Site icon Suddi Belthangady

ಸಿ.ಎ. ಪರೀಕ್ಷೆಯಲ್ಲಿ ನಾವರದ ನಿರೀಕ್ಷಾ ಉತ್ತೀರ್ಣ

ಬೆಳ್ತಂಗಡಿ: ದ ಇನ್ಸ್‌ಟ್ಯೂಟ್ ಆಫ್ ಚಾರ್ಟರ್ಡ್ ಅಕೌಂಟೆಂಟ್ಸ್ ಆಫ್ ಇಂಡಿಯಾದವರು 2023ರ ಸಾಲಿನಲ್ಲಿ ನಡೆಸಿದ ಸಿ.ಎ. ಅಂತಿಮ ಪರೀಕ್ಷೆಯಲ್ಲಿ ನಾವರದ ಕು.ನಿರೀಕ್ಷಾ ಉತ್ತಮ ಅಂಕಗಳೊಂದಿಗೆ ಉತ್ತೀರ್ಣರಾಗಿದ್ದಾರೆ.
ನಾವರ ಗ್ರಾಮದ ಯೋಗಕ್ಷೇಮ ನಿವಾಸಿಗಳಾದ ನಿತ್ಯಾನಂದ ನಾವರ ಹಾಗೂ ಪುಷ್ಪಾವತಿ ಎನ್.ನಾವರ ದಂಪತಿಯ ಪುತ್ರಿ ಕು. ನಿರೀಕ್ಷಾ ಚಿಕ್ಕಂದಿನಿಂದಲೇ ಪ್ರತಿಭಾವಂತ ವಿದ್ಯಾರ್ಥಿನಿಯಾಗಿದ್ದರು. ತನ್ನ ಪ್ರಾಥಮಿಕ ಶಿಕ್ಷಣವನ್ನು ಪಿಲ್ಯ ಗುಡ್ ಫ್ಯೂಚರ್ ಚೈಲ್ಡ್ ಆಂಗ್ಲ ಮಾಧ್ಯಮ ಶಾಲೆಯಲ್ಲಿ ಪೂರೈಸಿದ್ದ ಇವರು ಪ್ರೌಢಶಿಕ್ಷಣವನ್ನು ಶೇ.96 ಅಂಕಗಳೊಂದಿಗೆ ವಾಣಿ ಆಂಗ್ಲ ಮಾಧ್ಯಮ ಶಾಲೆಯಲ್ಲಿ, ಪದವಿ ಪೂರ್ವ ಶಿಕ್ಷಣವನ್ನು ಶೇ. 97 ಅಂಕಗಳೊಂದಿಗೆ ಉಜಿರೆ ಶ್ರೀ. ಧ. ಮಂಜುನಾಥೇಶ್ವರ ಕಾಲೇಜಿನಲ್ಲಿ ಮತ್ತು ಪದವಿ ಶಿಕ್ಷಣವನ್ನು ಶೇ.90 ಅಂಕಗಳೊಂದಿಗೆ ಮಂಗಳೂರಿನ ತ್ರಿಶಾ ಕಾಲೇಜ್ ಆಫ್ ಕಾಮರ್ಸ್ ಅಂಡ್ ಮ್ಯಾನೇಜ್‌ಮೆಂಟ್ ಈವ್ನಿಂಗ್ ಕಾಲೇಜ್‌ನಲ್ಲಿ ಪೂರ್ಣಗೊಳಿಸಿದ್ದರು.
2019ರಲ್ಲಿ ಸಿ.ಪಿ.ಟಿ. ಪೂರ್ಣಗೊಳಿಸಿ 2020ರಲ್ಲಿ ಇಂಟರ್ ಮೀಡಿಯೇಟ್, 2020ರಿಂದ 2023ರ ತನಕ ಮಂಗಳೂರಿನ ಪ್ರಸಿದ್ಧ ಚಾರ್ಟೆಡ್ ಅಕೌಂಟೆಂಟ್ ಗಿರಿಧರ ಕಾಮತ್‌ರವರ ಮಾರ್ಗದರ್ಶನದಲ್ಲಿ ಆರ್ಟಿಕಲ್‌ಶಿಪ್ ಪೂರ್ಣಗೊಳಿಸಿ 2023ರ ಮೇ ತಿಂಗಳಿನಲ್ಲಿ ನಡೆದ ಚಾರ್ಟೆರ್ಡ್ ಅಕೌಂಟ್ ಅಂತಿಮ ಪರೀಕ್ಷೆಯಲ್ಲಿ ಉತ್ತೀರ್ಣಗೊಂಡಿದ್ದರು. ಮಂಗಳೂರಿನ ಯುವ ವಾಹಿನಿ ವಿದ್ಯಾನಿಧಿ ಟ್ರಸ್ಟ್‌ನವರಿಂದ ಅಕ್ಷರ ಪುರಸ್ಕಾರ ಪ್ರಶಸ್ತಿ ಪಡೆದಿದ್ದ ಇವರು 2018ರ ಪಿಯು ಪರೀಕ್ಷೆಯಲ್ಲಿ ದಕ್ಷಿಣ ಕನ್ನಡ ಜಿಲ್ಲೆಗೆ ಅರ್ಥಶಾಸ್ತ್ರ ಪರೀಕ್ಷೆಯಲ್ಲಿ 100 ಅಂಕ ಗಳಿಸಿ ಅರ್ಥಶಾಸ್ತ್ರದಲ್ಲಿ ಸರ್ಟಿಫಿಕೇಟ್ ಆಫ್ ಮೆರಿಟ್ ಸಿಕ್ಕಿತ್ತು. ಯುವಜನ ಮೇಳ, ಜೆಸಿಐ ಬೆಳ್ತಂಗಡಿ ಹಾಗೂ ಮಡಂತ್ಯಾರಿನಲ್ಲಿ ನಡೆದ ಮೋನೋ ಆಕ್ಟ್‌ನಲ್ಲಿ ಪ್ರಥಮ ಪ್ರಶಸ್ತಿ ಪಡೆದಿದ್ದಾರೆ. ಸ್ವಚ್ಛ ಭಾರತ ಮತ್ತು ಸೌಹಾರ್ದ ಭಾರತ್‌ನ ಸ್ವಯಂಸೇವಕರಾಗಿ ಕಾರ್ಯನಿರ್ವಹಿಸಿರುವ ಇವರು ರೋಟರಿ ಮತ್ತು ಜೆಸಿಐ ಸಹಭಾಗಿತ್ವದಲ್ಲಿ ನಡೆದ ರಂಗಸಂಭ್ರಮ ಸಮ್ಮರ್ ಕ್ಯಾಂಪ್‌ನಲ್ಲಿ ಭಾಗವಹಿಸಿದ್ದರು. 2020ರಲ್ಲಿ ಮಂಗಳೂರು ವಿಶ್ವವಿದ್ಯಾನಿಲಯ ಆಯೋಜಿಸಿದ ಎನ್‌ಎಸ್‌ಎಸ್ ಕ್ಯಾಂಪ್‌ನಲ್ಲಿ ಭಾಗವಹಿಸಿದ್ದ ನಿರೀಕ್ಷಾರವರು 2017-18ರ ತಾಲೂಕು ಮಟ್ಟದ ವಿಜ್ಞಾನ ವಸ್ತು ಪ್ರದರ್ಶನದಲ್ಲಿ ಪ್ರಶಸ್ತಿ ಗಳಿಸಿದ್ದರು.ಮೂಡಬಿದ್ರೆಯಲ್ಲಿ ನಡೆದ ಕರಾಟೆ ಸ್ಪರ್ಧೆಯಲ್ಲಿ ಪ್ರಶಸ್ತಿ ಪಡೆದಿದ್ದ ಇವರು 2012-13ನೇ ಸಾಲಿನಲ್ಲಿ ಧರ್ಮಾಧಿಕಾರಿ ಡಾ.ಡಿ ವೀರೇಂದ್ರ ಹೆಗ್ಗಡೆ ಅವರಿಂದ ಪ್ರತಿಭಾ ಪುರಸ್ಕಾರ ಸ್ವೀಕರಿಸಿದ್ದರು.ಯುವ ವಾಹಿನಿ ಆಯೋಜಿಸಿದ್ದ ಡೆನ್ನಾನ ಡೆನ್ನನ ಕಾರ್ಯಕ್ರಮದಲ್ಲಿ ಬೆಳ್ತಂಗಡಿ ಘಟಕವನ್ನು ಪ್ರತಿನಿಧಿಸಿ ಅತ್ಯುತ್ತಮ ನಟಿ ಪ್ರಶಸ್ತಿ ಪಡೆದಿದ್ದರು.ಪ್ರತಿಭಾವಂತೆಯಾಗಿರುವ ನಿರೀಕ್ಷಾರವರು ಇದೀಗ ಸಿ.ಎ. ಪರೀಕ್ಷೆಯಲ್ಲಿ ತೇರ್ಗಡೆಯಾಗಿದ್ದಾರೆ.

Exit mobile version