Site icon Suddi Belthangady

ಭಾರತೀಯ ಜೈನ್ ಮಿಲನ್ ಬೆಳ್ತಂಗಡಿ ಮತ್ತು ಧೀಮತಿ ಮಹಿಳಾ ಸಮಾಜ ಉಜಿರೆ ಸಹಯೋಗದಲ್ಲಿ ಆಹಾರ ಉತ್ಸವ ಮತ್ತು ಪ್ರತಿಭಾ ಪುರಸ್ಕಾರ: ಅಡಿಗೆ ಮನೆ ಒಂದು ಎಲ್ಲಾ ಒತ್ತಡಗಳನ್ನು ಮರೆಸಿ ಖುಷಿ ಕೊಡುವ ಕೇಂದ್ರ- ಸೋನಿಯಾ ಯಶೋವರ್ಮ

ಉಜಿರೆ: ಭಾರತೀಯ ಜೈನ್ ಮಿಲನ್ ಬೆಳ್ತಂಗಡಿ ಮತ್ತು ಧೀಮತಿ ಮಹಿಳಾ ಸಮಾಜ ಇದರ ಜಂಟಿ ಆಶ್ರಯದಲ್ಲಿ ಆಟಿ ತಿಂಗಳ ವಿಶೇಷ ಆಹಾರ ಉತ್ಸವ ಮತ್ತು ಜೈನ ಸಮಾಜದ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ಕಾರ್ಯಕ್ರಮ ಜು.22ರಂದು ಉಜಿರೆಯ ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಪದವಿ ಪೂರ್ವ ಕಾಲೇಜಿನ ಶ್ರೀ ರತ್ನತ್ರಯ ಸಭಾಂಗಣದಲ್ಲಿ ನಡೆಯಿತು.

ಈ ಆಹಾರ ಉತ್ಸವವನ್ನು ಭಾರತೀಯ ಜೈನ್ ಮಿಲನ್ ಬೆಳ್ತಂಗಡಿ ಮತ್ತು ಧೀಮತಿ ಮಹಿಳಾ ಸಮಾಜ ಇದರ ಗೌರವ ಸಲಹೆಗಾರರಾದ ಸೋನಿಯಾ ಯಶೋವರ್ಮ ಉದ್ಘಾಟಿಸಿ ಅಡಿಗೆ ಮನೆ ಒಂದು ಎಲ್ಲಾ ಒತ್ತಡಗಳನ್ನು ಮರೆಸಿ ಖುಷಿ ಕೊಡುವ ಕೇಂದ್ರ ಮತ್ತು ಉತ್ತಮ ಆಹಾರಗಳ ಸೇವನೆಯಿಂದ ಉತ್ತಮ ಆರೋಗ್ಯ ಪ್ರಾಪ್ತಿಯಾಗುತ್ತದೆ ಎಂದು ಹೇಳಿದರು.ಇದೇ ವೇಳೆ ವೇದಿಕೆಯ ಮೇಲೆ ಮುಖ್ಯ ಅತಿಥಿಗಳಾಗಿ ಜೈನ್ ಮಿಲನ್ ವಲಯ 8ರ ನಿರ್ದೇಶಕ ವೀರ್ ಬಿ ಸೋಮಶೇಖರ ಶೆಟ್ಟಿ ಹಾಜರಿದ್ದು ಆಷಾಡ ಮಾಸದ ವಿಶೇಷತೆಗಳನ್ನು ಸೇರಿದ್ದ ಸಭಿಕರಿಗೆ ತಿಳಿಸಿಕೊಟ್ಟರು.

ಇವರ ಜೊತೆ ಅತಿಥಿಗಳಾಗಿ ಎಕ್ಸೆಲ್ ಪದವಿ ಪೂರ್ವ ಕಾಲೇಜು ಗುರುವಾಯನಕೆರೆ ಇದರ ಚೇರ್ಮನ್ ವೀರ್ ಸುಮಂತ್ ಕುಮಾರ್ ಜೈನ್ ಭಾಗವಹಿಸಿ ಶುಭ ಕೋರಿದರು.ಧೀಮತಿ ಮಹಿಳಾ ಸಮಾಜ ಉಜಿರೆ ಇದರ ಅಧ್ಯಕ್ಷರಾದ ವೀರಾಂಗನ ರಜತ ಶೆಟ್ಟಿ ಹಾಗೂ ಕಾರ್ಯಕ್ರಮದ ಸಂಯೋಜಕರಾದ ವೀರಾಂಗನ ಸುಧಾಮಣಿ ಹಾಜರಿದ್ದರು.ಈ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಭಾರತೀಯ ಜೈನ್ ಮಿಲನ್ ಬೆಳ್ತಂಗಡಿ ಇದರ ಅಧ್ಯಕ್ಷರಾದ ವೀರ್ ಡಾ ನವೀನ್ ಕುಮಾರ್ ಜೈನ್ ವಹಿಸಿಕೊಂಡಿದ್ದರು.

ಕಾರ್ಯಕ್ರಮದ ನಿರೂಪಣೆಯನ್ನು ಮಿಲನ್ ನ ಕಾರ್ಯದರ್ಶಿ ವೀರ್ ಸಂಪತ್ ಕುಮಾರ್ ನಡೆಸಿದರೆ ಪ್ರತಿಭಾ ಪುರಸ್ಕಾರ ಕಾರ್ಯಕ್ರಮವನ್ನು ವೀರಾಂಗನ ಪೂಜಿತ ವರ್ಮ ಇವರು ನಡೆಸಿಕೊಟ್ಟರು.ಕಾರ್ಯಕ್ರಮದ ವಿಶೇಷ ಆಕರ್ಷಣೆಯಾದ ಆಹಾರ ಉತ್ಸವ ಕಾರ್ಯಕ್ರಮದಲ್ಲಿ ಆಷಾಡ ಮಾಸದ ವಿಶೇಷ ಅಡುಗೆಗಳಾದ ಅಕ್ಕಿರೊಟ್ಟಿ, ಅವರೇ ಗಸಿ, ಹಲಸಿನ ಬೀಜದ ಉಪ್ಪುಕರಿ,ಸುಕುರುಂಡೆ ತಜಂಕು ವಡೆ,ಹಲಸಿನ ಕಡುಬು, ಹಸಿರೆಳೆ ಕಡುಬು,ಪತ್ರೊಡೆ,ಬಸಳೆ ಪುಂಡಿ, ಹಲಸಿನ ಹಣ್ಣಿನ ದೋಸೆ ಮತ್ತಿತರ ವಿಶೇಷ ಖಾದ್ಯಗಳನ್ನು ತಾವೇ ಸ್ವತಃ ಮನೆಯಲ್ಲಿ ಸಿದ್ಧಪಡಿಸಿ ತರಲಾಗಿತ್ತು.

Exit mobile version