Site icon Suddi Belthangady

ಹವಾಮಾನ ಆಧಾರಿತ ಬೆಳೆ ವಿಮೆ ತಕ್ಷಣ ಕಲ್ಪಿಸುವಂತೆ ಸಚಿವರಿಗೆ ಪ್ರತಾಪ ಸಿಂಹ ನಾಯಕ್ ಒತ್ತಾಯ

ಬೆಳ್ತಂಗಡಿ: ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಅಡಿಕೆ, ಕೋಕೋ ಮತ್ತು ಕರಿಮೆಣಸು ಬೆಳೆಗಳಿಗೆ ದೊರೆಯದಿರುವ ಕುರಿತು ವಿಧಾನ ಪರಿಷತ್ ಸದಸ್ಯ ಪ್ರತಾಪ ಸಿಂಹ ನಾಯಕ್ ರಾಜ್ಯ ಗಣಿ ಮತ್ತು ಭೂ ವಿಜ್ಞಾನ ಹಾಗೂ ತೋಟಗಾರಿಕೆ ಸಚಿವ ಮಲ್ಲಿಕಾರ್ಜುನರಿಗೆ ಪತ್ರ ಬರೆದು ಗಮನ ಸೆಳೆದಿದ್ದಾರೆ.

ಹವಾಮಾನ ಆಧಾರಿತ ರಾಜ್ಯದ ಬೆಳೆ ವಿಮಾ ಸೌಲಭ್ಯ ಹಲವು ಜಿಲ್ಲೆಗಳಲ್ಲಿ ಅಡಿಕೆ, ಕೋಕೋ ಮತ್ತು ಕರಿಮೆಣಸು ಬೆಳೆಗಳಿಗೆ ಹವಾಮಾನ ಆಧಾರಿತ ಬೆಳೆ ವಿಮೆ ಸೌಲಭ್ಯವನ್ನು ಹಲವಾರು ವರ್ಷಗಳಿಂದ ಕಲ್ಪಿಸಲಾಗಿದೆ.ದಕ್ಷಿಣ ಕನ್ನಡ ಜಿಲ್ಲೆಯ ಪಕ್ಕದ ಜಿಲ್ಲೆಯಾದ ಉಡುಪಿ ಜಿಲ್ಲೆಯಲ್ಲಿ ಕೂಡ ಪ್ರಸ್ತುತ ವರ್ಷಕ್ಕೆ ಈಗಾಗಲೇ ಸದರಿ ಸೌಲಭ್ಯವನ್ನು ಕಲ್ಪಿಸಲಾಗಿದೆ.ಆದರೆ ದಕ್ಷಿಣ ಕನ್ನಡ ಜಿಲ್ಲೆಗೆ ಸಂಬಂಧಿಸಿದಂತೆ ಅಡಿಕೆ, ಕೋಕೋ ಮತ್ತು ಮೆಣಸು ಬೆಳೆಗಳಿಗೆ ಹವಾಮಾನ ಆಧಾರಿತ ಬೆಳೆ ವಿಮೆ ಸೌಲಭ್ಯವನ್ನು ಪ್ರಸ್ತುತ ವರ್ಷಕ್ಕೆ ಕಲ್ಪಿಸಲು ಟೆಂಡರ್ ಕರೆದಿದ್ದು ಹಲವು ಕಾರಣಗಳಿಂದಾಗಿ ಅದು ಇದುವರೆಗೂ ನೆನೆಗುದಿಗೆ ಬಿದ್ದಿರುವುದರಿಂದ ಬೆಳೆಗಾರರು ತೀವ್ರ ಗೊಂದಲ ಮತ್ತು ಆತಂಕದಲ್ಲಿದ್ದಾರೆ.

ಸದರಿ ಟೆಂಡರ್ ಪ್ರಕ್ರಿಯೆಗೆ ಅವಶ್ಯವಿರುವ ಎಲ್ಲಾ ಮಾಹಿತಿಗಳನ್ನು ಸಂಗ್ರಹಿಸಿ ಮುಂದಿನ ಕ್ರಮಕ್ಕಾಗಿ ಸಂಬಂಧಿಸಿದ ಜಂಟಿ ನಿರ್ದೇಶಕರು ಈಗಾಗಲೇ ತೋಟಗಾರಿಕೆ ಇಲಾಖಾ ಆಯುಕ್ತರಿಗೆ ಸಲ್ಲಿಸಿರುತ್ತಾರೆ.
ಆದುದರಿಂದ ಈ ಟೆಂಡರ್‌ ಪ್ರಕ್ರಿಯೆಯನ್ನು ಕೂಡಲೇ ಅಂತಿಮಗೊಳಿಸಿ, ಪ್ರಿಮಿಯಂ ಕಟ್ಟಲು ಅವಧಿ ವಿಸ್ತರಿಸಿ ಸಂಕಷ್ಟದಲ್ಲಿರುವ ಬೆಳೆಗಾರರಿಗೆ ಹವಾಮಾನ ಆಧಾರಿತ ಬೆಳೆ ವಿಮೆ ಸೌಲಭ್ಯವನ್ನು ತತ್ ಕ್ಷಣದಿಂದಲೇ ಕಲ್ಪಿಸಬೇಕೆಂದು ಅವರು ಪತ್ರದಲ್ಲಿ ವಿನಂತಿಸಿದ್ದಾರೆ.

Exit mobile version