Site icon Suddi Belthangady

ಉಜಿರೆ: ಎಸ್.ಡಿ.ಎಂ ಪದವಿಪೂರ್ವ ವಸತಿ ಕಾಲೇಜಿನಲ್ಲಿ ವಿದ್ಯಾರ್ಥಿ ಸಂಘದ ಪದಗ್ರಹಣ

ಉಜಿರೆ: ಶಿಕ್ಷಣ ಶಿಕ್ಷೆಯೆಂದು ಭಾವಿಸದಿರಿ ಅದು ನಮ್ಮ ಬದುಕು ಕಟ್ಟೋ ದೀವಿಗೆಯಂತೆ.ಪದವಿಪೂರ್ವ ಶಿಕ್ಷಣ ಅವಧಿ ಬಹಳ ಸೂಕ್ಷ್ಮ ಹಾಗೂ ಮಹತ್ವದ್ದು ಆಗಿದ್ದು ಮನಸ್ಸನ್ನು ಅಡ್ಡ ದಾರಿಗೆ ಸೆಳೆದು ಕಲಿಕೆಗೆ ಅಡೆತಡೆಯೊಡ್ದುವ ಮಾಧ್ಯಮಗಳಿಂದ ದೂರವಿರುವುದು ಬಹಳ ಮುಖ್ಯ.ಓದುಗಾರಿಕೆ,ಆಟ,ಯೋಗದ ಮೂಲಕ ಕಲಿಕೆ ಕೇಂದ್ರೀಕರಣಗೊಳಿಸಿದರೆ ಗುರಿ ಮುಟ್ಟಲು ಸಾಧ್ಯ.ಹೆಚ್ಚುತ್ತಿರುವ ತಪ್ಪುಗಳ ಪ್ರಮಾಣದಲ್ಲಿ ಸಂಘರ್ಷಕ್ಕೊಳಗಾದ ಮಕ್ಕಳ ಸಂಖ್ಯೆಯೂ ಹೆಚ್ಚಿದ್ದು ಆ ರೀತಿ ಆಗದಿರಲು ಈ ವಯಸ್ಸಲ್ಲಿ ಮೌಲ್ಯಯುತ ಕಲಿಕೆ ಸಾಧ್ಯವಾಗಬೇಕು, ನಾಯಕತ್ವ ಗುಣಗಳು ವಿದ್ಯಾರ್ಥಿದೆಸೆಯಲ್ಲೇ ಒಡಮೂಡಿಸಿಕೊಳ್ಳುವುದು ಉತ್ತಮವೆಂದು ಮೈಸೂರು ನಗರದ ಮೇಟಗನಹಳ್ಳಿ ಠಾಣೆ ಉಪನಿರೀಕ್ಷಕರಾದ ಹಾಗೂ ಕಾಲೇಜಿನ ಹಳೆ ವಿದ್ಯಾರ್ಥಿ ಶಬರೀಶ್ ಯು.ಆರ್ ಹೇಳಿದರು.
ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ವಸತಿ ಪದವಿಪೂರ್ವ ಕಾಲೇಜಿನಲ್ಲಿ ಹಮ್ಮಿಕೊಂಡಿದ್ದ ‘ವಿದ್ಯಾರ್ಥಿ ಸಂಘದ ಪದಗ್ರಹಣ’ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಮಾತನಾಡಿ ತಾನು ಈ ಮಟ್ಟಕ್ಕೆ ಏರಲು ಸಹಕರಿಸಿದ ವಸತಿ ಪದವಿಪೂರ್ವ ಕಾಲೇಜು ಬಗ್ಗೆ ಪ್ರಸಂಶಿಸಿದರು.

ವಿದ್ಯಾರ್ಥಿ ಸಂಘದ ಅಧ್ಯಕ್ಷನಾಗಿ ದ್ವಿತೀಯ ವರ್ಷದ ಹರ್ಷಿತ್, ಉಪಾಧ್ಯಕ್ಷನಾಗಿ ಆರ್ಯನ್, ಕಾರ್ಯದರ್ಶಿಯಾಗಿ ವರುಣ್ ಎಚ್.ವಿ., ವಿರೋಧ ಪಕ್ಷದ ನಾಯಕನಾಗಿ ವಿನಯ್ ಸಿ. ಎಂ. ಚುನಾಯಿತಗೊಂಡು ಪದಗ್ರಹಣ ಕಾರ್ಯಕ್ರಮದಲ್ಲಿ ಪ್ರಮಾಣವಚನ ಸ್ವೀಕರಿಸಿದರು.
ಶಬರೀಶರು ಕಲಿಕಾರ್ಥಿ ಸಂದರ್ಭದಲ್ಲಿಯೇ ಅತ್ಯಂತ ಪ್ರತಿಭಾನ್ವಿತರಾಗಿದ್ದು ಕಲಿಕೆ ಹಾಗೂ ಸ್ಪೋರ್ಟ್ಸ್ ವಿಷಯಗಳಲ್ಲಿ ಆಸಕ್ತಿಯಿಂದ ತೊಡಗಿಸಿಕೊಂಡ ಕಾರಣ ಈ ಮಟ್ಟಕ್ಕೆ ಏರಲು ಸಾಧ್ಯವಾಗಿದೆ. ನಾಯಕತ್ವದ ಜವಾಬ್ದಾರಿ ಮುಂದಿನ ಭವಿಷ್ಯಕ್ಕೆ ಪೂರಕ. ಅನಗತ್ಯ ಆಕರ್ಷಣೆಗಳಿಗೆ ಒಳಗಾಗದೇ ಬದುಕು ಸುಂದರಗೊಳಿಸಿಯೆಂದು ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಕಾಲೇಜಿನ ಪ್ರಾಂಶುಪಾಲರಾದ ಸುನಿಲ್ ಪಂಡಿತ್ ಹೇಳಿದರು.

ಕಾಲೇಜಿನ ಉಪನ್ಯಾಸಕರು, ಗ್ರಂಥ ಪಾಲಕರು, ವಾರ್ಡನ್ಗಳು ಉಪಸ್ಥಿತರಿದ್ದರು.ಕಾಲೇಜಿನ ಉಪನ್ಯಾಸಕರಾದ ಪವಿತ್ರ ಕುಮಾರ್ ನಿರೂಪಿಸಿ, ವಂದಿಸಿದರು.

Exit mobile version