Site icon Suddi Belthangady

ರಾಜ್ಯಾದ್ಯಂತ ಸದ್ದು ಮಾಡುತ್ತಿದೆ ‘ಬೇರ’- ಕರಾವಳಿ ತೀರದ ರಾಜಕೀಯ, ಧರ್ಮ ಸಂಘರ್ಷದ ನೈಜ ಚಿತ್ರಣಕ್ಕೆ ಪ್ರೇಕ್ಷಕರಿಂದ ಚಪ್ಪಾಳೆ- ತುಂಬಿಕೊಂಡ ಚಿತ್ರ ಮಂದಿರ

ವಿಟ್ಲ: ಎಸ್.ಎಲ್.ವಿ. ಬುಕ್ಸ್ ಇಂಡಿಯಾ ಪ್ರೈವೇಟ್ ಲಿ.ನ ಆಡಳಿತ ನಿರ್ದೇಶಕರಾದ ದಿವಾಕರ ದಾಸ್ ನೇರ್ಲಾಜೆರವರ ಎಸ್.ಎಲ್.ವಿ. ಕಲರ್ಸ್ ಬ್ಯಾನರ್ ನಲ್ಲಿ ನಿರ್ಮಾಣವಾದ, ವಿನು ಬಳಂಜ ನಿರ್ದೇಶನದಲ್ಲಿ ತಯಾರಾದ ಕರಾವಳಿಯ ವಿಭಿನ್ನ ಕಥಾಹಂದರವನ್ನು ಹೊಂದಿರುವ ‘ಬೇರ’ ಕನ್ನಡ ಚಲನಚಿತ್ರಕ್ಕೆ ಆರಂಭದ ದಿನಗಳಿಂದಲೂ ಪ್ರೇಕ್ಷಕರಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದ್ದು, ಪುತ್ತೂರು, ಮಂಗಳೂರು ಸಹಿತ ರಾಜ್ಯದಾದ್ಯಂತ ಸಿನಿ ಮಂದಿರಗಳು ತುಂಬಿಕೊಂಡಿದೆ.

ಕರಾವಳಿಯಲ್ಲಿ ನಡೆಯುತ್ತಿರುವ ನೈಜ ಸನ್ನಿವೇಶಗಳನ್ನು ‘ಬೇರ ‘ದಲ್ಲಿ ನಿರ್ದೇಶಕ ವಿನು ಬಳಂಜರವರು ಉತ್ತಮ ರೀತಿಯಲ್ಲಿ ಪ್ರೇಕ್ಷಕರ ಮನಮುಟ್ಟುವ ರೀತಿಯಲ್ಲಿ ತೋರಿಸಿರುವುದೇ ಈ ಚಿತ್ರದ ಯಶಸ್ಸಿನ ರಹದಾರಿಯಾಗಿದೆ.

ಹೆದ್ದಾರಿಗೆ ಅಂಟಿಕೊಂಡಿರುವ ಒಂದು ಊರು. ಆ ಊರನ್ನು ಆವರಿಸಿರುವ ಧರ್ಮ ಭೇದದ ಭೀತಿ, ನೆಮ್ಮದಿಯಿಂದ ಇದ್ದ ಊರಲ್ಲಿ ಜಾತಿ ಧರ್ಮದ ಮಧ್ಯೆ ಕೋಲಾಹಲ. ಅಲ್ಲಿಬ್ಬರು ಸ್ನೇಹಿತರು. ಊರ ಕಾಯುವ ಪ್ರೀತಿ ಧರಿಸಿದವರು. ಎರಡೂ ಕಡೆಯ ಆಕ್ರೋಶಕ್ಕೂ ಅವರಿಬ್ಬರು ಸೇರಿ ಹರಿಸಿದ ಎರಡು ಹನಿ ಕಣ್ಣೀರಿನಿಂದ ಊರು ಬದಲಿಸುವ ಅಂತಃಕರಣದ ಕತೆಯೇ ‘ಬೇರ’.

