ಉಜಿರೆ: ಮಂಗಳೂರು, ವಿಲ್ಲುಪುರಂ ರಾಷ್ಟ್ರೀಯ ಹೆದ್ದಾರಿಯ ಮುಂಡಾಜೆ, ನಿಡಿಗಲ್ ಚಾರ್ಮಾಡಿ ಘಾಟ್ ಮೊದಲಾದ ಕಡೆಗಳಲ್ಲಿ ರಸ್ತೆ ಬದಿ ಹೊಸದಾಗಿ ಅನಧಿಕೃತ ಗೂಡಂಗಡಿಗಳು ತಲೆ ಎತ್ತುತ್ತಿದ್ದು, ಇದರಿಂದ ಅಪಾಯ ಸಂಭವಿಸುವ ಸಾಧ್ಯತೆ ಇದೆ.ಇವುಗಳನ್ನು ತೆರವುಗೊಳಿಸಿ, ರಸ್ತೆ ಬದಿ ಹೊಸದಾಗಿ ಗೂಡಂಗಡಿಗಳು ತಲೆ ಎತ್ತದಂತೆ ಕ್ರಮ ಕೈಗೊಳ್ಳಬೇಕೆಂದು ಮುಂಡಾಜೆ ಗ್ರಾಮಸ್ಥರು ಹಾಗೂ ಮೃತ್ಯುಂಜಯ ನದಿ ಪರಿಸರದ ನಿವಾಸಿಗಳು ಧರ್ಮಸ್ಥಳ ಪೊಲೀಸ್ ಠಾಣೆಗೆ ಗುರುವಾರ(ಜು.21) ಮನವಿ ಸಲ್ಲಿಸಿದ್ದಾರೆ.
ಅಂಗಡಿಗಳಲ್ಲಿ ವ್ಯಾಪಾರ ಮಾಡುವ ಪ್ರವಾಸಿಗರು: ರಸ್ತೆಯಲ್ಲಿ ವಾಹನಗಳನ್ನು ನಿಲ್ಲಿಸುವುದರಿಂದ ಹೆಚ್ಚಿನ ವಾಹನ ಸಂಚಾರ ಇರುವ ಹೆದ್ದಾರಿಯಲ್ಲಿ ಸಂಚಾರ ಸಮಸ್ಯೆ ಆಗುತ್ತಿದ್ದು ಅಪಘಾತಗಳು ಸಂಭವಿಸುವ ಸಾಧ್ಯತೆ ಇದೆ.ಮುಂದಿನ ದಿನಗಳಲ್ಲಿ ಇಂತಹ ಅನಧಿಕೃತ ಗೂಡಂಗಡಿಗಳು ಮದ್ಯಪಾನ, ಮಾದಕ ದ್ರವ್ಯ ಸೇವನೆ, ಜುಗಾರಿ ಅಡ್ಡೆಗಳಾಗುವ ಸಂಭಾವ್ಯತೆ ಇದೆ.ಇದರಿಂದ ಅರಣ್ಯ ಪ್ರದೇಶದ ಅಲ್ಲಲ್ಲಿ ತ್ಯಾಜ್ಯಗಳ ರಾಶಿಯಿಂದ ಪರಿಸರ ಮಾಲಿನ್ಯ ಉಂಟಾಗುತ್ತಿದೆ.
ಈ ಹೆದ್ದಾರಿ ಬದಿ ಮೃತ್ಯುಂಜಯ ನದಿ ಇದ್ದು ಅದರಲ್ಲಿ ಕಸ ಕಡ್ಡಿ ಸೇರಿ ನೀರು ಕಲುಷಿತಗೊಳ್ಳಬಹುದು.ಸೆಲ್ಫಿಗಾಗಿ ನದಿಗೆ ಇಳಿಯುವ ಮಂದಿ ಅಪಾಯಕ್ಕೆ ತುತ್ತಾಗುವ ಸಾಧ್ಯತೆ ಇರುವುದರಿಂದ, ಹೊಸದಾಗಿ ಗೂಡಂಗಡಿ ನಿರ್ಮಿಸಲು ಹಾಗೂ ವಾಹನಗಳನ್ನು ನಿಲ್ಲಿಸಿ ವ್ಯಾಪಾರ ಮಾಡಲು ಅವಕಾಶ ನೀಡಬಾರದು ಎಂದು ಮನವಿಯಲ್ಲಿ ತಿಳಿಸಲಾಗಿದೆ.ಈ ಬಗ್ಗೆ ಮುಂಡಾಜೆ ಗ್ರಾಮ ಪಂಚಾಯಿತಿಗೂ ಮನವಿ ಸಲ್ಲಿಸಲಾಗಿದೆ.
ಪರಿಸರ ಪ್ರೇಮಿ ಸಚಿನ್ ಭಿಡೆ, ಕಜೆ ವೆಂಕಟೇಶ್ವರ ಭಟ್, ಜಗದೀಶ ನಾಯ್ಕ್ ಮತ್ತು ವಿಶ್ವನಾಥ ಶೆಟ್ಟಿ ಹಾಗು ಅನೇಕ ಗ್ರಾಮಸ್ಥರ ಸಹಿಯುಳ್ಳ ಮನವಿ ಸಲ್ಲಿಸಿದರು.