Site icon Suddi Belthangady

ನೆರಿಯ ಸ್ಮಶಾನ ಸ್ಥಳದ ಕೊರತೆಗೆ ತೆರೆ- ಜಾಗ ಮೀಸಲಿರಿಸಿದ ತಹಶೀಲ್ದಾರ್- ಅಂತ್ಯಸಂಸ್ಕಾರಕ್ಕೆ ವ್ಯವಸ್ಥೆ

ಬೆಳ್ತಂಗಡಿ: ನೆರಿಯ ಸ್ಮಶಾನದ ಗೊಂದಲವನ್ನು ತಹಶೀಲ್ದಾರ್ ಪಂಚಾಯತ್ ಬಳಿ ಇರುವ ಕಂದಾಯ ಜಾಗವನ್ನು ಮೀಸಲಿರಿಸುವ ಮೂಲಕ ಸಮಸ್ಯೆ ಪರಿಹರಿಸಿದ ಪರಿಣಾಮ ಗ್ರಾಮಸ್ಥರು ಪ್ರತಿಭಟನೆಯನ್ನು ಕೊನೆಗೊಳಿಸಿದ್ದಾರೆ.

ನೆರಿಯ ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ ಸ್ಮಶಾನ ಇಲ್ಲದಿರುವ ಬಗ್ಗೆ ಗ್ರಾಮಸ್ಥರು ಮೃತ ದೇಹ ಇಟ್ಟು ಪ್ರತಿಭಟನೆಯನ್ನು ಜು.15 ರಂದು ನಡೆಸಿದರು.ಸ್ಮಶಾನ ನಿಗದಿಗೊಳಿಸದೇ ಮೃತದೇಹದ ಅಂತಿಮ ಸಂಸ್ಕಾರ ಮಾಡುವುದಿಲ್ಲ ಎಂದು ಗ್ರಾಮಸ್ಥರು ಪ್ರತಿಭಟನೆ ನಡೆಸಿದ್ದರು.

ನೆರಿಯ ಗ್ರಾಮದ ಸಂಜೀವಗೌಡ (49ವ ) ರವರು ಮೃತ ಪಟ್ಟಿದ್ದು, ಮೃತರ ಅಂತ್ಯ ಸಂಸ್ಕಾರ ನಡೆಸಲು ನೆರಿಯ ಗ್ರಾಮದಲ್ಲಿ ಸ್ಮಶಾನ ಇರದೇ ಇರುವುದರಿಂದ ನೆರಿಯ ಗ್ರಾಮ ಪಂಚಾಯತ್ ಎದುರುಗಡೆ ಅಂತ್ಯ ಸಂಸ್ಕಾರ ನಡೆಸಲು ಗ್ರಾಮಸ್ಥರು ಸಿದ್ಧತೆ ನಡೆಸಿದ್ದರು.

ಈ ವೇಳೆ ಸ್ಥಳಕ್ಕೆ ಬೆಳ್ತಂಗಡಿ ತಹಶೀಲ್ದಾರ್ ಭೇಟಿ ನೀಡಿದಾಗ ಇವತ್ತೇ ಸ್ಮಶಾನಕ್ಕೆ ಜಾಗ ಗುರುತಿಸಿಕೊಡಬೇಕು ಅದೇ ಜಾಗದಲ್ಲಿ ಮೃತದೇಹದ ಅಂತ್ಯಸಂಸ್ಕಾರ ಮಾಡುವುದಾಗಿ ಗ್ರಾಮಸ್ಥರು ಪಟ್ಟು ಹಿಡಿದಿದ್ದರು.

ಈಗಾಗಲೇ ಇಟ್ಟಾಡಿ ಎಂಬಲ್ಲಿ ಸ್ಮಶಾನಕ್ಕಾಗಿ ಜಾಗ ಮೀಸಲಿರಿಸಿದ ಸ್ಥಳವನ್ನು ತಹಶೀಲ್ದಾರ್ ಹಾಗೂ ಅಧಿಕಾರಿಗಳು ಪರಿಶೀಲಿಸುವ ಸಂದರ್ಭ ಸ್ಥಳೀಯರು ಆ ಜಾಗದಲ್ಲಿ ಸ್ಮಶಾನ ಮಾಡಲು ವಿರೋಧ ವ್ಯಕ್ತಪಡಿಸಿದರಲ್ಲದೇ ಯಾವುದೇ ಕಾರಣಕ್ಕೂ ಅಂತ್ಯ ಸಂಸ್ಕಾರಕ್ಕೆ ಅವಕಾಶ ಕೊಡುವುದಿಲ್ಲ ಎಂದು ರಸ್ತೆಗೆ ಅಡ್ಡಲಾಗಿ ಕೂತಾಗ ಸ್ವಲ್ಪ ಹೊತ್ತು ಗೊಂದಲದ ವಾತಾವರಣ ನಿರ್ಮಾಣವಾಗಿತ್ತು.

ಈ ಸಂದರ್ಭದಲ್ಲಿ ಗ್ರಾಮಸ್ಥರು ಪಂಚಾಯತ್ ಮುಂಭಾಗದಲ್ಲಿ ಅಂತ್ಯಸಂಸ್ಕಾರ ಮಾಡಲು ಮುಂದಾಗಿದ್ದಲ್ಲದೇ ಪಂಚಾಯತ್ ಪಕ್ಕದಲ್ಲಿ ಸರ್ಕಾರಿ ಭೂಮಿ ಇದೆ ಅದನ್ನು ಸ್ಮಶಾನಕ್ಕೆ ಮೀಸಲಿರಿಸಿ ಎಂದು ತಹಶೀಲ್ದಾರ್ ಅವರನ್ನು ಒತ್ತಾಯಿಸಿದರು.

ಈ ವೇಳೆ ತಹಶೀಲ್ದಾರ್ ಸೇರಿದಂತೆ ಅಧಿಕಾರಿಗಳು ಪಂಚಾಯತ್ ಬಳಿ ಇರುವ ಜಾಗವನ್ನು ಪರಿಶೀಲಿಸಿ ರುದ್ರಭೂಮಿ ಅಲ್ಲೆ ಮಾಡುವಂತೆ ಸೂಚಿಸಿದಾಗ ಗ್ರಾಮಸ್ಥರೆಲ್ಲ ಪ್ರತಿಭಟನೆಯನ್ನು ಹಿಂಪಡೆದು ಅದೇ ಜಾಗದಲ್ಲಿ ಸಂಜೀವ ಗೌಡ ಅವರ ಅಂತ್ಯ ಸಂಸ್ಕಾರವನ್ನು ನೆರವೇರಿಸಲು ವ್ಯವಸ್ಥೆ ಮಾಡುವ ಮೂಲಕ ತಾರಕಕ್ಕೇರಿದ ನೆರಿಯ ಸ್ಮಶಾನದ ಪ್ರತಿಭಟನೆ ಸುಖಾಂತ್ಯಗೊಂಡಿದೆ.

Exit mobile version