ಬೆಳ್ತಂಗಡಿ : ರಾಜ್ಯದ ಬಹುಜನ ಚಳುವಳಿಯ ಹಿರಿಯ ನೇತಾರ ದಿ.ಪಿ.ಡೀಕಯ್ಯ ಅವರು ನಡೆಸಿದ ಹೋರಾಟಗಳು ಮತ್ತು ಅವರು ಸಮಾಜಕ್ಕೆ ನೀಡಿದ ಕೊಡುಗೆಗಳು ಶಾಶ್ವತವಾಗಿ ಇತರರಿಗೂ ಪ್ರೇರಣೆಯಾಗುವ ರೀತಿಯಲ್ಲಿ, ಅವರ ಕುಟುಂಬದರೊಂದಿಗೆ ಸಮಾಲೋಚಿಸಿ, ಬೆಳ್ತಂಗಡಿ ತಾಲೂಕಿನಲ್ಲಿ ಅಗತ್ಯ ಕ್ರಮಗಳನ್ನು ಕೈಗೊಳ್ಳುವುದಾಗಿ ಬೆಳ್ತಂಗಡಿ ಶಾಸಕ ಹರೀಶ್ ಪೂಂಜ ಹೇಳಿದರು.
ಅವರು ಜು.8ರಂದು ದಿ. ಪಿ.ಡೀಕಯ್ಯ ಅವರ ಹುಟ್ಟೂರು ಬೆಳ್ತಂಗಡಿ ತಾಲೂಕಿನ ಕಣಿಯೂರು ಗ್ರಾಮದ ಪೊಯ್ಯ ಸಂಗಮ್ ವಿಹಾರದ ಆವರಣದಲ್ಲಿ ಸ್ಥಾಪಿಸಲಾದ ಪಿ. ಡೀಕಯ್ಯ ಅವರ ಅಮೃತ ಶಿಲಾ ಪ್ರತಿಮೆ ಅನಾವರಣಗೊಳಿಸಿ ಮಾತನಾಡಿದರು.
ಸುಳ್ಯ ವಿಧಾನ ಸಭಾ ಕ್ಷೇತ್ರದ ಶಾಸಕಿ ಕು. ಭಾಗೀರಥಿ ಮುರುಳ್ಯ ಅವರು ಬಹುಜನ ಚಳುವಳಿಯ ನೇತಾರ ಪಿ.ಡೀಕಯ್ಯರವರ ನೂತನ ಪ್ರತಿಮೆಗೆ ಹಾರಾರ್ಪಣೆಗೈದು ಗೌರವ ಸಲ್ಲಿಸಿ ಪಿ.ಡೀಕಯ್ಯರವರ ಬದುಕು -ಹೋರಾಟಗಳ ಸಂಸ್ಮರಣಾ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡುತ್ತಾ, ಹೋರಾಟದ ಜೊತೆಗೆ ನಮಗೆ ಶಕ್ತಿ ಬೇಕು, ಸಮಾಜ ಅಂದ ಮೇಲೆ ಒಂದೇ ಸಮಾಜ ಬದುಕಲು ಸಾಧ್ಯವಿಲ್ಲ ನಮ್ಮೆಲ್ಲರನ್ನೂ ಒಗ್ಗೂಡಿಸಿಕೊಂಡು ಬದುಕಬೇಕಾಗುತ್ತದೆ, ಎಲ್ಲರ ಪ್ರೀತಿ, ವಿಶ್ವಾಸಗಳನ್ನು ಗಳಿಸಿಕೊಂಡು ಕೆಲಸ ಮಾಡಬೇಕಾಗುತ್ತದೆ, ಡೀಕಯ್ಯರವರು ಕೂಡ ಆ ಕೆಲಸ ಮಾಡಿದ್ದಾರೆ.ಸುಳ್ಯದಲ್ಲಿ ಅನೇಕ ಹಿರಿಯರು ಅವಕಾಶ ಕೊಡಬೇಕೆಂದು ಹೋರಾಟಗಳನ್ನು ಮಾಡುತ್ತಾ ಬಂದಿದ್ದಾರೆ ಎಂದರು.
ದ.ಕ.ಅಹಿಂದ ಚಳುವಳಿಯ ಅಧ್ಯಕ್ಷ ಪದ್ಮನಾಭ ನರಂಗಾನ ಅವರು ಅಧ್ಯಕ್ಷತೆ ವಹಿಸಿದರು.
ಗ್ರಾ.ಪಂ.ಅಧ್ಯಕ್ಷೆ ಗಾಯತ್ರಿ ಗೋಪಾಲ ಗೌಡ ಮಾತನಾಡಿ ಪಿ.ಡೀಕಯ್ಯರವರು ಆರಂಭಿಸಿದ ಚಳುವಳಿಯನ್ನು ಮುಂದುವರಿಸಬೇಕು ಅವರ ಆದರ್ಶಗಳನ್ನು ಅನುಸರಿಸಬೇಕು ಎಂದರು.
