ಉಜಿರೆ: ಶ್ರೀ.ಧ.ಮಂ.ಅ.ಸೆಕೆಂಡರಿ ಶಾಲೆ ಉಜಿರೆಯಲ್ಲಿ ಯಕ್ಷಗಾನ ತರಬೇತಿಯ ಉದ್ಘಾಟನೆಯನ್ನು ಜೂ.21 ರಂದು ಶ್ರೀ ಧ.ಮಂ ಶಿಕ್ಷಣ ಸಂಸ್ಥೆಯ ಕಾರ್ಯನಿರ್ವಹಣಾಧಿಕಾರಿ ಹರೀಶ್.ವೈ.ಯಂ ದೀಪ ಬೆಳಗಿಸಿ ಉದ್ಘಾಟಿಸಿ, ‘ವಿದ್ಯಾರ್ಥಿಗಳು ಪುಸ್ತಕದ ವಿದ್ಯೆಯೊಂದಿಗೆ ಕಲೆಯೆಂಬ ವಿದ್ಯೆಯನ್ನು ಕರಗತ ಮಾಡಿಕೊಂಡು ಸಿಕ್ಕ ಅವಕಾಶವನ್ನು ಸದುಪಯೋಗಪಡಿಸಿಕೊಳ್ಳಿ’ ಎನ್ನುವ ಕಿವಿ ಮಾತಿನೊಂದಿಗೆ ಶುಭ ಹಾರೈಸಿದರು.
ವಿದ್ಯಾರ್ಥಿನಿಯರಾದ ಕುಮಾರಿ ಅಶ್ವಿತಾ ಹಾಗೂ ಅನ್ವಿತಾ ರಂಗಪ್ರವೇಶ ಮಾಡುವುದರ ಮೂಲಕ ತರಬೇತಿಗೆ ಸ್ಫೂರ್ತಿ ನೀಡಿದರು.
ಶಿಕ್ಷಕ ಚಂದ್ರಶೇಖರ್ ಭಟ್ ರವರು ಪ್ರಾಸ್ತಾವಿಕ ನುಡಿಯೊಂದಿಗೆ ಸ್ವಾಗತಿಸಿದರು.
ಎಂಟನೇ ತರಗತಿಯ ವಿದ್ಯಾರ್ಥಿನಿಯರು ಪ್ರಾರ್ಥನೆ ಮಾಡಿದರು.
ಯಕ್ಷಗಾನದ ಗುರುಗಳಾದ ಬೆಳಾಲು ಲಕ್ಷ್ಮಣಗೌಡ “ಯಕ್ಷಗಾನವು ಕಲ್ಪವೃಕ್ಷವಿದ್ದಂತೆ, ಇದು ತಾಯಿಯಂತೆ ಪ್ರೀತಿ ನೀಡಿ ತಂದೆಯಂತೆ ರಕ್ಷಣೆ ನೀಡುವ ಕಲೆಯ ಆಗರವಿದ್ದಂತೆ” ಎನ್ನುವ ಸಂದೇಶವನ್ನು ನೀಡಿದರು. ಶಾಲಾ ಮುಖ್ಯೋಪಾಧ್ಯಾಯ ಸುರೇಶ್.ಕೆ ಅಧ್ಯಕ್ಷೀಯ ನೆಲೆಯಲ್ಲಿ ಮಾತನಾಡಿ ಕಾರ್ಯಕ್ರಮಕ್ಕೆ ಶುಭ ಹಾರೈಸಿದರು.
ಯಕ್ಷಗಾನ ತರಬೇತಿಯ ಸಂಯೋಜಕ ಕಲಾ ಶಿಕ್ಷಕ ರಾಮ್ ವಂದನಾರ್ಪಣೆಗೈದರು.
10ನೇ ತರಗತಿಯ ವಿದ್ಯಾರ್ಥಿನಿ ಕುಮಾರಿ ಧನಲಕ್ಷ್ಮಿ ಕಾರ್ಯಕ್ರಮದ ನಿರೂಪಣೆ ಮಾಡಿದರು.