಟ್ ಕಮಾಂಡರ್ ಡಾ. ಶ್ರೀಧರ ಭಟ್, ಲೆಫ್ಟಿನೆಂಟ್ ಭಾನುಪ್ರಕಾಶ್ ಬಿ.ಇ. ಹಾಗೂ ಲೆಫ್ಟಿನೆಂಟ್ ಶುಭಾರಾಣಿ ಪಿ.ಎಸ್., ಎನ್ನೆಸ್ಸೆಸ್ ಯೋಜನಾಧಿಕಾರಿ ಪ್ರೊ. ದೀಪಾ ಆರ್.ಪಿ., ಎನ್ನೆಸ್ಸೆಸ್ ಸ್ವಯಂಸೇವಕರು, ಹಾಗೂ ಎನ್.ಸಿ.ಸಿ. ಕೆಡೆಟ್ ಗಳು ಉಪಸ್ಥಿತರಿದ್ದರು.
ಎನ್ನೆಸ್ಸೆಸ್ ಸ್ವಯಂಸೇವಕಿ ಕುಮಾರಿ ಸಿಂಚನಾ ಕಾರ್ಯಕ್ರಮ ನಿರ್ವಹಿಸಿದರು.