Site icon Suddi Belthangady

ಉಜಿರೆಯಲ್ಲಿ ಕಾರ್ಗಿಲ್ ವಿಜಯ ದಿನಾಚರಣೆ- ಕಾರ್ಗಿಲ್ ಯುದ್ಧವೇ ರೋಚಕ : ವಿಕ್ಟರ್ ಕ್ರಾಸ್ತಾ

ಉಜಿರೆ: ‘ಯುದ್ದವೆಂದರೆ ರೋಚಕವಾದದ್ದು ಅದರಲ್ಲೂ ಕಾರ್ಗಿಲ್ ಯುದ್ಧ ಹಾಗೂ ವಿಜಯವು ಅತಿರೋಚಕ.ಕಾರ್ಗಿಲ್ ಪ್ರದೇಶವು ಯಾವಾಗಲೂ ಹಿಮದಿಂದ ಆವೃತವಾಗಿರುವ ದುರ್ಗಮ ಪ್ರದೇಶ ಹಾಗೆಯೇ ಹಿಮದಿಂದ ಅನೇಕ ಖಾಯಿಲೆಗಳಿಗೆ ಆಸ್ಪದವಿರುವ ಪ್ರದೇಶವೂ ಆಗಿದೆ. ಇಲ್ಲಿ ಪಾಕಿಸ್ತಾನ ಆಕ್ರಮಣ ಮಾಡಿದಾಗ ನಮ್ಮ ಭಾರತೀಯ ಸೇನೆಯ ಯೋಧರು ಹೋರಾಡಿ ವಿಜಯ ಸಂಪಾದಿಸಿದ್ದು ಅವಿಸ್ಮರಣೀಯ ‘ ಎಂದು ಭಾರತೀಯ ಸೇನೆಯ ಮಾಜಿ ಯೋಧ ಉಜಿರೆ ಬಡೆಕೊಟ್ಟುವಿನ ವಿಕ್ಟರ್ ಕ್ರಾಸ್ತಾ ಹೇಳಿದರು.
ಇವರು ಉಜಿರೆಯ ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಪದವಿಪೂರ್ವ ಕಾಲೇಜಿನ ರಾಷ್ಟ್ರೀಯ ಸೇವಾ ಯೋಜನೆಯ ವತಿಯಿಂದ ಉಜಿರೆಯ ಸಿದ್ದವನದಲ್ಲಿ ನಡೆದ ಕಾರ್ಗಿಲ್ ವಿಜಯ ದಿನಾಚರಣೆ ಕಾರ್ಯಕ್ರಮ ಉದ್ದೇಶಿಸಿ ಮಾತನಾಡಿದರು. ಸಿದ್ದವನ ಗುರುಕುಲದ ಪಾಲಕ ಮಾಚಾರು ಕೇಶವ ನಾಯ್ಕ್ ಉಪಸ್ಥಿತರಿದ್ದು ಶುಭ ಹಾರೈಸಿದರು.
ಇವರು ವಿದ್ಯಾರ್ಥಿಗಳಿಗೆ ಸೇನೆಗೆ ಸೇರುವ ಬಗ್ಗೆ ಮಾಹಿತಿ ನೀಡಿದರು. ಸೇನೆಯಲ್ಲಿ ಇದ್ದರೂ ಬೆಲೆ ಇದೆ ಸತ್ತರೂ ಬೆಲೆ ಇದೆ ಎಂಬುದಾಗಿ ಈ ಸಂದರ್ಭದಲ್ಲಿ ಹೇಳಿದರು.
ಅಧ್ಯಕ್ಷತೆ ವಹಿಸಿದ್ದ ಕಾಲೇಜಿನ ಸಹ ಪ್ರಾಚಾರ್ಯ ಡಾ. ರಾಜೇಶ್ ಬಿ. ಅವರು ‘ ಯುವಕರಲ್ಲಿ ದೇಶ ಪ್ರೇಮ ಹೆಚ್ಚಾಗಬೇಕಾದರೆ ಹಾಗೂ ಸೈನಿಕರಿಗೆ ಗೌರವ ಸಲ್ಲಿಸಲು ಕಾರ್ಗಿಲ್ ದಿನದಂತಹ ಕಾರ್ಯಕ್ರಮ ಅಗತ್ಯ ‘ ಎಂದು ನುಡಿದರು.
ಯೋಜನಾಧಿಕಾರಿ ಡಾ.ಪ್ರಸನ್ನಕುಮಾರ ಐತಾಳ್ ಹಾಗೂ ವಿದ್ಯಾರ್ಥಿ ಬೋರೇಶ್ ಅವರು ಕಾರ್ಗಿಲ್ ವಿಜಯ ದಿನದ ಮಹತ್ವದ ಬಗ್ಗೆ ಮಾತನಾಡಿದರು.
ರಾ.ಸೇ ಯೋಜನೆಯ ನಾಯಕ ಸುದರ್ಶನ ನಾಯಕ್ ಸ್ವಾಗತಿಸಿ , ಆದಿತ್ಯ ವಂದಿಸಿದರು.ದಿವಿನ್ ನಿರೂಪಿಸಿದರು.

Exit mobile version