ಬೆಳ್ತಂಗಡಿ: ಕಾಂಗ್ರೇಸ್ ಚುನಾವಣೆ ಸಂದರ್ಭದಲ್ಲಿ ಮತದಾರರಿಗೆ ಐದು ಉಚಿತ ಗ್ಯಾರಂಟಿಗಳನ್ನು ಘೋಷಣೆ ಮಾಡಿ ಅಧಿಕಾರಕ್ಕೆ ಬಂದ ಮೇಲೆ ಷರತ್ತುಗಳನ್ನು ವಿಧಿಸಿ ಜನತೆಯನ್ನು ವಂಚಿಸಿ ತನ್ನ ವಚನಭ್ರಷ್ಟತೆಗೆ ಪ್ರಮಾಣ ನೀಡುತ್ತಿದೆ. ಸರಕಾರ ಅಧಿಕಾರಕ್ಕೆ ಬರುವ ಮುನ್ನ ಎಲ್ಲರಿಗೂ 200 ಯುನಿಟ್ ವಿದ್ಯುತ್ ಉಚಿತ ಎಂದು ಘೋಷಿಸಿತ್ತು. ಇದನ್ನು ನಂಬಿದ ರಾಜ್ಯದ ಬಡ ಮಧ್ಯಮ ವರ್ಗದ ಸಹಸ್ರಾರು ಕುಟುಂಬಗಳಿಗೆ ಇದೀಗ ಸರಕಾರ ನಿರ್ಬಂಧಗಳನ್ನು ಹಾಕುವ ಮೂಲಕ ತೊಂದರೆ ಕೊಡುತ್ತಿದ್ದಾರೆ. ಈಗ 12 ತಿಂಗಳ ಸರಾಸರಿ ಲೆಕ್ಕ ಎಂದು ಹೇಳಿರುವುದಲ್ಲದೆ 70-80 ಯುನಿಟ್‌ವರೆಗೆ ವಿದ್ಯುತ್ ಉಪಯೋಗಿಸಲು ನಿಯಮಗಳನ್ನು ಮಾಡಿ ಬಡ ಮತ್ತು ಮಧ್ಯಮ ವರ್ಗದ ಕುಟುಂಬಗಳಿಗೆ ಸಮಸ್ಯೆಯನ್ನುಂಟು ಮಾಡುತ್ತಿದ್ದಾರೆ. ಒಂದು ಕಡೆ 200 ಯುನಿಟ್ ಉಚಿತವೆಂದು ಹೇಳಿದ ಕಾಂಗ್ರೇಸ್ ಮತ್ತೊಂದು ಕಡೆ 80 ಯುನಿಟ್‌ವರೆಗೆ ಮಾತ್ರ ಎಂದು ಹೇಳುತ್ತಿದೆ. ಈ ರೀತಿ ಮೋಸದಾಟ ಸರಿಯೇ ? ಇದಕ್ಕೆ ಮುಖ್ಯಮಂತ್ರಿ ಸಿದ್ಧರಾಮಯ್ಯ ಹಾಗೂ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಉತ್ತರಿಸಬೇಕು. ಯಾವುದೇ ನಿಯಮ, ನಿರ್ಬಂಧಗಳಿಲ್ಲದೆ ಎಲ್ಲರಿಗೂ 200 ಯುನಿಟ್ ಉಚಿತ ವಿದ್ಯುತ್ ನೀಡುವ ನಿರ್ಧಾರಕ್ಕೆ ಸರಕಾರ ಬರಬೇಕು. ಇಲ್ಲದಿದ್ದರೆ ಇದು ವಚನ ಭ್ರಷ್ಟ, ಮಾತಿಗೆ ತಪ್ಪಿದ ಸರಕಾರ ಎಂದು ಜನರೇ ಆಡಿಕೊಳ್ಳುತ್ತಾರೆ.
ಇನ್ನೊಂದೆಡೆ ಗೋ ಹತ್ಯೆ ನಿಷೇಧ ಕಾನೂನನ್ನು ರದ್ದು ಮಾಡುವ ಹೇಳಿಕೆ ನೀಡುವ ಮೂಲಕ ಬಹುಸಂಖ್ಯಾತ ಹಿಂದುಗಳ ಭಾವನೆಗಳೊಂದಿಗೆ ಚೆಲ್ಲಾಟವಾಡಲು ಸರಕಾರ ಹೊರಟಿದೆ. ನಮ್ಮ ದೇಶದಲ್ಲಿ ಗೋವನ್ನು ಪೂಜಾ ಸ್ಥಾನದಲ್ಲಿಟ್ಟು ಗೌರವಿಸಲಾಗುತ್ತದೆ. ಗೃಹಪ್ರವೇಶದ ದಿನ ಮೊದಲು ಮನೆಯೊಳಗೆ ಹೋಗುವುದು ಗೋವು. ಗೋ ಶಾಲೆಯನ್ನು ನಡೆಸುವುದು ಒಂದು ಪವಿತ್ರ ಕಾರ್ಯ. ಹಾಲಿಗೆ, ಕೃಷಿಗೆ ಹಸು ಆಧಾರ. ಗೋ ಆಧಾರಿತ ಹೈನುಗಾರಿಕೆಯು ಕೋಟ್ಯಾಂತರ ಜನರಿಗೆ ಉದ್ಯೋಗವನ್ನು ಒದಗಿಸುವ ಮೂಲಕ ಭಾರತದ ಆರ್ಥಿಕತೆಯನ್ನು ಬಲಪಡಿಸಿದೆ. 1948 ಹಾಗೂ 1964ರಲ್ಲಿ ಕಾಂಗ್ರೇಸ್ ಪಕ್ಷದ ಸರಕಾರವೇ ಗೋ ಹತ್ಯೆ ನಿಷೇಧ ಕಾನೂನನ್ನು ಜಾರಿಗೆ ತಂದಿತ್ತು. ಮಹಾತ್ಮಾ ಗಾಂಧೀಜಿಯವರು ಗೋ ಹತ್ಯೆ ನಿಷೇಧಿಸಬೇಕೆಂದು ಪ್ರತಿಪಾದಿಸಿದ್ದರು ಎಂಬುದು ಮಾನ್ಯ ಪಶು ಸಂಗೋಪನಾ ಸಚಿವ ವೆಂಕಟೇಶ್ ಅವರು ಮತ್ತು ಸರಕಾರ ಅರಿತುಕೊಳ್ಳಬೇಕು.
