Site icon Suddi Belthangady

ಇನ್ಸ್ಟಾಗ್ರಾಂನಲ್ಲಿ ಪರಿಚಯವಾದ ಕಾಶಿಪಟ್ನದ ಇಶಾನ್ ಪೂಜಾರಿಗೆ ಇಶಾನ್ ಶೆಟ್ಟಿಯಿಂದ ಮೋಸ-ಬೈಕ್ ಖರೀದಿಸುವುದಾಗಿ ನಂಬಿಸಿ ‘ಜಸ್ಟ್ ರೈಡ್’ಗೆ ಬೈಕ್ ಪಡೆದು ವಾಪಸ್ ಬರದೆ ವಂಚನೆ

ಬೆಳ್ತಂಗಡಿ: ಸಾಮಾಜಿಕ ಜಾಲತಾಣವಾದ ಇನ್ಸ್ಟಾಗ್ರಾಮ್‌ನಲ್ಲಿ ಪರಿಚಯವಾಗಿ ಬೈಕ್ ಖರೀದಿ ಮಾಡುವುದಾಗಿ ನಂಬಿಸಿ ಟ್ರಯಲ್ ನೋಡುತ್ತೇನೆ ಎಂದು ತಿಳಿಸಿ ಬೈಕ್ ಕೊಂಡುಹೋದಾತ ವಾಪಸ್ ಬಾರದೆ ವಂಚಿಸಿದ ಪ್ರಕರಣವೊಂದು ನಡೆದಿದೆ.

ಬೆಳ್ತಂಗಡಿ ಕಾಶಿಪಟ್ನ ಸಮೀಪದ ಇಶಾನ್ ಪೂಜಾರಿಯವರಿಗೆ ಇನ್ಸ್ಟಾಗ್ರಾಮ್‌ನಲ್ಲಿ ಇಶಾನ್ ಶೆಟ್ಟಿ ಉಚ್ಚಿಲ್ ಎಂಬವರ ಪರಿಚಯವಾಗಿತ್ತು. ಇಬ್ಬರ ನಡುವೆ ಇನ್ಸ್ಟಾಗ್ರಾಮ್‌ನಲ್ಲಿ ದಿನಂಪ್ರತಿ ಕುಶಲ ಸಮಾಚಾರ ನಡೆಯುತ್ತಿತ್ತು. ಹೆಚ್ಚು ಆತ್ಮೀಯರಾಗುತ್ತಿದ್ದಂತೆಯೇ ಕಾಶಿಪಟ್ನದ ಇಶಾನ್ ಪೂಜಾರಿಯವರಲ್ಲಿ ಡ್ಯೂಕ್ ಬೈಕ್ ಇರುವುದನ್ನು ಇಶಾನ್ ಶೆಟ್ಟಿ ಉಚ್ಚಿಲ್ ತಿಳಿದುಕೊಳ್ಳುತ್ತಾನೆ.ಮಾರಾಟ, ಖರೀದಿಯ ಮಾತುಕತೆಯೂ ನಡೆಯುತ್ತದೆ. ನಿಮ್ಮ ಬೈಕ್ ನಾನು ಖರೀದಿಸುತ್ತೇನೆ ಎಂದು ಇಶಾನ್ ಪೂಜಾರಿಗೆ ಇಶಾನ್ ಶೆಟ್ಟಿ ಹೇಳಿದ್ದಾನೆ.ಇಶಾನ್ ಪೂಜಾರಿಯವರನ್ನು ಶಿರ್ತಾಡಿಗೆ ಬರಲು ಇಶಾನ್ ಶೆಟ್ಟಿ ತಿಳಿಸಿದ್ದಾನೆ.ಅದರಂತೆ ಮೂಡಬಿದ್ರೆ ಶಿರ್ತಾಡಿಗೆ ತೆರಳಿದ ಇಶಾನ್ ಪೂಜಾರಿಯವರಲ್ಲಿ ‘ಜಸ್ಟ್ ರೈಡ್’ ಎಂದು ಇಶಾನ್ ಶೆಟ್ಟಿ ಟ್ರಯಲ್‌ಗೆ ಕೊಂಡು ಹೋದವನು ವಾಪಸ್ ಬಂದಿಲ್ಲ. ಇಶಾನ್ ಶೆಟ್ಟಿಯ ವಿಳಾಸವಾಗಲೀ, ಮೊಬೈಲ್ ನಂಬ್ರವಾಗಲೀ ಯಾವುದೂ ಇಶಾನ್ ಪೂಜಾರಿಯವರಲ್ಲಿ ಇರಲಿಲ್ಲ.ಕೇವಲ ಇನ್ಸ್ಟಾಗ್ರಾಮ್‌ನಲ್ಲಿ ಮಾತ್ರ ಸಂಪರ್ಕ ಇತ್ತು.ಬೈಕ್ ಕೊಂಡು ಹೋದಾತ ಎಷ್ಟು ಕಾದರೂ ವಾಪಸ್ ಬಾರದನ್ನು ಕಂಡು ತಾನು ಮೋಸಹೋದ ಬಗ್ಗೆ ಅರಿತುಕೊಂಡ ಕಾಶಿಪಟ್ನದ ಇಶಾನ್ ಪೂಜಾರಿ ಮೂಡುಬಿದಿರೆ ಪೊಲೀಸರಿಗೆ ದೂರು ನೀಡಿದ್ದಾರೆ.

ಬೈಕ್ ಪತ್ತೆ: ಮೂಡಬಿದ್ರೆಯ ಇಶಾನ್ ಶೆಟ್ಟಿ ಉಚ್ಚಿಲ ಕುರಿತು ಮಾಹಿತಿ ಸಂಗ್ರಹಿಸಿದ ಪೊಲೀಸರು ತನಿಖೆ ನಡೆಸಿ ಬೈಕ್ ಪತ್ತೆ ಮಾಡಿ ಕಾಶಿಪಟ್ನದ ಇಶಾನ್ ಪೂಜಾರಿಯವರಿಗೆ ಹಸ್ತಾಂತರಿಸಿದ್ದಾರೆ.

Exit mobile version