ಬೆಳ್ತಂಗಡಿ: ಧರ್ಮಸ್ಥಳದ ಪಾಂಗಾಳ ನಿವಾಸಿ, ಉಜಿರೆ ಪದವಿ ಪೂರ್ವ ಕಾಲೇಜಿನ ನಮ್ಮ ಸಮಾಜದ ವಿದ್ಯಾರ್ಥಿನಿ ಕುಮಾರಿ ಸೌಜನ್ಯಳು ಅತ್ಯಾಚಾರಕ್ಕೀಡಾಗಿ ಹೀನಾಯ ಕೊಲೆಯ ಪ್ರಕರಣಕ್ಕೆ ಸಂಬಂಧ ಪಟ್ಟ ಕುಟುಂಬಕ್ಕೆ ನ್ಯಾಯ ಸಿಗಲಿಲ್ಲ. ಅದಕ್ಕಾಗಿ ಈ ಪ್ರಕರಣವನ್ನು ಮರು ತನಿಖೆ ನಡೆಸಿ ತಪ್ಪಿತಸ್ಥರ ವಿರುದ್ಧ ಕಾನೂನು ಕ್ರಮ ಕೈಗೊಂಡು ಹೀನಾಯ ರೀತಿಯಲ್ಲಿ ಜೀವ ಕಳೆದುಕೊಂಡಿರುವ ಆತ್ಮಕ್ಕೆ, ಹೆತ್ತವರಿಗೆ ಹಾಗೂ ಕುಟುಂಬ ವರ್ಗಕ್ಕೆ ನ್ಯಾಯ ಒದಗಿಸಬೇಕೆಂದು ಬೆಳ್ತಂಗಡಿ ತಾಲೂಕು ಗೌಡರ ಯಾನೆ ಒಕ್ಕಲಿಗರ ಸೇವಾ ಸಂಘದ ವತಿಯಿಂದ ಮುಖ್ಯಮಂತ್ರಿ ಸಿದ್ದರಾಮಯ್ಯರಿಗೆ ಮನವಿ ನೀಡಲಾಗುವುದು ಎಂದು ಸಂಘದ ಗೌರವ ಅಧ್ಯಕ್ಷ ಹೆಚ್.ಪದ್ಮ ಗೌಡ ಮತ್ತು ಅಧ್ಯಕ್ಷ ಪಿ.ಕುಶಾಲಪ್ಪ ಗೌಡ ಪೂವಾಜೆ ಹೇಳಿದರು.ಅವರು ಜು.25 ರಂದು ವಾಣಿ ಕಾಲೇಜಿನಲ್ಲಿ ಕರೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದರು.
ಈ ಕೃತ್ಯಕ್ಕೆ ಸಂಬಂಧಪಟ್ಟು ಬೆಳ್ತಂಗಡಿ ಠಾಣೆಯಲ್ಲಿ ಕ್ರಿಮಿನಲ್ ಮೊಕದ್ದಮೆ ದಾಖಲಾಗಿರುತ್ತದೆ. ಈ ವಿಚಾರವಾಗಿ ಹಲವಾರು ಪ್ರತಿಭಟನೆಗಳು, ಆರೋಪಗಳು ಕಂಡುಬಂದಿದ್ದು, ಮುಂದಿನ ತನಿಖೆಗಳನ್ನು ಅಂದಿನ ರಾಜ್ಯ ಸರಕಾರವು ರಾಜ್ಯದ ಸಂಬಂಧಪಟ್ಟ ಇಲಾಖೆಗಳಿಂದ ನಡೆಸಲು ಆದೇಶಿಸಿರುತ್ತದೆ.