ವಯಸ್ಸಾದ ಹಸುಗಳನ್ನು ಏನು ಮಾಡಬೇಕು ಎಂದು ಸಚಿವರು ಕೇಳುತ್ತಿದ್ದಾರೆ. ವಯಸ್ಸಾದ ತಂದೆ-ತಾಯಿಗಳನ್ನು ನಮ್ಮ ಸಂಸ್ಕೃತಿಯಲ್ಲಿ ಹೇಗೆ ನೋಡಿಕೊಳ್ಳಲಾಗುತ್ತಿದೆಯೋ ಅದೇ ರೀತಿ ವಯಸ್ಸಾದ ಹಸುಗಳನ್ನು ರಕ್ಷಿಸುವುದು ನಮ್ಮ ಭಾರತೀಯ ಪರಂಪರೆಯಾಗಿದೆ. ದೇಶದ ಸಂತರು, ಮಹಂತರು, ಸ್ವಾಮೀಜಿಗಳು, ಮಠ-ಮಂದಿರಗಳು ಕೋಟ್ಯಾಂತರ ಜನರು ಗೋ ಹತ್ಯೆಯ ನಿಷೇಧ ರದ್ಧತಿ ಸರಿಯಲ್ಲ ಎಂದು ಹೇಳುತ್ತಿದ್ದಾರೆ. ಹೀಗಾಗಿ ಕಾನೂನನ್ನು ರದ್ದುಪಡಿಸಿ ಗೋಹತ್ಯೆಗೆ ಅವಕಾಶ ನೀಡಿದ್ದೆ ಆದರೆ ಸಮಾಜದ ತೀವ್ರ ಪ್ರತಿರೋಧವನ್ನು ಎದುರಿಸಬೇಕಾಗುತ್ತದೆ ಎಂದು ಎಚ್ಚರಿಸಿದ್ದಾರೆ. ಸರಕಾರ, ಸಚಿವರು ಕಾನೂನನ್ನು ರದ್ದುಗೊಳಿಸುವ ವಿಚಾರದಿಂದ ಹೊರಬರಬೇಕು.
ಕೆಲ ದಿನಗಳ ಹಿಂದೆ ಸಚಿವ ಎಂ.ಬಿ.ಪಾಟೀಲ ಅವರು ನಾಡಿನ ಹೆಸರಾಂತ ಚಿಂತಕ, ಸಾಹಿತಿ, ಪ್ರಖರ ರಾಷ್ಟ್ರೀಯವಾದಿ ಚಕ್ರವರ್ತಿ ಸೂಲಿಬೆಲೆ ಅವರನ್ನು ಜೈಲಿಗೆ ಹಾಕುವ ಮಾತುಗಳನ್ನಾಡಿದ್ದಾರೆ. ನಮ್ಮ ಸಂವಿಧಾನದಲ್ಲಿ ವಾಕ್ ಸ್ವಾತಂತ್ರ್ಯ ಇರುವುದು ಕಾಂಗ್ರೇಸ್ ಮರೆತಿದೆ ಎಂದು ಅನಿಸುತ್ತಿದೆ. ಸೈದ್ಧಾಂತಿಕವಾಗಿ ಎದುರಿಸಲಾಗದವರು ಕೊನೆಗೆ ಬೆದರಿಕೆಯ ತಂತ್ರಗಳಿಗೆ ಹೋಗುತ್ತಾರೆ ಎಂಬುದಕ್ಕೆ ಇದು ಸ್ಪಷ್ಟ ಉದಾಹರಣೆಯಾಗಿದೆ. ಅಲ್ಲದೆ ಇದು ಸರಕಾರದ ದ್ವೇಷದ ನಿಲುವನ್ನು ಸ್ಪಷ್ಟಪಡಿಸುತ್ತಿದೆ. ಸೂಲಿಬೆಲೆ ಅವರ ವಿಚಾರದಲ್ಲಿ ಸರಕಾರ ಏನಾದರೂ ಮೂಗು ತೂರಿಸಿದಲ್ಲಿ ನಾಡಿಗೆ ನಾಡೇ ಎದ್ದು ನಿಂತು ಪ್ರತಿಭಟಿಸಲಿದೆ.
ಕಾಂಗ್ರೆಸ್ ಅಧಿಕಾರಕ್ಕೆ ಬಂದ ಮದದಲ್ಲಿ ದ್ವೇಷ ರಾಜಕಾರಣ ಮಾಡುವುದರ ಬದಲು ಜನಸಾಮಾನ್ಯರು ಎದುರಿಸುತ್ತಿರುವ ಜ್ವಲಂತ ಸಮಸ್ಯೆಗಳ ಪರಿಹಾರಕ್ಕೆ ಗಮನಕೊಡಲಿ ಎಂದು ವಿಧಾನ ಪರಿಷತ್ ಸದಸ್ಯ ಪ್ರತಾಪಸಿಂಹ ನಾಯಕ್ ಆಗ್ರಹಿಸಿದ್ದಾರೆ.