ಮಡಂತ್ಯಾರು: ಮಡಂತ್ಯಾರು ಸೇಕ್ರೆಡ್ ಹಾರ್ಟ್ ಕಾಲೇಜಿನ ಅಂತಿಮ ವರ್ಷದ ಗಣಕ ಯಂತ್ರ ವಿಜ್ಞಾನ ವಿಭಾಗದ ವಿದ್ಯಾರ್ಥಿಗಳಿಂದ ಕಾಲೇಜಿನ ಪ್ರಥಮ ಮತ್ತು ದ್ವಿತೀಯ ಗಣಕ ಯಂತ್ರ ವಿಜ್ಞಾನ ವಿಭಾಗದ ವಿದ್ಯಾರ್ಥಿಗಳಿಗೆ “ಎಲ್ಸಿಯಮ್ 2023 ”, ಮಾಹಿತಿ ತಂತ್ರಜ್ಞಾನದ ಸ್ಪರ್ಧಾಕೂಟವನ್ನು ಜೂ.15 ರಂದು ಆಯೋಜಿಸಲಾಗಿತ್ತು.
ಕಾರ್ಯಕ್ರಮವನ್ನು ದೀಪ ಬೆಳಗಿಸುವುದರ ಮೂಲಕ ಉದ್ಘಾಟಿಸಿದ ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಕಾಲೇಜಿನ ಗಣಕಯಂತ್ರ ವಿಭಾಗದ ಮುಖ್ಯಸ್ಥರಾದ ಶ್ರೀ ಶೈಲೇಶ್ ಕುಮಾರ್ ಅವರು ಉದ್ಯೋಗ ಮಾರುಕಟ್ಟೆಯಲ್ಲಿ ಅತ್ಯಂತ ಆಕರ್ಷಕ ಕ್ಷೇತ್ರವೆಂದರೆ ಕಂಪ್ಯೂಟರ್ ವಿಜ್ಞಾನ. ವಿದ್ಯಾರ್ಥಿಗಳ ಸೃಜನಶೀಲ ಮನೋಭಾವವು ಶೈಕ್ಷಣಿಕ ಸಾಧನೆಗೂ ಪೂರಕವಾಗುವುದು. ನಿಮ್ಮ ಪ್ರತಿಭೆಯನ್ನು ಪ್ರದರ್ಶಿಸಲು ಈ ರೀತಿಯ ವೇದಿಕೆಯು ಮುಖ್ಯ ಎಂದು ಮಕ್ಕಳನ್ನು ಹುರಿದುಂಬಿಸಿದರು. ಪ್ರಾಸ್ತಾವಿಕ ನುಡಿಗಳನ್ನಾಡಿದ ಕಾಲೇಜಿನ ಪ್ರಾಂಶುಪಾಲರಾದ ಡಾ. ಜೋಸೆಫ್ ಎನ್.ಎಮ್. ಅವರು ಕಾರ್ಯಕ್ರಮವನ್ನು ನವೀನ ರೀತಿಯಲ್ಲಿ ಆಯೋಜಿಸಿದ್ದಕ್ಕಾಗಿ ವಿದ್ಯಾರ್ಥಿಗಳಿಗೆ ಅಭಿನಂದನೆಗಳನ್ನು ಸಲ್ಲಿಸಿ, ತಮ್ಮ ಭವಿಷ್ಯವನ್ನು ರೂಪಿಸಲು ವಿದ್ಯಾರ್ಥಿಗಳಿಗೆ ಕಂಪ್ಯೂಟರ್ ಶಿಕ್ಷಣ ಹೇಗೆ ಸಹಾಯಕ ಎಂಬ ಮಾರ್ಗದರ್ಶನವನ್ನು ನೀಡಿದರು. ಕಾರ್ಯಕ್ರಮದಲ್ಲಿ ಪ್ರಾಂಶುಪಾಲರನ್ನು ಸನ್ಮಾನಿಸಲಾಯಿತು. ಕಾಲೇಜಿನ ಸುಮಾರು ೧೭೦ ವಿದ್ಯಾರ್ಥಿಗಳು ಭಾಗವಹಿಸಿದರು. ವೇದಿಕೆಯಲ್ಲಿ ಗಣಕ ಯಂತ್ರ ವಿಭಾಗದ ಮುಖ್ಯಸ್ಥರಾದ ಶ್ರೀ ಜನಾರ್ಧನ ರಾವ್ ಡಿ., ಮಾಹಿತಿ ತಂತ್ರಜ್ಞಾನದ ಸಂಯೋಜಕಿ ಶ್ರೀಮತಿ ಜೆಸಿಂತಾ ಡಿಸೋಜ, ವಿದ್ಯಾರ್ಥಿ ಪ್ರತಿನಿಧಿಗಳಾದ ತುಳಸಿಪ್ರಸಾದ್ ಮತ್ತು ಪ್ರತೀಕ್ಷಾ ಉಪಸ್ಥಿತರಿದ್ದರು. ಮಾಹಿತಿ ತಂತ್ರಜ್ಞಾನದ ಸಂಯೋಜಕಿ ಶ್ರೀಮತಿ ಜೆಸಿಂತಾ ಡಿಸೋಜ ಅವರು ಸ್ವಾಗತಿಸಿ ಕುಮಾರಿ ಪ್ರತೀಕ್ಷಾ ವಂದಿಸಿದರು . ಕುಮಾರಿ ಶ್ವೇತಾ ಕಾರ್ಯಕ್ರಮವನ್ನು ನಿರೂಪಿಸಿದರು.