ಬೆಳ್ತಂಗಡಿ: ವೇಣೂರು ಸಮೀಪದ ಬಜಿರೆ ಗ್ರಾಮದ ಬಡಾರು ಕೊರಗಲ್ಲುವಿನಲ್ಲಿರುವ ಕೊರಗಜ್ಜನ ಕಟ್ಟೆಗೆ ಕಿಡಿಗೇಡಿಗಳು ಬೆಂಕಿ ಹಚ್ಚಿದ ಘಟನೆ ಜುಲೈ 11ರಂದು ಬೆಳಿಗ್ಗೆ 10.30ರ ವೇಳೆಗೆ ನಡೆದಿದೆ. ಈ ಕುರಿತು ಸ್ವಾಮಿ ಕೊರಗಜ್ಜ ಸೇವಾ ಟ್ರಸ್ಟ್ ಅಧ್ಯಕ್ಷ ಪ್ರದೀಪ್ ಕುಮಾರ್ ಹೆಗ್ಡೆ ನೀಡಿದ ದೂರಿನಂತೆ ಬಜಿರೆ ಗ್ರಾಮದ ಬಾಡಾರು ನಿವಾಸಿಗಳಾದ ಹರೀಶ್ ಪೂಜಾರಿ, ಡಾ.ರಾಜೇಶ್, ರಮೇಶ್ ಕುಡ್ಮೇರು, ಓಂ ಪ್ರಕಾಶ್ ಮತ್ತು ಪ್ರಶಾಂತ್ ಬಂಟ್ವಾಳ ಎಂಬವರ ವಿರುದ್ಧ ವೇಣೂರು ಪೊಲೀಸ್ ಠಾಣೆಯಲ್ಲಿ ಅಪರಾಧ ಕ್ರಮಾಂಕ 39/2023ರನ್ವಯ ಕಲಂ 436, 109, 295(ಎ) ಜೊತೆಗೆ 34 ಐ.ಪಿ.ಸಿಯಡಿ ಕೇಸು ದಾಖಲಾಗಿದೆ. ಬಜಿರೆ ಗ್ರಾಮದ ಬಾಡಾರು ಎಂಬಲ್ಲಿಯ ಸರಕಾರಿ ಜಮೀನಿನಲ್ಲಿರುವ ಸ್ವಾಮಿ ಕೊರಗಜ್ಜನ ಕಟ್ಟೆಯಲ್ಲಿ ಊರಿನವರು ಕೊರಗಜ್ಜನನ್ನು ಆರಾಧಿಸಿಕೊಂಡು ಬರುತ್ತಿದ್ದಾರೆ. ಈ ಕೊರಗಜ್ಜನ ಕಟ್ಟೆಯನ್ನು ಹರೀಶ್ ಮತ್ತು ಇತರರು ಸೇರಿಕೊಂಡು ಊರಿನ ಸಾರ್ವಜನಿಕ ಭಕ್ತಾಧಿಗಳಿಗೆ ತಿಳಿಸದೆ ತಮ್ಮ ಸ್ವಂತ ಸ್ಥಳಕ್ಕೆ ಕೊಂಡುಹೋಗಿ ಪ್ರತಿಷ್ಠಾಪನೆ ಮಾಡಿದ್ದಾರೆ. ನಂತರ ಡಾ. ರಾಜೇಶ್ ಮತ್ತಿತರರು ಜುಲೈ 11ರಂದು ವಿವಾದಿತ ಕೊರಗಜ್ಜ ಕಟ್ಟೆಯನ್ನು ಕೆಡವಿ ಹೊಸದಾಗಿ ಕೆಸರು ಕಲ್ಲು ಹಾಕಲು ಯತ್ನಿಸಿದ್ದಾರೆ. ಆ ಸಮಯ ದೂರದಾರ ಪ್ರದೀಪ್ ಕುಮಾರ್ ಹೆಗ್ಡೆ ಮತ್ತು ಇತರ ಭಕ್ತಾಧಿಗಳು ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಡಾ. ರಾಜೇಶ್‌ರವರು ಅವರ ಸ್ವಂತ ಸ್ಥಳದಲ್ಲಿ ಪ್ರತಿಷ್ಠಾಪನೆ ಮಾಡಿದ ಬಳಿಕ ಹಳೆಯ ಕಟ್ಟೆಗೆ ದೂರುದಾರ ಪ್ರದೀಪ್ ಕುಮಾರ್ ಹೆಗ್ಡೆ ಮತ್ತು ಇತರ ಸಾರ್ವಜನಿಕ ಭಕ್ತರು ಚಪ್ಪರ ಹಾಕಿ ಆರಾಧಿಸಿಕೊಂಡು ಬರುತ್ತಿದ್ದಾರೆ. ಇದನ್ನು ಸಹಿಸದ ಹರೀಶ್ ಪೂಜಾರಿ ಎಂಬವರು ಡಾ.ರಾಜೇಶ್, ರಮೇಶ್ ಕುಡ್ಮೇರು, ಓಂಪ್ರಕಾಶ್ ಮತ್ತು ಪ್ರಶಾಂತ್ ಬಂಟ್ವಾಳರವರ ಕುಮ್ಮಕ್ಕಿನಿಂದ ಚಪ್ಪರಕ್ಕೆ ಬೆಂಕಿ ಕೊಟ್ಟು ಆರಾಧನಾ ಕೇಂದ್ರಕ್ಕೆ ಹಾನಿ ಉಂಟು ಮಾಡಿ ಸಾರ್ವಜನಿಕ ಭಕ್ತರ ಧಾರ್ಮಿಕ ಭಾವನೆಗೆ ಧಕ್ಕೆ ಉಂಟು ಮಾಡಿದ್ದಾರೆ ಎಂದು ಎಫ್‌ಐಆರ್‌ನಲ್ಲಿ ಉಲ್ಲೇಖಿಸಲಾಗಿದೆ.
