Site icon Suddi Belthangady

ಜುಲೈ 30ರಂದು ಅರಸಿನಮಕ್ಕಿ ಪ್ರಾಥಮಿಕ ಕೃಷಿಪತ್ತಿನ ಸಹಕಾರ ಸಂಘದ ಮುಖ್ಯ ಕಾರ್ಯನಿರ್ವಹಣಾಧಿಕಾರಿ ತ್ಯಾಂಪಣ್ಣ ಶೆಟ್ಟಿಗಾರ್ ಗೆ ಬೀಳ್ಕೊಡುಗೆ

ಹತ್ಯಡ್ಕ: ಅರಸಿನಮಕ್ಕಿ‌ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಪಿ. ತ್ಯಾಂಪಣ್ಣ ಶೆಟ್ಟಿಗಾರ್ ಜುಲೈ 31ರಂದು ವಯೋನಿವೃತ್ತಿ ಹೊಂದಲಿದ್ದಾರೆ.ಜುಲೈ 30ರಂದು ಅರಸಿನಮಕ್ಕಿ ಗೋಪಾಲಕೃಷ್ಣ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ನಡೆಯುವ ಸಂಘದ 2022-23ನೇ ಸಾಲಿನ ವಾರ್ಷಿಕ ಮಹಾಸಭೆಯಲ್ಲಿ ತ್ಯಾಂಪಣ್ಣ ಶೆಟ್ಟಿಗಾರ್ ಅವರ 36 ವರ್ಷದ ಸಾರ್ಥಕ ಸೇವೆಯನ್ನು ಪರಿಗಣಿಸಿ ಸಂಘದ ಆಡಳಿತ ಮಂಡಳಿ, ಸಿಬ್ಬಂದಿವರ್ಗ ಮತ್ತು ಸರ್ವ ಸದಸ್ಯರ ಪರವಾಗಿ ಬೀಳ್ಕೊಡುಗೆ ಮತ್ತು ಗೌರವಾರ್ಪಣೆ ನಡೆಯಲಿದೆ. ಸಂಘದ ಅಧ್ಯಕ್ಷ ರಾಘವೇಂದ್ರ ನಾಯಕ್ ಹಾಗೂ ಶಾಸಕ ಹರೀಶ್ ಪೂಂಜಾ ಸನ್ಮಾನ ನೆರವೇರಿಸಲಿದ್ದಾರೆ. ಮುಖ್ಯ ಅತಿಥಿಗಳಾಗಿ ವಿಧಾನ ಪರಿಷತ್ ಸದಸ್ಯರಾದ ಹರೀಶ್ ಕುಮಾರ್ ಮತ್ತು ಪ್ರತಾಪಸಿಂಹ ನಾಯಕ್ ಪಾಲ್ಗೊಳ್ಳಲಿದ್ದಾರೆ.

ನಿವೃತ್ತರಾಗುತ್ತಿರುವ ಪಿ. ತ್ಯಾಂಪಣ್ಣ ಶೆಟ್ಟಿಗಾರ್ ಅವರು ರಾಷ್ಟ್ರೀಯ ಸ್ವಯಂಸೇವಕ ಸಂಘದ ಮೂಲಕ ಸಾರ್ವಜನಿಕ ಸಂಪರ್ಕ ಹೊಂದಿದ್ದು ಅರಸಿನಮಕ್ಕಿ ಜೆಸಿಐ ಸದಸ್ಯರಾಗಿ, ಪೆರ್ಲ‌ ಕಲಾಭಾರತಿಯ ಹಳೆ ವಿದ್ಯಾರ್ಥಿ ಸಂಘದ ಅಧ್ಯಕ್ಷರಾಗಿ ಕಾರ್ಯ ನಿರ್ವಹಿಸಿದ್ದಾರೆ. ಪೆರ್ಲ ಶಾಲೆಯ ಸುವರ್ಣ ಮಹೋತ್ಸವದ ಸ್ಮರಣ ಸಂಚಿಕೆಯ ಸಂಪಾದಕರಾಗಿ, ಶ್ರೀ ರಾಜರಾಜೇಶ್ವರಿ ಭಜನಾಮಂಡಳಿಯ ಗೌರವಾಧ್ಯಕ್ಷರಾಗಿ, ಶಿಬಾಜೆ ಮೊಂಟೆತಡ್ಕ ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನದ ಆಡಳಿತ ಸಮಿತಿ ಸದಸ್ಯರಾಗಿ, 2001 ಮತ್ತು 2016ರ ಬ್ರಹ್ಮಕಲಶೋತ್ಸವ ಸಮಿತಿಯ ಪ್ರಧಾನ ಕಾರ್ಯದರ್ಶಿಯಾಗಿ ಕರ್ತವ್ಯ ನಿರ್ವಹಿಸಿದ್ದಾರೆ.ಅರಸಿನಮಕ್ಕಿಯ ಪದ್ಮಶಾಲಿ ಸಮಾಜ ಸೇವಾ ಸಂಘದ ಅಧ್ಯಕ್ಷರಾಗಿ, ದಶಮಾನೋತ್ಸವ ಸಮಿತಿ ಅಧ್ಯಕ್ಷರಾಗಿ ಸೇವೆ ಸಲ್ಲಿಸಿದ್ದಾರೆ. ಭಜನೆ ಹಾಡುವುದು, ಕುಣಿತ ಭಜನೆ, ತುಳು ನಾಟಕದಲ್ಲಿ ಅಭಿನಯ, ನಾಟಕ ರಚನೆ, ಯಕ್ಷಗಾನ ಇತ್ಯಾದಿ ಕ್ಷೇತ್ರಗಳಲ್ಲಿ ತೊಡಗಿಸಿಕೊಂಡಿರುವ ಇವರು ಅರಸಿನಮಕ್ಕಿ, ಶಿಶಿಲ, ಶಿಬಾಜೆ ರೇಖ್ಯಾ ಗ್ರಾಮದ ಜನರ ನೆಚ್ಚಿನ
ತ್ಯಾಂಪಣ್ಣ ಎಂದೇ ಮನೆ ಮಾತಾಗಿದ್ದಾರೆ.

Exit mobile version