ಮಡಂತ್ಯಾರು: ರಾಜ್ಯ ಉಚ್ಚನ್ಯಾಯಾಲಯದ ತಡೆಯಾಜ್ಞೆಯ ಹಿನ್ನಲೆಯಲ್ಲಿ ಮಡಂತ್ಯಾರು ಗ್ರಾಮ ಪಂಚಾಯಿತಿಯ 1 ಪಾರೆಂಕಿ ಕ್ಷೇತ್ರಕ್ಕೆ ನಡೆಯಬೇಕಾಗಿದ್ದ ಉಪ ಚುನಾವಣೆ ಪ್ರಕ್ರಿಯೆಯನ್ನು ರಾಜ್ಯ ಚುನಾವಣಾ ಆಯೋಗವು ತಡೆಹಿಡಿದು ಆದೇಶ ನೀಡಿದೆ.
ಮಡಂತ್ಯಾರು ಗ್ರಾಮ ಪಂಚಾಯತದ ಪಾರೆಂಕಿ 1ನೇ ಕ್ಷೇತ್ರದಲ್ಲಿ ಸದಸ್ಯರಾಗಿದ್ದ ಗೋಪಾಲಕೃಷ್ಣ ಕೆ. ಇವರ ಆಯ್ಕೆಯನ್ನು ಆಸಿಂಧುಗೊಳಿಸಿ, ಹೊಸದಾಗಿ ಚುನಾವಣೆ ನಡೆಸಲು ಬೆಳ್ತಂಗಡಿ ಹಿರಿಯ ಸಿವಿಲ್ ನ್ಯಾಯಾಲಯ ಆದೇಶ ನೀಡಿತ್ತು.ಈ ಆದೇಶದಂತೆ ಈ ಸ್ಥಾನ ಖಾಲಿ ಎಂದು ಜಿಲ್ಲಾಧಿಕಾರಿಗಳು ನೀಡಿದ ವರದಿಯಂತೆ ಮಡಂತ್ಯಾರು ಗ್ರಾಮ ಪಂಚಾಯತದ ಪಾರೆಂಕಿ 1ನೇ ಸ್ಥಾನಕ್ಕೆ ಜು.23ರಂದು ಉಪಚುನಾವಣೆ ನಡೆಸಲು ದಿನಾಂಕ ನಿಗದಿಯಾಗಿತ್ತು. ಉಪಚುನಾವಣೆಯ ಪ್ರಕ್ರಿಯೆ ಜು.6ರಿಂದ ಪ್ರಾರಂಭಗೊಂಡಿದ್ದು, ಈ ಸ್ಥಾನಕ್ಕೆ ಯಾವುದೇನಾಮಪತ್ರ ಸಲ್ಲಿಕೆಯಾಗಿರಲಿಲ್ಲ. ಇದೀಗ ಉಚ್ಚ ನ್ಯಾಯಾಲಯ ಗೋಪಾಲಕೃಷ್ಣ ಕೆ. ಇವರ ಆಯ್ಕೆಯನ್ನು ಆಸಿಂಧು ಗೊಳಿಸಿದ ಆದೇಶಕ್ಕೆ ತಡೆಯಾಜ್ಞೆ ನೀಡಿ ಮಧ್ಯಾಂತರ ಆದೇಶ ನೀಡಿದೆ. ಈ ಹಿನ್ನಲೆಯಲ್ಲಿ ಮಡಂತ್ಯಾರು ಗ್ರಾಮ ಪಂಚಾಯತದ ಪಾರೆಂಕಿ 1ನೇ ಕ್ಷೇತ್ರಕ್ಕೆ ನಡೆಯಬೇಕಾಗಿದ್ದ ಉಪ ಚುನಾವಣೆ ಪ್ರಕ್ರಿಯೆನ್ನು ತಕ್ಷಣಕ್ಕೆ ತಡೆಹಿಡಿಯುವಂತೆ ಚುನಾವಣಾ ಆಯೋಗ ಆದೇಶ ನೀಡಿದೆ. ಉಪ ಚುನಾವಣಾ ಪಕ್ರಿಯೆಗೆ ಸಂಬಂಧಪಟ್ಟ ದಾಖಲೆಗಳನ್ನು ಮುಂದಿನ ಆದೇಶದವರೆಗೆ ಜಿಲ್ಲಾ ಖಜಾನೆಯಲ್ಲಿ ಸಂರಕ್ಷಿಸಿಡುವಂತೆ ಸಂಬಂಧಪಟ್ಟ ಗ್ರಾಮ ಪಂಚಾಯಿತಿಯ ಚುನಾವಣಾಧಿಕಾರಿಗಳಿಗೆ ಸೂಕ್ತ ಸೂಚನೆಯನ್ನು ನೀಡಬೇಕೆಂದು ಮತ್ತು ಸದರಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಮತದಾರರಿಗೆ ಈ ಬಗ್ಗೆ ಸೂಕ್ತ ತಿಳುವಳಿಕೆಯನ್ನು ನೀಡಬೇಕೆಂದು ಆದೇಶದಲ್ಲಿ ತಿಳಿಸಲಾಗಿದೆ.