Site icon Suddi Belthangady

ಬೆಳ್ತಂಗಡಿಯಲ್ಲಿ ಶಕ್ತಿ ಯೋಜನೆಗೆ ಚಾಲನೆ-ವಿಧಾನ ಪರಿಷತ್ ಸದಸ್ಯ ಹರೀಶ್ ಕುಮಾರ್ ರಿಂದ ಟಿಕೆಟ್ ನೀಡಿ ಚಾಲನೆ

ಬೆಳ್ತಂಗಡಿ: ಬೆಳ್ತಂಗಡಿಯಲ್ಲಿ ಕಾಂಗ್ರೆಸ್ ಸರ್ಕಾರದ ಗ್ಯಾರಂಟಿಗಳಲ್ಲಿ ಒಂದಾದ ಮಹಿಳೆಯರಿಗೆ ಕೆ ಎಸ್ ಆರ್ ಟಿ ಸಿ ಬಸ್ ನಲ್ಲಿ ಉಚಿತ ಪ್ರಯಾಣದ ಯೋಜನೆ ಶಕ್ತಿ ಯೋಜನೆಗೆ ಚಾಲನೆ ನೀಡಲಾಯಿತು.

ಬೆಳ್ತಂಗಡಿ ಬಸ್ ನಿಲ್ದಾಣದಲ್ಲಿ ನಡೆದ ಉದ್ಘಾಟನಾ ಕಾರ್ಯಕ್ರಮದಲ್ಲಿ ವಿಧಾನಪರಿಷತ್ ಸದಸ್ಯ ಹರೀಶ್ ಕುಮಾರ್, ಮಾಜಿ ಶಾಸಕ ವಸಂತ ಬಂಗೇರ ದೀಪ ಬೆಳಗಿಸಿ ಉದ್ಘಾಟಿಸಿದರು. ಬಳಿಕ ಬಸ್ ನಲ್ಲಿ ಪ್ರಯಾಣಿಸುವವರಿಗೆ ಉಚಿತ ಟಿಕೆಟ್ ವಿತರಣೆ ಮಾಡಲಾಯಿತು.

ಬೆಳ್ತಂಗಡಿಯಿಂದ ಪುತ್ತೂರಿಗೆ ಮೊದಲ ಬಸ್ ಪಯಣ: ಗುರುವಾಯನಕೆರೆಯಿಂದ ವಾಪಾಸ್ ಬಂದು ಪುತ್ತೂರಿಗೆ ಪ್ರಯಾಣ: ಮಹಿಳೆಯರಿಗೆ ಉಚಿತ ಟಿಕೆಟ್ ಜಾರಿಯಾಗಿ ಬೆಳ್ತಂಗಡಿಯಿಂದ ಪುತ್ತೂರಿಗೆ ಮೊದಲ ಬಸ್ ಪ್ರಯಾಣಿಸಿದೆ. ಉದ್ಘಾಟನೆಗೊಂಡ ನಂತರ ಸಾಗಿದ ಕೆ ಎಸ್ ಆರ್ ಟಿ ಸಿ ಬಸ್ ಗುರುವಾಯನಕೆರೆ ತನಕ ಸಾಗಿ ನಂತರ ಬೆಳ್ತಂಗಡಿಗೆ ಬಂದು ಮತ್ತೆ ಪುತ್ತೂರಿಗೆ ಹೊರಟಿದೆ.ಬಸ್ ನಲ್ಲಿ ಪ್ರಯಾಣಿಸಿದ ಕಾಂಗ್ರೆಸ್ ಮಹಿಳಾ ಕಾರ್ಯಕರ್ತರು ಮುಖ್ಯಮಂತ್ರಿ ಸಿದ್ಧರಾಮಯ್ಯರವರಿಗೆ, ಉಪಮುಖ್ಯಮಂತ್ರಿ ಡಿ ಕೆ ಶಿವಕುಮಾರ್ ರವರಿಗೆ ಜೈಕಾರ ಹಾಕುತ್ತಾ ಸಾಗಿದರು.

ಈ ವೇಳೆ ಸುದ್ದಿಯೊಂದಿಗೆ ಮಾತನಾಡಿದ ಕೆಲ ಮಹಿಳಾ ಪ್ರಯಾಣಿಕರು ನಾವು ಮೊದಲ ಬಸ್ ನಲ್ಲಿ ಪ್ರಯಾಣ ಮಾಡುತ್ತಿರುವುದಕ್ಕೆ ಖುಷಿಯಿದೆ. ನಾನು ಇವತ್ತು ಕೆಲವೊಂದು ಕಡೆಗೆ ಬಸ್ ನಲ್ಲಿ ಫ್ರೀಯಾಗಿ ಹೋಗಬೇಕು ಅಂತಲೇ ಬಂದಿದ್ದೇನೆ ಅಂತನೂ ತಿಳಿಸಿದರು.