ಒಂದು ಊರನ್ನು ಸ್ವಾರ್ಥಕ್ಕಾಗಿ ಹೇಗೆ ಒಡೆಯಲಾಗುತ್ತದೆ ಎಂಬ ಅತಿಸೂಕ್ಷ್ಮ ವಿಚಾರವನ್ನು ಹಿಡಿದುಕೊಂಡು ಈ‌ ಚಿತ್ರವನ್ನು ನಿರ್ಮಿಸಲಾಗಿದೆ. ಇಲ್ಲಿ ನಮ್ಮ ನಿಮ್ಮಂತಹ ಜನರೇ ಇದ್ದಾರೆ. ದೊಡ್ಡ ಏಕೆ ಬಂದೂಕಿನ ಉಗ್ರವಾದವಿಲ್ಲ. ಸಾಮಾನ್ಯ ಮನುಷ್ಯರ ಮಧ್ಯೆ ಇದ್ದೇ ಬದುಕಿಗೆ ಕೊಳ್ಳಿ ಇಡುವ ಉಗ್ರವಾದವಿದೆ. ಅದನ್ನು ಕಾಯಲೆಂದೇ ಮನುಷ್ಯತ್ವ, ಪ್ರೀತಿ, ಕರುಣೆ ಇದೆ ಎಂಬುದನ್ನು ಸಾರುವ ಸಿನಿಮಾ ಇದು.
ಧರ್ಮ ಸಾಮರಸ್ಯ ಸಾರುವ ಮಾತುಗಳಿವೆ. ಆದರೆ ಆ ಮಾತುಗಳಲ್ಲಿ ಅಂತರಾಳದಲ್ಲಿ ನೋವೇ ತುಂಬಿಕೊಂಡಿದೆ. ಕುಟುಂಬ ಸಮೇತರಾಗಿ ನೋಡುವಂತೆ ಕಥೆಯನ್ನು ಹೆಣೆಯಲಾಗಿರುವ ಈ ಸಿನಿಮಾದಲ್ಲಿ ಬೇರೆ ಬೇರೆ ವಿಚಾರಗಳು ಅಡಗಿಕೊಂಡಿವೆ. ಯೋಚಿಸುತ್ತಾ ಹೋದಷ್ಟು ಅವುಗಳು ಬಿಚ್ಚಿಕೊಳ್ಳುತ್ತಾ ಹೋಗುತ್ತವೆ. ಆ ಸನ್ನಿವೇಶಗಳನ್ನು ಸೂಕ್ಷ್ಮವಾಗಿ, ತಾಕುವಂತೆ ನಿರ್ದೇಶಕ ವಿನು ಬಳಂಜ ಕಟ್ಟಿಕೊಟ್ಟಿದ್ದಾರೆ.

‘ಬೇರ’ ಚಿತ್ರದಲ್ಲಿ ಧಾರ್ಮಿಕ ಸಂಘರ್ಷ ಮಾತ್ರವಲ್ಲ ಲವ್‌ಸ್ಟೋರಿಯಿದೆ, ತಂದೆ-ತಾಯಿ ಮತ್ತು ಮಗನ ಸೆಂಟಿಮೆಂಟ್ ಇದೆ, ಫೈಟ್‌ಗಳಿವೆ, ಸಸ್ಪೆನ್ಸ್ ಥ್ರಿಲ್ಲ್ ಅಂಶಗಳಿವೆ. ಎಲ್ಲಕ್ಕಿಂತ ಹೆಚ್ಚಾಗಿ ಜಾತಿ, ಧರ್ಮಕ್ಕಿಂತ ಮಿಗಿಲಾದುದು ಮಾನವೀಯತೆ ಎಂಬ ಉತ್ತಮ ಸಂದೇಶವಿದೆ.

ರಾಜಶೇಖರ್ ರಮತ್ನಲ್ ಛಾಯಾಗ್ರಹಣ ಮಾಡಿರುವ ಈ ಚಿತ್ರಕ್ಕೆ ರಾಮ್ ದಾಸ್ ಶೆಟ್ಟಿ ವಿಟ್ಲ ಕಾರ್ಯಕಾರಿ ನಿರ್ಮಾಪಕರಾಗಿದ್ದಾರೆ. ಮಣಿಕಾಂತ್ ಕದ್ರಿಯವರ ಸಂಗೀತ ನಿರ್ದೇಶನದಲ್ಲಿ ಮೂಡಿಬಂದ ಈ ಸಿನಿಮಾದಲ್ಲಿ ದತ್ತಣ್ಣ, ಸುಮನ್ ತಲ್ವಾರ್, ಹರ್ಷಿಕಾ ಪೂಣಚ್ಚ, ಅಶ್ವಿನ್ ಹಾಸನ್, ಚಿತ್ಕಲ ಬಿರಾದರ್, ಮಂಜುನಾಥ್ ಹೆಗಡೆ, ಸ್ವರಾಜ್ ಶೆಟ್ಟಿ, ತಮ್ಮಣ್ಣ ಶೆಟ್ಟಿ, ಶೈನ್ ಶೆಟ್ಟಿ, ಅಂಜಲಿ ಸುಧಾಕರ್, ಗುರು ಹೆಗಡೆ, ರಾಕೇಶ್ ಮಯ್ಯ, ದೀಪಕ್ ರೈ ಪಾಣಾಜೆ, ಧವಳ್ ದೀಪಕ್, ಪ್ರಸನ್ನ ಭಾಗಿನ ಇವರೆಲ್ಲರೂ ವಿಭಿನ್ನ ಪಾತ್ರದಲ್ಲಿ ಅಭಿನಯಿಸಿದ್ದಾರೆ.