ಕರ್ನಾಟಕ ದಸಂಸ (ಪ್ರೊ.ಬಿ.ಕೆ.ಸ್ಥಾಪಿತ) ರಾಜ್ಯ ಸಂಘಟನಾ ಸಂಚಾಲಕ ಎಂ.ದೇವದಾಸ್, ಕರ್ನಾಟಕ ದ.ಸಂ.ಸ. ಜಿಲ್ಲಾ ಸಂಚಾಲಕ ರಘು ಎಕ್ಕಾರು, ನ್ಯಾಯವಾದಿ , ಸಿಪಿಎಂ ಹಿರಿಯ ಮುಖಂಡ ಶಿವಕುಮಾರ್, ಪತ್ರಕರ್ತ ಶಿಬಿ ಧರ್ಮಸ್ಥಳ, ಪ.ಜಾತಿ, ಪ.ವರ್ಗಗಳ ಅಧ್ಯಯನ ಮತ್ತು ಅಭಿವೃದ್ಧಿ ಟ್ರಸ್ಟ್ ಅಧ್ಯಕ್ಷ ಮೋಹನಾಂಗಯ್ಯ ಸ್ವಾಮಿ, ಬಹುಜನ ಸಮಾಜ ಚಳುವಳಿ ರಾಜ್ಯ ಮುಖಂಡ, ಕರ್ನಾಟಕ ರಾಜ್ಯ ಆದಿ ದ್ರಾವಿಡ ಸಮಾಜ ಸೇವಾ ಸಂಘದ ರಾಜ್ಯಾಧ್ಯಕ್ಷ ಶಿವಾನಂದ ಬಲ್ಲಾಳ್ ಬಾಗ್, ಮಾಜಿ ಜಿ.ಪಂ. ಸದಸ್ಯ ಶೇಖರ್ ಕುಕ್ಕೇಡಿ, ಸುಳ್ಯ ತಾ.ಪಂ. ಮಾಜಿ ಅಧ್ಯಕ್ಷ ಚನಿಯ ಕಲ್ತಡ್ಕ, ಪೌರ ಕಾರ್ಮಿಕರ ಸಂಘ ದ.ಕ. ಜಿಲ್ಲಾಧ್ಯಕ್ಷ ಅನಿಲ್ ಕುಮಾರ್, ಸಾಮಾಜಿಕ ಚಿಂತಕ ರಘು ಧರ್ಮಸೇನ್ ಬೆಳ್ತಂಗಡಿ ಮುಂತಾದ ಗಣ್ಯರು ಮಾತನಾಡಿ ನಾಡಿನಲ್ಲಿ ಮಹತ್ವದ ಹೋರಾಟ ಜಾಗೃತಿ ಚಳುವಳಿಗಳ ಮೂಲಕ ನಾಡಿನಲ್ಲಿ ಅಂಬೇಡ್ಕರ್ ಚಿಂತನೆಯನ್ನು ಬಿತ್ತಿ ಹೋದ ಬಹುಜನ ಚಳುವಳಿಯ ನೇತಾರ ಪಿ.ಡೀಕಯ್ಯರವರ ಸಾವಿಗೆ ನ್ಯಾಯ ಕೊಡಿಸಲು ಶ್ರಮಿಸಬೇಕು ಎಂದು ಒಕ್ಕೊರಲ ಅಭಿಪ್ರಾಯಪಟ್ಟರು.
ಸಾಮಾಜಿಕ ಚಿಂತಕ ಎನ್. ಸಿ. ಸಂಜೀವ, ಗ್ರಾ.ಪಂ.ಮಾಜಿ ಅಧ್ಯಕ್ಷ ಸೀತಾರಾಮ ಮಡಿವಾಳ, ಮಹೇಶ್ ಕುಮಾರ್, ಸದಸ್ಯೆ ಸುಮತಿ ಶೆಟ್ಟಿ, ಖಲಂದರ್ ಷಾ ಜುಮ್ಮಾ ಮಸೀದಿ ಸ್ಥಾಪಕ ಜ.ಕಾಸಿಂ ಪದ್ಮುಂಜ ದಿ.ಪಿ.ಡೀಕಯ್ಯರವರ ಚಳುವಳಿಯ ಹಾದಿಯನ್ನು ನೆನಪಿಸಿಕೊಂಡರು.
ವೇದಿಕೆಯಲ್ಲಿ ಹಿರಿಯ ಮುಖಂಡರಾದ ಅಣ್ಣು ಸಾಧನ, ಪೊಡಿಯ ಬಾಂಗೇರು, ರಾಘವ ಕಲ್ಮಂಜ, ಎ ಐ ಕೆ ಎಸ್ ತಾಲೂಕು ಸಮಿತಿ ಉಪಾಧ್ಯಕ್ಷ ಎಚ್. ನೀಲೇಶ್, ಲಕ್ಷ್ಮಣ್ ಜಿ.ಎಸ್. ಮೋನಪ್ಪ ನೀರಾಡಿ ಹಾಗೂ ಪದ್ಮುಂಜ ಸ.ಹಿ.ಪ್ರಾ. ಶಾಲಾ ಮುಖ್ಯೋಪಧ್ಯಾಯಿನಿ ಗಿರಿಜಾ ಉಪಸ್ಥಿತರಿದ್ದರು.
ಪತ್ರಕರ್ತ ಅಚುಶ್ರೀ ಬಾಂಗೇರು ಕಾರ್ಯಕ್ರಮ ನಿರೂಪಿಸಿ, ಗಣಿ ಮತ್ತು ಭೂ ವಿಜ್ಞಾನ ಇಲಾಖೆಯ ಉಪ ನಿರ್ದೇಶಕ ಕೋದಂಡರಾಮಯ್ಯ ಸ್ವಾಗತಿಸಿದರು.ಮಂಗಳೂರು ವಿಶ್ವವಿದ್ಯಾನಿಲಯ ಕಾಲೇಜಿನ ಉಪನ್ಯಾಸಕಿ ಡಾ.ಆಶಾಲತಾ ವಂದಿಸಿದರು.