ಧರ್ಮಸ್ಥಳ :”ಲೋಕಕಲ್ಯಾಣ ಆತ್ಮೋನ್ನತಿಗಾಗಿ ಶ್ರೀ ಗುರುದೇವ ಮಠದಲ್ಲಿ ಜು. 3 ರಿಂದ ಆ.31 ರವರೆಗೆ 60 ದಿನಗಳ ಕಾಲ ಚಾತುರ್ಮಾಸ್ಯ ಕಾರ್ಯಕ್ರಮ ನಡೆಯಲಿದೆ” ಎಂದು ಶ್ರೀ ರಾಮ ಮಹಾಸಂಸ್ಥಾನದ ಜಗದ್ಗುರು ಪೀಠದ ಪೀಠಾಧೀಶ ಸದ್ಗುರು ಶ್ರೀ ಬ್ರಹ್ಮಾನಂದ ಸರಸ್ವತಿ ಸ್ವಾಮೀಜಿ ಹೇಳಿದರು.
ಅವರು ಕನ್ಯಾಡಿ ಶ್ರೀರಾಮ ಕ್ಷೇತ್ರದಲ್ಲಿ ಜೂ.25 ರಂದು ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದರು.ಚಾತುರ್ಮಾಸ್ಯದ ಅಂಗವಾಗಿ ಜು.2ರಂದು ಸಂಜೆ ವ್ರತ ವಿಧಿವಿಧಾನ, ಸುದರ್ಶನ ಹೋಮ ಜು.3ರಂದು ಬೆಳಿಗ್ಗೆ ರಾಮ ತಾರಕ ಯಜ್ಞ, ಶ್ರೀ ರಾಮ ಕ್ಷೇತ್ರದ ಪರಿವಾರ ದೇವರುಗಳಿಗೆ ವಿಶೇಷ ಪೂಜೆ, ಬಳಿಕ ಶ್ರೀ ದೇವಲಿಂಗೇಶ್ವರ ದೇವಾಲಯದಿಂದ ಪುರ ಪ್ರವೇಶ, ಬೆಳಿಗ್ಗೆ 11ಗಂಟೆಯಿಂದ ಧಾರ್ಮಿಕ ಸಭಾ ಕಾರ್ಯಕ್ರಮ ನಡೆಯಲಿದೆ.
ಧಾರ್ಮಿಕ ಸಭಾ ಕಾರ್ಯಕ್ರಮವನ್ನು ಮೀನುಗಾರಿಕೆ, ಬಂದರು ಹಾಗು ಒಳನಾಡು ಜಲ ಸಾರಿಗೆ ಸಚಿವ ಮಂಕಾಳ್ ಎಸ್.ವೈದ್ಯ ಉದ್ಘಾಟಿಸಲಿದ್ದು ಶಾಸಕ ಹರೀಶ್ ಪೂಂಜ ಅಧ್ಯಕ್ಷತೆ ವಹಿಸಲಿದ್ದಾರೆ. ದಕ ಜಿಲ್ಲಾ ಉಸ್ತುವಾರಿ ಸಚಿವ ದಿನೇಶ್ ಗುಂಡೂರಾವ್, ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ ಮಧು ಬಂಗಾರಪ್ಪ, ಸಂಸದ ನಳಿನ್ ಕುಮಾರ್ ಕಟೀಲ್, ವಿಧಾನಸಭಾ ಮಾಜಿ ಅಧ್ಯಕ್ಷ ವಿಶ್ವೇಶ್ವರ ಹೆಗಡೆ ಕಾಗೇರಿ,ಮಾಜಿ ಸಚಿವ ವಿ. ಸುನೀಲ್ ಕುಮಾರ್ ವಿವಿಧ ವಿಧಾನಸಭಾ ಕ್ಷೇತ್ರಗಳ ಶಾಸಕರು, ಮಾಜಿ ಸಚಿವರು,ಮಾಜಿ ಶಾಸಕರು ಭಾಗವಹಿಸಲಿದ್ದಾರೆ.
ಪ್ರತಿದಿನ ಸಾಯಂಕಾಲ 6ರಿಂದ ಸಂಪೂರ್ಣ ರಾಮಾಯಣ ದರ್ಶನಂ, ಶ್ರೀಮದ್ ಭಾಗವತ ಸಪ್ತಾಹ, ಮಹಾಭಾರತ ಕಥಾ ಪ್ರವಚನ,ತಾಳಮದ್ದಳೆ, ಹರಿಕಥೆ ಭಕ್ತಿ ರಸಮಂಜರಿ ಮೊದಲಾದ ಕಾರ್ಯಕ್ರಮಗಳು ನಡೆಯಲಿವೆ.
ಮೌನ ಚಾತುರ್ಮಾಸ್ಯ:
ಈ ಬಾರಿಯ ಚಾತುರ್ಮಾಸ್ಯವನ್ನು ಮೌನ ಚಾತುರ್ಮಾಸ್ಯವಾಗಿ ಆಚರಿಸಲಿದ್ದು ಈ ಅವಧಿಯಲ್ಲಿ ಬರುವ 8 ಭಾನುವಾರಗಳನ್ನು ಹೊರತುಪಡಿಸಿ ಇತರ ದಿನಗಳಲ್ಲಿ ಸೂರ್ಯೋದಯದಿಂದ ಸೂರ್ಯಾಸ್ತದ ತನಕ ಸ್ವಾಮೀಜಿಗಳ ದರ್ಶನ ಇರುವುದಿಲ್ಲ. ಭಾನುವಾರಗಳಂದು ಮಾತ್ರ ಸ್ವಾಮೀಜಿಗಳು ಪೂರ್ತಿ ದಿನ ಭಕ್ತಾದಿಗಳಿಗೆ ದರ್ಶನವನ್ನು ನೀಡಲಿರುವರು ಎಂದು ಹೇಳಿದರು. ಪ್ರಮುಖರಾದ ನೋಟರಿ ವಕೀಲ ಭಗೀರಥ ಜಿ., ಶೈಲೇಶ್ ಕುಮಾರ್ ಕುರ್ತೋಡಿ,ಕೇಶವ ಗೌಡ ಪಿ. ಬೆಳಾಲು, ವಿಶ್ವ ಹಿಂದೂ ಪರಿಷತ್ ವಿಭಾಗ ಸಾಮರಸ್ಯ ಪ್ರಮುಖ್ ಭಾಸ್ಕರ ಧರ್ಮಸ್ಥಳ, ಧರ್ಮಸ್ಥಳ ಗ್ರಾಮ ಪಂಚಾಯತ್ ಉಪಾಧ್ಯಕ್ಷ ಶ್ರೀನಿವಾಸ ರಾವ್,ಅಭಿನಂದನ್ ಹರೀಶ್ ಕುಮಾರ್,ಚಂದನ್ ಕಾಮತ್, ಕೃಷ್ಣಪ್ಪ ಗುಡಿಗಾರ್,ಅಣ್ಣಿ ಪೂಜಾರಿ, ರಾಘವ ಕಲ್ಮ0ಜ, ಪ್ರೀತಮ್ ಡಿ. ಗಣೇಶ್ ಬಜಿಲ, ರಾಧಾಕೃಷ್ಣ ಕಲ್ಮ0ಜ, ಗ್ರಾಮ ಪಂಚಾಯತ್ ಸದಸ್ಯೆ ಭಾರತಿ,ಸುಜಾತಾ ಅಣ್ಣಿ ಪೂಜಾರಿ,ಸೀತಾರಾಮ್ ಬಿ. ಎಸ್. ಬೆಳಾಲು, ಪುರುಷೋತ್ತಮ ಧರ್ಮಸ್ಥಳ, ಪ್ರಕಾಶ್ ಪೂಜಾರಿ ಧರ್ಮಸ್ಥಳ, ಗಂಗಾಧರ ಸಾಲಿಯಾನ್ ಬೆಳಾಲು, ರವೀಂದ್ರ ಪೂಜಾರಿ ಆರ್ಲ ಮತ್ತಿತರರು ಉಪಸ್ಥಿತರಿದ್ದರು. ಗುರುದೇವ ಮಠದ ಟ್ರಸ್ಟಿ ತುಕಾರಾಮ ಸಾಲಿಯಾನ್ ಕಾರ್ಯಕ್ರಮ ನಿರೂಪಿಸಿದರು.
ಚಾತುರ್ಮಾಸ್ಯ: ಸಮಾಜಕ್ಕೆ ಸಂದೇಶ
“ಜನಕಲ್ಯಾಣ ಲೋಕ ಸುಭಿಕ್ಷಕ್ಕೋಸ್ಕರ ಚಾತುರ್ಮಾಸ್ಯ ನಡೆಯುತ್ತದೆ. ಆಧ್ಯಾತ್ಮಿಕ,ಧಾರ್ಮಿಕ ಮೌಲ್ಯಗಳು ಜನರಿಗೆ ಉತ್ತಮ ಸಂದೇಶವನ್ನು ನೀಡುತ್ತವೆ. ಕಾನೂನು ಸಂವಿಧಾನಗಳಿಗೆ ಗೌರವ ನೀಡಿ ಸಂಸ್ಕಾರದ ನಡವಳಿಕೆಯಿಂದ ಸತ್ಪ್ರಜೆಗಳಾಗಿ ಬಾಳಿದಾಗ ಲೋಕಕಲ್ಯಾಣವಾಗುತ್ತದೆ. ಧಾರ್ಮಿಕ ಭಕ್ತಿಯ ಮೌಲ್ಯಗಳನ್ನು ಜನರಲ್ಲಿ ಮೂಡಿಸಲು ಚಾತುರ್ಮಾಸ್ಯ ಪೂರಕವಾಗಿದ್ದು ಈ ಬಾರಿ ಮೌನ ಚಾತುರ್ಮಾಸ್ಯಕ್ಕೆ ಪ್ರಾಧ್ಯಾನತೆ ನೀಡಲಾಗಿದೆ” ಎಂದು ಸ್ವಾಮೀಜಿ ಹೇಳಿದರು.