Site icon Suddi Belthangady

ಧರ್ಮಸ್ಥಳದಲ್ಲಿ ಐವತ್ತೆರಡನೇ ವರ್ಷದ ಪುರಾಣಕಾವ್ಯ ವಾಚನ-ಪ್ರವಚನ: ಉದ್ಘಾಟನಾ ಸಮಾರಂಭ, ಕೃತಿ ಬಿಡುಗಡೆ

ಉಜಿರೆ: ಪುರಾಣ ವಾಚನ ಧರ್ಮ ಪ್ರಭಾವನೆಯಾಗುತ್ತದೆ.ಸಾಹಿತ್ಯ ಮತ್ತು ಪುರಾಣ ಗ್ರಂಥಗಳ ಆಳವಾದ ಅಧ್ಯಯನ ಮಾಡಿದ ವಿದ್ವಾಂಸರಿಗೆ ರಾಷ್ಟ್ರಮಟ್ಟದ ಪ್ರಶಸ್ತಿ, ಪುರಸ್ಕಾರಗಳ ಮಾನ್ಯತೆ ದೊರಕಬೇಕು ಎಂದು ಧರ್ಮಸ್ಥಳದ ಧರ್ಮಾಧಿಕಾರಿ ಡಿ. ವೀರೇಂದ್ರ ಹೆಗ್ಗಡೆಯವರು ಹೇಳಿದರು.

ಅವರು ಜು.17 ರಂದು ಧರ್ಮಸ್ಥಳದಲ್ಲಿ ಐವತ್ತೆರಡನೇ ವರ್ಷದ ಪುರಾಣಕಾವ್ಯ ವಾಚನ-ಪ್ರವಚನ ಉದ್ಘಾಟನಾ ಸಮಾರಂಭದಲ್ಲಿ ವಿದ್ವಾನ್ ಬಿ.ಎಲ್. ನಾಗರಾಜು ವಿರಚಿತ `ಶ್ರೀಮದಾದಿತ್ಯ ದರ್ಶನಂ” ಕೃತಿ ಬಿಡುಗಡೆಗೊಳಿಸಿ ಮಾತನಾಡಿದರು.ಪ್ರತಿವರ್ಷ ಧರ್ಮಸ್ಥಳದಲ್ಲಿ ಎರಡು ತಿಂಗಳ ಕಾಲ ಪ್ರತಿ ದಿನ ಸಂಜೆ ಪುರಾಣ ವಾಚನ – ಪ್ರವಚನ ಕಾರ್ಯಕ್ರಮವನ್ನು ಆಕರ್ಷಕವಾಗಿ ಮತ್ತು ವ್ಯವಸ್ಥಿತವಾಗಿ ಆಯೋಜಿಸುವಲ್ಲಿ ಹೇಮಾವತಿ ವಿ. ಹೆಗ್ಗಡೆಯವರ ಮಾರ್ಗದರ್ಶನ ಮತ್ತು ಸಕ್ರಿಯ ಸಹಕಾರವನ್ನು ಹೆಗ್ಗಡೆಯವರು ಸ್ಮರಿಸಿದರು. ಖ್ಯಾತ ವಿದ್ವಾಂಸರಾದ ಬಿ.ಎಲ್. ನಾಗರಾಜು ವಿರಚಿತ`ಶ್ರೀಮದಾದಿತ್ಯ ದರ್ಶನಂ” ಕೃತಿಯಲ್ಲಿ 36 ಸಂಧಿಗಳಲ್ಲಿ ಸಂಕ್ಷಿಪ್ತ ಪರಿಚಯವನ್ನು ಸರಳವಾಗಿ ಮತ್ತು ಸುಲಭಗ್ರಾಹ್ಯವಾಗಿ ವಿವರಿಸಿದ್ದಾರೆ.ಸಾತ್ವಿಕತೆ ಇದ್ದವರಿಗೆ ಸಂತೃಪ್ತಿ ಸಿಗುತ್ತದೆ ಮೊದಲಾದ ಸಾರ್ಥಕ ಬದುಕಿಗೆ ಉಪಯುಕ್ತ ಸಂದೇಶವನ್ನು ಗ್ರಂಥದಲ್ಲಿ ನೀಡಲಾಗಿದೆ. ಕೃತಿಯು ಕುತೂಹಲ ಮತ್ತು ಆಸಕ್ತಿಯಿಂದ ಓದಿಸಿಕೊಂಡು ಹೋಗುತ್ತದೆ.ಅಂದವಾದ ಮುದ್ರಣ ಮತ್ತು ಆಕರ್ಷಕ ಚಿತ್ರಗಳು ಗ್ರಂಥದ ಸೊಗಡನ್ನುಹೆಚ್ಚಿಸಿವೆ. ಪ್ರಕಾಶಕರು ಮತ್ತು ಚಿತ್ರಕಲಾವಿದರನ್ನು ಹೆಗ್ಗಡೆಯವರು ಅಭಿನಂದಿಸಿದರು.

ಯಕ್ಷಗಾನದ ಹಿರಿಯ ಹಾಸ್ಯಕಲಾವಿದ ಪೆರುವಡಿ ನಾರಾಯಣ ಭಟ್ ಪುರಾಣ ಕಾವ್ಯ ವಾಚನ-ಪ್ರವಚನ ಕಾರ್ಯಕ್ರಮವನ್ನು ಉದ್ಘಾಟಿಸಿ ಶುಭ ಹಾರೈಸಿದರು. ಈ ಅವಕಾಶದಿಂದ ತಾನು ಮಹಾಭಾಗ್ಯಶಾಲಿ ಆಗಿದ್ದೇನೆ ಎಂದು ಧನ್ಯತಾಭಾವ ವ್ಯಕ್ತಪಡಿಸಿದರು.ಡಾ. ಪಾದೇಕಲ್ಲು ವಿಷ್ಣುಭಟ್ ಕೃತಿಯ ಪರಿಚಯ ಮಾಡಿದರು. ಗ್ರಂಥದ ರಚನೆಯಲ್ಲಿ ಲೇಖಕರು ಮತ್ತು ಕುಟುಂಬದವರ ಭಗೀರಥ ಪ್ರಯತ್ನವನ್ನು ಅವರು ಶ್ಲಾಘಿಸಿ ಅಭಿನಂದಿಸಿದರು.

ಹರಿಕೃಷ್ಣ ಪುನರೂರು, ವಿದ್ವಾನ್ ಬಿ.ಎಲ್. ನಾಗರಾಜು, ಡಿ. ಹರ್ಷೇಂದ್ರ ಕುಮಾರ್ ಮತ್ತು ಸುಪ್ರಿಯಾ ಹರ್ಷೇಂದ್ರ ಕುಮಾರ್ ಉಪಸ್ಥಿತರಿದ್ದರು.

ಹವ್ಯಾಸಿ ಯಕ್ಷಗಾನ ಕಲಾವಿದ ಉಜಿರೆ ಅಶೋಕ ಭಟ್ ಸ್ವಾಗತಿಸಿದರು. ಶ್ರೀನಿವಾಸ ರಾವ್ ಧರ್ಮಸ್ಥಳ ಧನ್ಯವಾದ ಸಲ್ಲಿಸಿದರು.

ಎರಡು ತಿಂಗಳ ಕಾಲ ಪ್ರತಿದಿನ ಸಂಜೆ ಗಂಟೆ 6.30 ರಿಂದ 8.00 ರ ವರೆಗೆಪುರಾಣ ಕಾವ್ಯ ವಾಚನ ಪ್ರವಚನ ನಡೆಯಲಿದೆ.

Exit mobile version