ಮಡಂತ್ಯಾರು: “ಕ್ರೀಡೆಯು ವಿದ್ಯಾರ್ಥಿಗಳ ದೈಹಿಕ ಮಾತ್ರವಲ್ಲ ಮಾನಸಿಕ, ಆಧ್ಯಾತ್ಮಿಕ ಸಾಧನೆಗೂ ನೆರವಾಗುವುದು, ನಮ್ಮ ಒಟ್ಟು ವ್ಯಕ್ತಿತ್ವವನ್ನು ರೂಪಿಸುವಲ್ಲಿ ಕ್ರೀಡೆ ಮಹತ್ತರ ಪಾತ್ರವನ್ನು ವಹಿಸುತ್ತದೆ. ಆದ್ದರಿಂದ ವಿದ್ಯಾರ್ಥಿಗಳು ಹಗಲುಗನಸುಗಳನ್ನು ಕಾಣುವುದರಲ್ಲಿ ಸಮಯವನ್ನು ಪೋಲು ಮಾಡದೆ ಕ್ರೀಡಾಕೂಟಗಳಲ್ಲಿ ಪಾಲ್ಗೊಳ್ಳುವುದರ ಮೂಲಕ ತಮ್ಮ ವ್ಯಕ್ತಿತ್ವನ್ನು ಸಕಾರಾತ್ಮಕವಾಗಿ ರೂಪಿಸಿಕೊಳ್ಳಬೇಕು” ಎಂಬುದಾಗಿ ಸೇಕ್ರೆಡ್ ಹಾರ್ಟ್ ವಿದ್ಯಾಸಂಸ್ಥೆಗಳ ಸಂಚಾಲಕರಾದ ವಂ ಫಾ. ಸ್ಟಾನಿ ಗೋವಿಯಸ್ ಅವರು ಹೇಳಿದರು. ಅವರು ಸೇಕ್ರೆಡ್ ಹಾರ್ಟ್ ಕಾಲೇಜಿನ ವಾರ್ಷಿಕ ಕ್ರೀಡಾಕೂಟದ ಉದ್ಘಾಟನಾ ಸಮಾರಂಭದ ಅಧ್ಯಕ್ಷ ಸ್ಥಾನದಿಂದ ಮಾತನಾಡುತ್ತಿದ್ದರು.
ಮುಖ್ಯ ಅತಿಥಿಯಾಗಿ ಅರ್ಥ ಮಾಧ್ಯಮ ಸಂಸ್ಥೆಯ ಮ್ಯಾನೇಜಿಂಗ್ ಡೈರೆಕ್ಟರ್ ಪ್ರಶಾಂತ್ ಶೆಟ್ಟಿ ಅವರು “ಕ್ರೀಡಾಳುಗಳ ಬದ್ಧತೆ, ಅವರ ವೈಯಕ್ತಿಕ ಮತ್ತು ವೃತ್ತಿ ಬದುಕನ್ನೂ ಎತ್ತರಿಸುತ್ತದೆ.ದೈಹಿಕ, ಮಾನಸಿಕ ಕ್ಷಮತೆಯನ್ನು ಕಾಪಾಡುವುದಕ್ಕೂ ಕ್ರೀಡೆ ಸಹಾಯಕ” ಎಂದು ಹೇಳಿದರು.
ವೇದಿಕೆಯಲ್ಲಿ ಉಪಸ್ಥಿತರಿದ್ದ ಚರ್ಚ್ ಪಾಲನಾ ಮಂಡಳಿಯ ಉಪಾಧ್ಯಕ್ಷರಾದ ಜೆರಾಲ್ಡ್ ಮೊರಾಸ್, ಹಿರಿಯ ವಿದ್ಯಾರ್ಥಿ ಸಂಘದ ಅಧ್ಯಕ್ಷ ಫ್ರಾನ್ಸಿಸ್ ವಿ.ವಿ, ಶಿಕ್ಷಕ ರಕ್ಷಕ ಸಂಘದ ಅಧ್ಯಕ್ಷ ಜಯರಾಮ ಶೆಟ್ಟಿ ಕಾರ್ಯಕ್ರಮಕ್ಕೆ ಶುಭ ಹಾರೈಸಿದರು.
ಕಾಲೇಜಿನ ಪ್ರಾಂಶುಪಾಲ ಡಾ.ಜೋಸೆಫ್ ಎನ್.ಎಂ ಸ್ವಾಗತಿಸಿ, ದೈಹಿಕ ಶಿಕ್ಷಣ ನಿರ್ದೇಶಕ ಡಾ.ಪ್ರಕಾಶ್ ಡಿ’ಸೋಜ ಧನ್ಯವಾದವಿತ್ತರು.ಪ್ರೊ.ನೆಲ್ಸನ್ ಮೋನಿಸ್ ಕಾರ್ಯಕ್ರಮ ನಿರ್ವಹಿಸಿದರು.