ಹೀಗೆ ಸಾಗುತ್ತದೆ ಚಿತ್ರ:
ಇಲ್ಲಿ ಧರ್ಮ ಸಂಘರ್ಷಕ್ಕೆ ಬಲಿಯಾದ ಕುಟುಂಬದ ಕಣ್ಣೀರಿದೆ. ಎಲ್ಲವೂ ಗೊತ್ತಿದ್ದೂ ಏನೂ ಮಾಡಲಾಗದ ಅಸಹಾಯಕತೆ ಇದೆ. ಯಾರೋ ಹೊರಗಿನವರು ಬಂದು ಊರನ್ನು ನಾಶ ಮಾಡುವ ಹುನ್ನಾರವಿದೆ. ಧರ್ಮಾಂಧರ ಕತ್ತಿಗೆ ಬಲಿಯಾಗುವ ತಾರುಣ್ಯದ ಆಕ್ರಂದನವಿದೆ. ಮೌನದಿಂದಲೇ ಧೈರ್ಯ ನೀಡುವ ಅಮ್ಮಂದಿರ ಶ್ರೀರಕ್ಷೆ ಇದೆ. ಮುಸ್ಲಿಮ್ ಧರ್ಮದ ವ್ಯಕ್ತಿಯ ಮನೆ ಮುಂದಿನ ದೇವರ ಕಲ್ಲಿನ ಮುಂದೆ ನೀಲಾಂಜನ ದೀಪವಿದೆ. ಹಸಿರು ತುಂಬಿರುವ ಯಾವುದೇ ಊರಿನ ಶಾಂತಿ ಕೆಡಿಸಿ ಗೊಂದಲಕ್ಕೀಡು ಮಾಡುವ ಕಥೆ ಇದು. ಕ್ಷಣಕ್ಷಣಕ್ಕೂ ಕುತೂಹಲ ಭರಿತವಾಗಿರುವ ಈ ಕತೆಯಲ್ಲಿ ಅದೆಷ್ಟೋ ಮಂದಿಯ ಸೂಕ್ಷ್ಮವಾಗಿ ನಿಟ್ಟುಸಿರು ಪಿಸುಮಾತಿನ ರೂಪದಲ್ಲಿ ಕಿವಿಗೊಡುವ ಮನಸ್ಸಿದ್ದರೆ ತಾಕುವ ಸದ್ದೊಂದು ಉಳಿದುಹೋಗುವಂತೆ ಇರುವ ಕತೆ ಸಿನಿಮಾ ಆಗಿದೆ.

ಅತ್ಯುತ್ತಮ ರೇಟಿಂಗ್:

ಜೂ.16ರಂದು ರಾಜ್ಯದ ಚಿತ್ರಮಂದಿರಗಳಲ್ಲಿ ತೆರೆಕಂಡಿರುವ ಸಿನಿಮಾ ಬೇರ' ಉತ್ತಮ ಪ್ರತಿಕ್ರಿಯೆ ಪಡೆದುಕೊಂಡಿದೆ. ವೀಕೆಂಡ್‌ನಲ್ಲಿ ಥಿಯೇಟರ್‌ಗಳು, ಮಲ್ಟಿಪ್ಲೆಕ್ಸ್ ಸ್ಕ್ರೀನ್‌ಗಳಲ್ಲಿ ಭರಪೂರ ಪ್ರದರ್ಶನ ಕಂಡಿರುವಬೇರ’ ಬುಕ್‌ಮೈ ಶೋ ಬುಕಿಂಗ್ ಆ್ಯಪ್‌ನಲ್ಲಿ ಉತ್ತಮ ರೇಟಿಂಗ್ ಪಡೆದುಕೊಂಡಿದೆ. ಸದ್ಯ ಬುಕ್‌ಮೈ ಶೋದಲ್ಲಿ 131 ವೋಟ್‌ಗಳೊಂದಿಗೆ 9.9/10 ರೇಟಿಂಗ್ ಇದೆ. ಜೊತೆಗೆ ಸಿನಿಮಾ ವೀಕ್ಷಿಸಿದ ಪ್ರೇಕ್ಷಕರು ಉತ್ತಮವಾಗಿ ಕಮೆಂಟ್ ಮೂಲಕ ಸಿನಿಮಾ ಬಗ್ಗೆ ಉತ್ತಮ ವಿಮರ್ಶೆ ನೀಡಿದ್ದಾರೆ. ಈ ಮೂಲಕ ಸಿನಿಮಾಗೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದ್ದು, ಭಾನುವಾರವೂ ಪುತ್ತೂರಿನ ಜಿ.ಎಲ್.ವನ್ ಮಾಲ್‌ನಲ್ಲಿರುವ ಭಾರತ್ ಸಿನಿಮಾಸ್‌ನಲ್ಲಿ ಹೌಸ್‌ಫುಲ್ ಪ್ರದರ್ಶನ ಕಂಡಿದೆ. ಕರಾವಳಿಯ ಕೋಮುಸೂಕ್ಷ್ಮವನ್ನು ಎಳೆಎಳೆಯಾಗಿ ವಿವರಿಸಿರುವ ಸಿನಿಮಾ ಕರಾವಳಿಯ ಸಿನಿರಸಿಕರ ಮನಸ್ಸು ಗೆಲ್ಲುವಲ್ಲಿ ಯಶಸ್ವಿಯಾಗಿದೆ.

Exit mobile version