ಆದರೆ ಈ ಬಗ್ಗೆ ಕುಟುಂಬ ವರ್ಗ ಹಾಗೂ ನಮ್ಮ ಸಮಾಜದ ಬಂಧುಗಳು ಹಾಗೆಯೇ ಸಜ್ಜನ ನಾಗರಿಕರ ಆಕ್ರೋಶಗಳು ಪ್ರತಿಭಟನೆಗಳು ಮುಂದುವರಿದಿದ್ದ ಪರಿಣಾಮವಾಗಿ 2013ನೇ ಇಸವಿಯಲ್ಲಿ ರಾಜ್ಯ ಸರಕಾರ ದೇಶದ ಉನ್ನತ ಸ್ವತಂತ್ರ ಸಂಸ್ಥೆಯಾದ ಸಿಬಿಐ ತನಿಖೆ ನಡೆಸುವಂತೆ ಕೇಳಿಕೊಂಡ ಮೇರೆಗೆ ಸಿಬಿಐ ಅಧಿಕಾರಿಗಳು ಬೆಳ್ತಂಗಡಿಗೆ ಆಗಮಿಸಿ ತನಿಖೆಯನ್ನು ನಡೆಸಿ ಸಂತೋಷ್ ರಾವ್ ಎಂಬವನನ್ನು ಆರೋಪಿಯನ್ನಾಗಿಸಿ, ಬೆಂಗಳೂರಿನ ಸಿ ಬಿ ಐ ನ್ಯಾಯಾಲಯದಲ್ಲಿ ಪ್ರಕರಣದ ಬಗ್ಗೆ ದೋಷಾರೋಪಣ ಪಟ್ಟಿಯನ್ನು ಸಲ್ಲಿಸಿ ತದನಂತರ ಸಿಬಿಐ ನ್ಯಾಯಾಲಯದಲ್ಲಿ ಸಾಕ್ಷಿಗಳ ವಿಚಾರಣೆ ನಡೆಸಿ ವಾದ ವಿವಾದಗಳನ್ನು ಆಲಿಸಿದ ನ್ಯಾಯಾಲಯ ಸದ್ರಿ ಪ್ರಕರಣದಲ್ಲಿ ಸಿಬಿಐ ಸಂತೋಷ ರಾವ್ ಅತ್ಯಾಚಾರ ಮಾಡಿ ಕೊಲೆ ಮಾಡಿದುದ್ದನ್ನು ಸಾಕ್ಷಿ ಹಾಗೂ ಪುರಾವೆಗಳಿಂದ ಸಾಬೀತು ಪಡಿಸಲು ಸಿ ಬಿ ಐ ವಿಫಲವಾದುದರಿಂದ ಸದ್ರಿ ಪ್ರಕರಣದಲ್ಲಿ ಶಂಕಿತ ಸಂತೋಷ ರಾವ್ ನನ್ನು ಇತ್ತೀಚೆಗೆ ದೋಷ ಮುಕ್ತಗೊಳಿಸಿ ಬಿಡುಗಡೆ ಮಾಡಲಾಗಿದೆ.
ಸದ್ರಿ ಪ್ರಕರಣದ ಬಗ್ಗೆ ಸೌಜನ್ಯಳ ಹೆತ್ತವರು ಹಾಗೂ ಕುಟುಂಬವರ್ಗ ಹಾಗೂ ನಮ್ಮ ಸಮಾಜ ಬಂಧುಗಳು ಈ ಬಗ್ಗೆ ತೀವೃ ಅಕ್ರೋಶವನ್ನು ವ್ಯಕ್ತಪಡಿಸಿದ್ದು, ಈ ನಿಟ್ಟಿನಲ್ಲಿ ಸಮಾಜದ ಭಾವನೆಗಳಿಗೆ ಸ್ಪಂದಿಸುವುದು ನಮ್ಮ ಸಂಘದ ಜವಾಬ್ದಾರಿ ಹಾಗೂ ಕರ್ತವ್ಯವಿರುವುದರಿಂದ ಹಾಗೂ ಯಾವ ಸಮಾಜದ ಹೆಣ್ಣು ಮಗಳಿಗೂ ಈ ರೀತಿಯ ಹೀನಾಯ ಸಾವು ಬರಬಾರದೆಂಬ ಉದ್ದೇಶದಿಂದಲೂ ಅಪರಾಧಿಗಳನ್ನು ಕಾನೂನಿನ ಅಡಿಯಲ್ಲಿ ತಂದು