Site icon Suddi Belthangady

ಉಜಿರೆ: ಶ್ರೀ ಜನಾರ್ದನ ಸ್ವಾಮಿ ಯಕ್ಷಗಾನ ಚಿಕ್ಕಮೇಳ ತಿರುಗಾಟ ಆರಂಭ

ಉಜಿರೆ: ಉಜಿರೆ ಶ್ರೀ ಜನಾರ್ದನ ಸ್ವಾಮಿ ಕೃಪಾಶ್ರಿತ ಯಕ್ಷಗಾನ ಚಿಕ್ಕಮೇಳ ತನ್ನ ಮಳೆಗಾಲದ ಮನೆ-ಮನೆ ತಿರುಗಾಟವನ್ನು ಜೂ.7 ರಂದು ಶ್ರೀ ಜನಾರ್ದನ ಸ್ವಾಮಿ ಸನ್ನಿಧಿಯಲ್ಲಿ ಗೆಜ್ಜೆ ಕಟ್ಟಿ ಸೇವಾ ಪ್ರದರ್ಶನ ನೀಡುವ ಮೂಲಕ ಆರಂಭಿಸಿದೆ.ದೇವಸ್ಥಾನದ ಅನುವಂಶಿಕ ಆಡಳಿತ ಮೊಕ್ತೇಸರ ಶರತ್ ಕೃಷ್ಣ ಪಡುವೆಟ್ನಾಯರು ಶ್ರೀ ದೇವರಲ್ಲಿ ಪ್ರಾರ್ಥಿಸಿ, ಚಿಕ್ಕ ಮೇಳದ ವ್ಯವಸ್ಥಾಪಕ, ಕಲಾವಿದ ಚಂದ್ರಶೇಖರ ಧರ್ಮಸ್ಥಳ  ಅವರಿಗೆ ಗೆಜ್ಜೆ ನೀಡಿ, ಶ್ರೀ ದೇವರ ಭಾವಚಿತ್ರ ನೀಡುವ ಮೂಲಕ ಮಳೆಗಾಲದ ಕಲಾ ಪ್ರದರ್ಶನ ತಿರುಗಾಟಕ್ಕೆ ಚಾಲನೆ ನೀಡಿದರು.ಚಿಕ್ಕಮೇಳ ತಂಡ ಮಳೆಗಾಲದ 3 ತಿಂಗಳ ಕಾಲ ಪ್ರತಿ ಸಂಜೆ 5.30 ರಿಂದ  ರಾತ್ರಿ 11.3೦ ರ ವರೆಗೆ ಬೆಳ್ತಂಗಡಿ ತಾಲೂಕಿನ ಮನೆ ಮನೆಗಳಿಗೆ ತೆರಳಿ ಯಕ್ಷಗಾನ ಕಿರು ಪ್ರಸಂಗವನ್ನು ಪ್ರದರ್ಶಿಸಿ ಯಕ್ಷಗಾನ ಕಲೆಯನ್ನು ಪಸರಿಸುವ ಹಾಗೂ ಯುವ ಜನಾಂಗವನ್ನು ಕಲೆಯತ್ತ ಆಕರ್ಷಿಸುವ ಕಾರ್ಯದಲ್ಲಿ  ತೊಡಗಿಸಿಕೊಳ್ಳಲಿದೆ.ತಿರುಗಾಟದ ಚಿಕ್ಕಮೇಳ ತಂಡದಲ್ಲಿ ಹಾಡುಗಾರಿಕೆಯಲ್ಲಿ ಭಾಗವತರಾಗಿ ಅಶೋಕ, ಹಿಮ್ಮೇಳದಲ್ಲಿ ನಾಗರಾಜ್, ಪುರುಷ ಪಾತ್ರದಲ್ಲಿ ನಿತಿನ್ ಶೆಟ್ಟಿ ಹಾಗೂ ಸ್ತ್ರೀ ಪಾತ್ರದಲ್ಲಿ ಮೇಳದ ಸಂಚಾಲಕ, ಧರ್ಮಸ್ಥಳ ಮೇಳದ ಕಲಾವಿದ ಶರತ್ ಶೆಟ್ಟಿ ನಿರ್ವಹಿಸಲಿದ್ದಾರೆ.

ಉಜಿರೆ ಶ್ರೀ ಜನಾರ್ದನ ಸ್ವಾಮಿ ಸನ್ನಿಧಿಯಲ್ಲಿ ನಡೆದ ಸೇವಾ ಪ್ರದರ್ಶನದಲ್ಲಿ ಭಾಗವತರಾದ ವೆಂಕಟ್ರಮಣ ರಾವ್ ಬನ್ನೆಂಗಳ, ಧರ್ಮಸ್ಥಳ ಮೇಳದ ವ್ಯವಸ್ಥಾಪಕ ಗಿರೀಶ್ ಹೆಗ್ಡೆ ಉಪಸ್ಥಿತರಿದ್ದು ಶುಭ ಕೋರಿದರು. ನಂತರ ತಂಡ ಪಡುವೆಟ್ಟು ಮನೆ ಹಾಗು ಶ್ರೀ ಕ್ಷೇತ್ರ ಧರ್ಮಸ್ಥಳ ಶ್ರೀ ಮಂಜುನಾಥಸ್ವಾಮಿ ಸನ್ನಿಧಿಯಲ್ಲಿ ಸೇವಾ ಪ್ರದರ್ಶನ ನೀಡಿ ತಿರುಗಾಟಕ್ಕೆ ಶುಭಾರಂಭಮಾಡಿತು.  

Exit mobile version