ಬಿಜೆಪಿಯವರೇ ಮತ್ಸರ ಪಡಬೇಡಿ-ವಸಂತ ಬಂಗೇರ: ಉದ್ಘಾಟನಾ ಕಾರ್ಯಕ್ರಮದಲ್ಲಿ ಮಾತನಾಡಿದ ಮಾಜಿ ಶಾಸಕ ವಸಂತ ಬಂಗೇರ “ಬಿಜೆಪಿ ಸರ್ಕಾರ ಇದ್ದಾಗ ಅವರಿಗೆ ಮಾಡಲಾಗಲಿಲ್ಲ. ಅದಕ್ಕಾಗಿ ಮತ್ಸರದ ಭಾವನೆಯಿಂದ ವಿರೋಧ ಪಕ್ಷದವರು ವರ್ತಿಸುತ್ತಿದ್ದಾರೆ. ನಾವು ಮಾಡ್ತಿದ್ದೇವೆ. ಅದನ್ನು ನೋಡಿ ಸಂತೋಷ ಪಡಿ. ಬಿಜೆಪಿ ಸರ್ಕಾರವೇ ವಿದ್ಯುತ್ ದರ ಏರಿಸಿದ್ದು, ಕಾಂಗ್ರೆಸ್ ಏರಿಸಿದ್ದು ಅಂತ ಈಗ ವಿರೋಧ ಪಕ್ಷದವರು ಹೇಳುತ್ತಿದ್ದಾರೆ. ಬಾಯಿಗೆ ಬಂದ ಹಾಗೇ ಮಾತನಾಡಬೇಡಿ, ನಮ್ಮ ಕಾರ್ಯ ನೋಡಿ ಮೆಚ್ಚಿ ಸಂತೋಷಪಡಿ, ಇದು ಆಗುವುದಿಲ್ಲ ಅಂತ ಹೇಳ್ತಿದ್ದೀರಿ. ನಮ್ಮ ಮುಖ್ಯಮಂತ್ರಿಗಳು, ಉಪಮುಖ್ಯಮಂತ್ರಿಗಳು ಹಠವಾದಿಗಳು ಅವರು ಹೇಳಿದ್ದನ್ನು ಮಾಡಿ ತೋರಿಸುತ್ತಾರೆ ಎಂದು ಹೇಳಿದರು.

ಎಲ್ಲಾ ಗ್ಯಾರಂಟಿಗಳನ್ನು ಈಡೇರಿಸುತ್ತೇವೆ.ಅದರ ಬಗ್ಗೆ ಆತಂಕ ಬೇಡ-ಹರೀಶ್ ಕುಮಾರ್: ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಹರೀಶ್ ಕುಮಾರ್ “ಕಾಂಗ್ರೆಸ್ ಸರ್ಕಾರ ಬಂದ ನಂತರ ಮೊದಲ ಗ್ಯಾರಂಟಿಗೆ ಚಾಲನೆ ದೊರಕಿದೆ. ಈ ಸಂಬಂಧ ಎಲ್ಲಾ ಮಹಿಳೆಯರಿಗೆ, ಮುಖ್ಯಮಂತ್ರಿಗಳಿಗೆ, ಉಪಮುಖ್ಯಮಂತ್ರಿಗಳಿಗೆ ಅಭಿನಂದನೆ ಸಲ್ಲಿಸುತ್ತೇನೆ. ಮೂರು ತಿಂಗಳಲ್ಲಿ ಸ್ಮಾರ್ಟ್ ಕಾರ್ಡ್ ನೀಡಲಾಗುವುದು. ಅಲ್ಲಿಯ ತನಕ ಆಧಾರ್ ಕಾರ್ಡ್ ಉಪಯೋಗಿಸಿಕೊಂಡು ಮಹಿಳೆಯರು ಶಕ್ತಿ ಯೋಜನೆಯನ್ನು ಸದುಪಯೋಗಿಪಡಿಸಿಕೊಳ್ಳಿ. ನಮ್ಮ ಗ್ಯಾರಂಟಿಗಳ ಬಗ್ಗೆ ಆತಂಕ ಬೇಡ, ನಾವು ಪ್ರಣಾಳಿಕೆಯಲ್ಲಿ ಹೇಳಿದ್ದನ್ನು ಕೂಡ ಈಡೇರಿಸುತ್ತೇವೆ. ನುಡಿದಂತೆ ನಡೆಯುತ್ತೇವೆ ಎಂದು ಹೇಳಿದರು.

ಕಾರ್ಯಕ್ರಮದಲ್ಲಿ ತಹಶೀಲ್ಧಾರ್ ಸುರೇಶ್ ಕುಮಾರ್ ಟಿ, ತಾಲೂಕು ಕಾರ್ಯನಿರ್ವಾಹಣಾಧಿಕಾರಿ ಕುಸುಮಾಧರ್, ಕೆ ಎಸ್ ಆರ್ ಟಿ ಸಿ ವಿಭಾಗೀಯ ನಿಯಂತ್ರಾಮಾಧಇಕಾರಿ ಬಿ.ಜಯಕರ ಶೆಟ್ಟಿ, ಧರ್ಮಸ್ಥಳ ಕೆ ಎಸ್ ಆರ್ ಟಿ ಸಿ ವಿಭಾಗಾಧಿಕಾರಿ ಉದಯ್ ಕುಮಾರ್ ಮುಂತಾದವರು ಭಾಗಿಯಾಗಿದ್ದರು.

Exit mobile version