ಡಿವೈಎಸ್‌ಪಿ ಡಾ. ಗಾನಾ ಕುಮಾರ್ ಭೇಟಿ- ಪ್ರಮುಖ ಆರೋಪಿ ಹರೀಶ್ ಪೂಜಾರಿ ಬಂಧನ:
ಸ್ವಾಮಿ ಕೊರಗಜ್ಜನ ಕಟ್ಟೆಗೆ ಬೆಂಕಿ ಹಾಕಿದ ಘಟನೆ ನಡೆದಿರುವ ವೇಣೂರು ಸಮೀಪದ ಬಜಿರೆ ಗ್ರಾಮದ ಬಡಾರು ಕೊರಗಲ್ಲುವಿಗೆ ಡಿವೈಎಸ್‌ಪಿ ಡಾ. ಗಾನಾ ಪಿ. ಕುಮಾರ್ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಪುತ್ತೂರು ಉಪವಿಭಾಗದ ಡಿವೈಎಸ್‌ಪಿಯಾಗಿದ್ದು ಇದೀಗ ಬಂಟ್ವಾಳ ಡಿವೈಎಸ್‌ಪಿಯ ಪ್ರಭಾರ ಜವಾಬ್ದಾರಿಯಲ್ಲಿರುವ ಡಾ.ಗಾನಾ ಪಿ. ಕುಮಾರ್ ಅವರು ಘಟನಾ ಸ್ಥಳದಲ್ಲಿ ಪರಿಶೀಲನೆ ನಡೆಸಿದ್ದು ತನಿಖೆಗೆ ಮಾರ್ಗದರ್ಶನ ನೀಡಿದ್ದಾರೆ. ಪ್ರಕರಣದ ತನಿಖಾಧಿಕಾರಿಯಾಗಿರುವ ವೇಣೂರು ಪೊಲೀಸ್ ಠಾಣೆಯ ಸಬ್‌ಇನ್ಸ್‌ಪೆಕ್ಟರ್ ಸೌಮ್ಯರವರು ಕಾರ್ಯಾಚರಣೆ ನಡೆಸಿ ಪ್ರಮುಖ ಆರೋಪಿ ಬಾಡಾರು ನಿವಾಸಿ ಹರೀಶ್ ಪೂಜಾರಿ ಎಂಬಾತನನ್ನು ಬಂಧಿಸಿದ್ದಾರೆ. ಬಂಧಿತ ಹರೀಶ್ ಪೂಜಾರಿಯನ್ನು ಬೆಳ್ತಂಗಡಿ ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದೆ.
ತಹಶೀಲ್ದಾರ್ ಭೇಟಿ: ಘಟನಾ ಸ್ಥಳಕ್ಕೆ ಬೆಳ್ತಂಗಡಿ ತಹಶೀಲ್ದಾರ್ ಸುರೇಶ್ ಕುಮಾರ್ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಕಾನೂನು ಸುವ್ಯವಸ್ಥೆ ಕಾಪಾಡುವ ದೃಷ್ಠಿಯಿಂದ ಘಟನಾ ಸ್ಥಳದ ಆಸುಪಾಸಿಗೆ ಜನರು ಪ್ರವೇಶದಂತೆ ನಿರ್ಬಂಧ ವಿಧಿಸಲಾಗಿದೆ.