ಶಿಕ್ಷೆ ನೀಡಲು ಕಾನೂನಿನ ವ್ಯವಸ್ಥೆಯಲ್ಲಿ ವಿಫಲವಾಗಿದೆ ಎಂಬುದು ನಮ್ಮೆಲ್ಲರ ಅಭಿಪ್ರಾಯವಾಗಿರುವುದರಿಂದ ನಾವು ಬೆಳ್ತಂಗಡಿ ತಾಲೂಕಿನ ನಮ್ಮ ಎಲ್ಲಾ ಸಮಾಜದ ಬಂಧುಗಳ ಪರವಾಗಿ ಸದ್ರಿ ಪ್ರಕರಣವನ್ನು ಉನ್ನತ ಮಟ್ಟದಲ್ಲಿ ಮರು ತನಿಖೆಯನ್ನು ನಡೆಸಿ ತಪ್ಪಿತಸ್ಥರ ವಿರುದ್ಧ ಕಾನೂನು ಕ್ರಮ ಕೈಗೊಂಡು ಹೀನಾಯ ರೀತಿಯಿಂದ ಜೀವ ಕಳೆದುಕೊಂಡಿರುವ ಆತ್ಮಕ್ಕೆ, ಹೆತ್ತವರಿಗೆ ಹಾಗೂ ಕುಟುಂಬ ವರ್ಗಕ್ಕೆ ನ್ಯಾಯವನ್ನು ಕೊಡಿಸುವುದರೊಂದಿಗೆ ಸಜ್ಜನ ಸಮಾಜಕ್ಕೆ ನ್ಯಾಯವಾದ ಸಂದೇಶವನ್ನು ಒದಗಿಸಬೇಕಾಗಿ ನಾವು ಈ ಮೂಲಕ ಒತ್ತಾಯಿಸುತ್ತೇವೆ ಎಂದರು.
ಪತ್ರಿಕಾಗೋಷ್ಠಿಯಲ್ಲಿ ಗೌಡರ ಯಾನೆ ಒಕ್ಕಲಿಗರ ಸೇವಾ ಸಂಘದ ಉಪಾಧ್ಯಕ್ಷರುಗಳಾದ ನಾರಾಯಣ ಗೌಡ ದೇವಸ್ಯ, ಕೃಷ್ಣಪ್ಪ ಗೌಡ ಸವಣಾಲು, ಕಾರ್ಯದರ್ಶಿ ಗಣೇಶ್ ಗೌಡ ವಕೀಲರು, ಜೊತೆ ಕಾರ್ಯದರ್ಶಿ ಕೆ.ಎಮ್.ಶ್ರೀನಾಥ್ ನಡ, ಸಂಘಟನಾ ಕಾರ್ಯದರ್ಶಿ ಟಿ.ಜಯಾನಂದ ಗೌಡ, ನಿರ್ದೇಶಕರುಗಳಾದ ಧರ್ಣಪ್ಪ ಗೌಡ ಬಂದಾರು, ವಿಜಯ ಕುಮಾರ್ ನ್ಯಾಯತರ್ಪು, ಉಷಾದೇವಿ ಉಜಿರೆ, ಭವಾನಿ.ಕೆ ಗೌಡ ಮೂಡಾಯೂರು, ಗೋಪಾಲಕೃಷ್ಣ ಗುಲ್ಲೋಡಿ, ಯುವರಾಜ ಅನಾರು ಕರಾಯ, ಹರೀಶ್ ಗೌಡ ಪರಪ್ಪಾಜೆ ಬಂದಾರು, ರವೀಂದ್ರನಾಥ್ ಪೆರ್ಮುದೆ ಕೊಯ್ಯೂರು, ಯುವವೇದಿಕೆಯ ಅಧ್ಯಕ್ಷ ಯಶವಂತ ಬನಂದೂರು, ವಾಣಿ ಸೌಹಾರ್ದ ಕೋ-ಆಪರೇಟಿವ್ ಸಹಕಾರಿ ಸಂಘದ ನಿರ್ದೇಶಕ ಮಾದವ ಗೌಡ ಉಪಸ್ಥಿತರಿದ್ದರು.