Site icon Suddi Belthangady

ಪುದುವೆಟ್ಟು: ಶ್ರೀ ಧ.ಮಂ.ಅ.ಹಿ.ಪ್ರಾ.ಶಾಲೆಯಲ್ಲಿ ಶಾಲಾ ಮಂತ್ರಿಮಂಡಲ ರಚನೆ ಮತ್ತು ಪ್ರಮಾಣವಚನ ಸ್ವೀಕಾರ

ಪುದುವೆಟ್ಟು: ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಅನುದಾನಿತ ಹಿರಿಯ ಪ್ರಾಥಮಿಕ ಶಾಲೆ ಪುದುವೆಟ್ಟು ಇಲ್ಲಿ ಶಾಲಾ ಮಂತ್ರಿಮಂಡಲದ ಪ್ರಮಾಣವಚನ ಸ್ವೀಕಾರ ಕಾರ್ಯಕ್ರಮವನ್ನು ಜೂ.17ರಂದು ಹಮ್ಮಿಕೊಳ್ಳಲಾಗಿತ್ತು

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಶಾಲೆಯ ಮುಖ್ಯ ಶಿಕ್ಷಕರಾದ ಶೀನಪ್ಪಗೌಡ ರವರು ವಹಿಸಿಕೊಂಡಿದ್ದರು.

ಕಾರ್ಯಕ್ರಮದ ಮುಖ್ಯ ಅತಿಥಿಗಳಾಗಿ ಪುದುವೆಟ್ಟು ಗ್ರಾಮ ಪಂಚಾಯಿತಿಯ ಅಧ್ಯಕ್ಷ ಯಶವಂತ ಗೌಡರವರು ವಹಿಸಿಕೊಂಡಿದ್ದರು. ಈ ಸಂದರ್ಭದಲ್ಲಿ ಮಾತನಾಡಿದ ಶಾಲಾ ಹಂತದಲ್ಲಿ ಮಂತ್ರಿಮಂಡಲದ ರಚನೆಯು ಮಗುವಿನ ಮುಂದಿನ ಭವಿಷ್ಯದಲ್ಲಿ ಆಡಳಿತ ಪಕ್ಷ ಮತ್ತು ವಿರೋಧ ಪಕ್ಷ ದೇಶದಲ್ಲಿ ಹೇಗೆ ತನ್ನ ಕೆಲಸ ಕಾರ್ಯಗಳನ್ನು ನಿರ್ವಹಿಸಬೇಕು ಎನ್ನುವ ಕಲ್ಪನೆ ಮಕ್ಕಳಿಗೆ ತಿಳಿಸಿದಂತಾಗುತ್ತದೆ ಎಂದು ಅಭಿಪ್ರಾಯಪಟ್ಟರು, ತನ್ನ ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣದ ದಿನಗಳಲ್ಲಿ ನಡೆದಂತಹ ಶಾಲಾ ಹಂತದ ಮಂತ್ರಿಮಂಡಲದ ರಚನೆಯನ್ನು ಈ ಸಂದರ್ಭದಲ್ಲಿ ಮೆಲುಕು ಹಾಕಿದರು.

ಶಾಲೆಯ ಶಿಕ್ಷಕ ನಿಶಾಂತ್ ಕುಮಾರ್ ರವರು ನೂತನವಾಗಿ ಆಯ್ಕೆಗೊಂಡ ಎಲ್ಲ ಮಂತ್ರಿಗಳು ಶಾಲೆಯಲ್ಲಿ ನಿರ್ವಹಿಸಬೇಕಾದ ಜವಾಬ್ದಾರಿಗಳನ್ನು ತಿಳಿಸಿದರು.

ನೂತನವಾಗಿ ಆಯ್ಕೆಗೊಂಡಂತಹ ಮಂತ್ರಿಗಳಿಗೆ ಶಾಲೆಯ ಮುಖ್ಯ ಶಿಕ್ಷಕ ಶೀನಪ್ಪ ಗೌಡರವರು ಪ್ರತಿಜ್ಞಾವಿಧಿಯನ್ನು ಬೋಧಿಸಿದರು.ಈ ಸಂದರ್ಭದಲ್ಲಿ ಮಾತನಾಡಿದ ಅವರು ಮಕ್ಕಳು ತಮ್ಮ ತಮ್ಮ ಖಾತೆಗಳಿಗೆ ಅನುಗುಣವಾಗಿ ಜವಾಬ್ದಾರಿಯುತ ಕೆಲಸ ಕಾರ್ಯಗಳನ್ನು ಮಾಡಿ ಶಾಲೆಯ ಸರ್ವತೋಮುಖ ಅಭಿವೃದ್ಧಿಗೆ ಸಹಕಾರಿಯಾಗಬೇಕು ಎಂದು ತಿಳಿಸಿದರು.

ವಿದ್ಯಾರ್ಥಿಗಳ ಪ್ರಾರ್ಥನ ಗೀತೆಯೊಂದಿಗೆ ಪ್ರಾರಂಭಗೊಂಡ ಕಾರ್ಯಕ್ರಮದಲ್ಲಿ ಶೀಲಾ ಎನ್ ರವರು ಸ್ವಾಗತಿಸಿ, ತೇಜಾವತಿಯವರು ಧನ್ಯವಾದಗೈದ ಕಾರ್ಯಕ್ರಮವನ್ನು ಪವನ್ ಕುಮಾರ್ ಅವರು ನಿರೂಪಿಸಿದರು.

ಶಾಲೆಯ ಎಲ್ಲ ಶಿಕ್ಷಕರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದು ಸಹಕರಿಸಿದರು.

Exit mobile version