Site icon Suddi Belthangady

ಸಹೋದರನ ಹೆಸರಿನಲ್ಲಿ ಕಾನೂನು ಬಾಹಿರವಾಗಿ ಕಾಮಗಾರಿ ನಡೆಸುತ್ತಿರುವ ಆರೋಪ- ಅಂಡಿಂಜೆ ಗ್ರಾ.ಪಂ.ಸದಸ್ಯ ಜಗದೀಶ್ ಹೆಗ್ಡೆ ವಿರುದ್ಧ ಜಿ.ಪಂ. ಸಿ.ಇ.ಓ. ಗೆ ಹರೀಶ್ ದೂರು

ಬೆಳ್ತಂಗಡಿ: ತನ್ನ ಸಹೋದರನ ಹೆಸರಿನಲ್ಲಿ ಕಾನೂನು ಬಾಹಿರವಾಗಿ ಪಂಚಾಯತ್ ಕಾಮಗಾರಿಗಳನ್ನು ನಡೆಸುತ್ತಿರುವ ಅಂಡಿಂಜೆ ಗ್ರಾಮ ಪಂಚಾಯತ್ ಸದಸ್ಯ ಜಗದೀಶ ಹೆಗ್ಡೆ ಅವರ ಸದಸ್ಯತ್ವ ರದ್ದುಗೊಳಿಸಿ ತಪ್ಪಿತಸ್ಥರ ವಿರುದ್ಧ ಕಾನೂನು ಕ್ರಮ ಕೈಗೊಳ್ಳುವಂತೆ ಆಗ್ರಹಿಸಿ ದ.ಕ. ಜಿ.ಪಂ. ಮುಖ್ಯ ಕಾರ್ಯ ನಿರ್ವಹಣಾಧಿಕಾರಿಯವರಿಗೆ ಕೊಕ್ರಾಡಿ ಗ್ರಾಮದ ದರ್ಖಾಸು ಮನೆಯ ಧರ್ಮಣ ನಲ್ಕೆ ಅವರ ಪುತ್ರ ಹರೀಶ್ ಕುಮಾರ್ ದೂರು ನೀಡಿದ್ದಾರೆ.
ಅಂಡಿಂಜೆ ಗ್ರಾಮ ಪಂಚಾಯತ್‌ನ ಸದಸ್ಯ ಜಗದೀಶ ಹೆಗ್ಡೆ ಅವರು ಕಾನೂನು ಬಾಹಿರವಾಗಿ ಅವರ ತಮ್ಮ ಅಮರೇಶ ಹೆಗ್ಡೆ ಅವರ ಹೆಸರಿನಲ್ಲಿ 2016ರಿಂದ ಅಂಡಿಂಜೆ ಗ್ರಾಮ ಪಂಚಾಯತ್‌ಗೆ ಸಂಬಂಧಿಸಿದ ಕಾಮಗಾರಿಗಳನ್ನು ನಡೆಸುತ್ತಾ ಬಂದಿದ್ದಾರೆ. ಕರ್ನಾಟಕ ಪಂಚಾಯತ್ ರಾಜ್ ಕಾಯಿದೆಯಂತೆ ಗ್ರಾಮ ಪಂಚಾಯತ್ ಸದಸ್ಯರಾಗಲೀ ಅವರ ಕುಟುಂಬದವರಾಗಲೀ ತಾವು ಗ್ರಾಮ ಪಂಚಾಯತ್ ಸದಸ್ಯರಾಗಿರುವ ಗ್ರಾಮ ಪಂಚಾಯತ್ ಕಾಮಗಾರಿಗಳನ್ನು ನಿರ್ವಹಿಸುವಂತಿಲ್ಲ. ಆದರೆ ಈ ಎಲ್ಲಾ ನಿಯಮಗಳನ್ನು ಗಾಳಿಗೆ ತೂರಿ ಗ್ರಾಮ ಪಂಚಾಯತ್ ಸದಸ್ಯ ಜಗದೀಶ ಹೆಗ್ಡೆಯವರು ತನ್ನ ತಮ್ಮ ಅಮರೇಶ ಹೆಗ್ಡೆಯವರ ಹೆಸರಿನಲ್ಲಿ ಗ್ರಾಮ ಪಂಚಾಯತ್ ಅಭಿವೃದ್ಧಿ ಅಧಿಕಾರಿಗಳ ಶಾಮಿಲಾತಿಯೊಂದಿಗೆ ಈ ಅಕ್ರಮವನ್ನು ನಡೆಸುತ್ತಾ ಬಂದಿದ್ದಾರೆ. ಜಗದೀಶ ಹೆಗ್ಡೆಯವರು ತನ್ನ ತಮ್ಮ ಅಮರೇಶ ಹೆಗ್ಡೆಯವರ ಮೂಲಕ ನಡೆಸಿರುವ ಕಾಮಗಾರಿಗಳ ಬಗ್ಗೆ ಮಾಹಿತಿ ಹಕ್ಕು ಕಾಯ್ದೆಯಡಿ ಪಡೆದುಕೊಂಡ ದಾಖಲೆಗಳ ಪ್ರತಿಯನ್ನು ಲಗತ್ತಿಸಲಾಗಿದೆ. ಪಂಚಾಯತ್‌ರಾಜ್ ಅಧಿನಿಯಮದಲ್ಲಿ ಬರುವ ನಿಯಮಗಳನ್ನು ಧಿಕ್ಕರಿಸಿ ಲಾಭಗೈಯುವ ಏಕೈಕ ಉದ್ದೇಶದಿಂದ ತನ್ನ ಗ್ರಾಮ ಪಂಚಾಯತ್ ಸದಸ್ಯ ಸ್ಥಾನವನ್ನು ದುರುಪಯೋಗಪಡಿಸಿ ತನ್ನದೇ ಗ್ರಾಮ ಪಂಚಾಯತ್‌ಗೆ ಸಂಬಂಧಿಸಿದ ಕಾಮಗಾರಿಯನ್ನು ತನ್ನ ತಮ್ಮ ಅಮರೇಶ ಹೆಗ್ಡೆಯವರ ಹೆಸರಿನಲ್ಲಿ ನಡೆಸಿರುವ ಜಗದೀಶ ಹೆಗ್ಡೆಯವರ ಸದಸ್ಯತ್ವವನ್ನು ಅನೂರ್ಜಿತಗೊಳಿಸಬೇಕು. ಪಂಚಾಯತ್ ರಾಜ್ ಅಧಿನಿಯಮಗಳನ್ನು ಉಲ್ಲಂಸಿ ಕಾಮಗಾರಿ ನಿರ್ವಹಿಸಿದ ಜಗದೀಶ ಹೆಗ್ಡೆ, ಅಮರೇಶ ಹೆಗ್ಡೆ ಮತ್ತು ಸಂಬಂಧಪಟ್ಟ ಗ್ರಾಮ ಪಂಚಾಯತ್ ಅಭಿವೃದ್ಧಿ ಅಧಿಕಾರಿಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಅವರು ದೂರಿನಲ್ಲಿತಿಳಿಸಿದ್ದಾರೆ. ದೂರಿನ ಪ್ರತಿಯನ್ನು ಅವರು ತಾಲೂಕು ಪಂಚಾಯತ್ ಕಾರ್ಯನಿರ್ವಾಹಕಾಧಿಕಾರಿ ಮತ್ತು ಮಾಜಿ ಶಾಸಕ ಕೆ. ವಸಂತ ಬಂಗೇರ ಅವರಿಗೆ ನೀಡಿದ್ದಾರೆ.

Exit mobile version