Site icon Suddi Belthangady

ಬೆಳ್ತಂಗಡಿ ಹೋಲಿ ರಿಡೀಮರ್ ಶಾಲೆಯಲ್ಲಿ ಎಸ್.ಎಸ್.ಎಲ್.ಸಿ ವಿದ್ಯಾರ್ಥಿಗಳು ಮತ್ತು ಪೋಷಕರಿಗೆ ಸಭೆ

ಬೆಳ್ತಂಗಡಿ: ಹೋಲಿ ರಿಡೀಮರ್ ಆಂಗ್ಲ ಮಾಧ್ಯಮ ಶಾಲೆ ಬೆಳ್ತಂಗಡಿಯಲ್ಲಿ ಜು.10 ರಂದು 10ನೇ ತರಗತಿಯ ಶಿಕ್ಷಕ ಮತ್ತು ಪೋಷಕರ ಸಭೆಯನ್ನು ಶಾಲಾ ಸಭಾಂಗಣದಲ್ಲಿ ನಡೆಸಲಾಯಿತು.

ಶಾಲಾ ಮುಖ್ಯೋಪಾಧ್ಯಾಯರಾದ ವಂ.ಫಾ ಕ್ಲಿಫರ್ಡ್ ಪಿಂಟೋರವರು ಶಾಲಾ ನೂತನ ಸಂಚಾಲಕರಾದ ಅತೀ ವಂ.ಫಾ.ವಾಲ್ಟರ್ ಡಿಮೆಲ್ಲೋರವರನ್ನು ಪರಿಚಯಿಸಿ, ಶಾಲಾ ಯೋಜನೆ ಮತ್ತು ನಿಯಮಗಳನ್ನು ಸವಿವರವಾಗಿ ತಿಳಿಸಿದರು.

ಶಾಲಾ ಸಂಚಾಲಕರಾದ ಅತೀ ವಂ.ಫಾ ವಾಲ್ಟರ್ ಡಿಮೆಲ್ಲೋರವರು ವಿದ್ಯಾರ್ಥಿಗಳು ಶಿಸ್ತು ಹಾಗೂ ಶ್ರದ್ಧೆಯಿಂದ ಅಭ್ಯಾಸ ಮಾಡಿ ಶಾಲೆಗೆ ಉತ್ತಮ ಫಲಿತಾಂಶ ತರಬೇಕೆಂದು ನುಡಿದು ಶುಭಹಾರೈಸಿದರು.

ಸಭೆಗೆ ಸಂಪನ್ಮೂಲ ವ್ಯಕ್ತಿಯಾಗಿ ಆಗಮಿಸಿದ ಮಡಂತ್ಯಾರು ಸೇಕ್ರೆಡ್ ಹಾರ್ಟ್ ಕಾಲೇಜಿನ ನಿವೃತ್ತ ಪ್ರಾಂಶುಪಾಲರು ಹಾಗೆಯೇ ಮಳೆಕೊಯ್ಲು, ಜಲಮರುಪೂರಣ, ಸಾವಯವ ಕೃಷಿಯಲ್ಲಿ ತಮ್ಮನ್ನು ತೊಡಗಿಸಿಕೊಂಡು ನೂರಾರು ವಿದ್ಯಾರ್ಥಿಗಳಿಗೆ ಜ್ಞಾನಧಾರೆ ಎರೆದ ಡಾ.ಜೋಸೆಫ್ ಎನ್.ಎಮ್ ರವರು ಮಾತನಾಡುತ್ತಾ ವಿದ್ಯಾರ್ಥಿಗಳು ದೇವರಲ್ಲಿ ನಂಬಿಕೆ ಇಟ್ಟು ಶ್ರದ್ದೆ ಮತ್ತು ಕಠಿಣ ಪರಿಶ್ರಮದಿಂದ ಓದಿದಾಗ ನಿರೀಕ್ಷಿತ ಪ್ರತಿಫಲ ಸಿಗಲು ಸಾಧ್ಯ ಪೋಷಕರು ಮಕ್ಕಳಿಗೆ ಓದಲು ಪೂರಕವಾದ ವಾತಾವರಣವನ್ನು ಸೃಷ್ಟಿಸಬೇಕು ಮತ್ತು ಕಲಿಕೆಗೆ ಸಹಕರಿಸಬೇಕೆಂದರು.ಶಿಕ್ಷಕ ರಕ್ಷಕ ಸಂಘಕ್ಕೆ ಪದಾಧಿಕಾರಿಗಳನ್ನು ಆಯ್ಕೆ ಮಾಡಲಾಯಿತು.

ಸಭೆಯಲ್ಲಿ ಸಂಘದ ಕಾರ್ಯದರ್ಶಿ ಅನಿತಾ ಉಪಸ್ಥಿತರಿದ್ದರು.ಸಹಶಿಕ್ಷಕಿಯರಾದ ಪ್ರೀತಾ ಡಿಸೋಜ ಸ್ವಾಗತಿಸಿ, ಪ್ರಭಾ ಗೌಡ ವಂದಿಸಿ, ಬ್ಲೆಂಡಿನ್ ರೋಡ್ರಿಗಸ್ ಕಾರ್ಯಕ್ರಮ ನಿರ್ವಹಿಸಿದರು.

Exit mobile version