ಕುಕ್ಕೇಡಿ: ಕೋಟಿ ಚೆನ್ನಯ ಸೇವಾ ಸಂಘ(ರಿ) ಕುಕ್ಕೇಡಿ ನಿಟ್ಟಡೆ ಸಂಘಟನೆ ವತಿಯಿಂದ ಹಾಗೂ ಸಂಘದ ಗೌರವ ಅಧ್ಯಕ್ಷ ಅಮ್ಮಾಜಿ ಕೋಟ್ಯಾನ್ ಹಿರ್ತೊಟ್ಟು ಇವರ ಸಹಕಾರದೊಂದಿಗೆ ಶಾಲಾ ಮಕ್ಕಳಿಗೆ ಪುಸ್ತಕ ವಿತರಣೆ ಜೂ.4 ರಂದು ನಡೆಯಿತು.
ಮುಖ್ಯ ಅತಿಥಿಗಳಾಗಿ ನಿವೃತ್ತ ಸಹಾಯಕ ಪೊಲೀಸ್ ಉಪನಿರೀಕ್ಷಕರು ಜಯ ಪೂಜಾರಿ ಭಾಗವಹಿಸಿ, ಮಕ್ಕಳಿಗೆ ಶಿಕ್ಷಣಕ್ಕೆ ಪ್ರೋತ್ಸಾಹ ನೀಡುವ ನಿಟ್ಟಿನಲ್ಲಿ ಇಂತಹ ಕೆಲಸ ಕಾರ್ಯಗಳು ಸಮಾಜಕ್ಕೆ ಮಾದರಿ ಇನ್ನಷ್ಟು ಸಾಮಾಜಿಕ ಸೇವಾ ಕಾರ್ಯಗಳು ಸಂಘಟನೆಯಿಂದ ನಡೆಯಲಿ ಎಂದು ಶುಭ ಹಾರೈಸಿದರು.
ಸಭೆಯ ಅಧ್ಯಕ್ಷತೆ ವಹಿಸಿದ್ದ ಸಂಘದ ಅಧ್ಯಕ್ಷ ರತ್ನಾಕರ ಸಾಲ್ಯಾನ್ ಬರ್ಕಜೆ ಮಾತನಾಡಿ, ನಾರಾಯಣ ಗುರುಗಳ ತತ್ವ ಆದರ್ಶಗಳನ್ನು ಮೈಗೂಡಿಸಿಕೊಂಡು ಯಾವುದೇ ಮಕ್ಕಳು ಶಿಕ್ಷಣದಲ್ಲಿ ವಂಚಿತರಾಗದೇ ಉನ್ನತ ಶಿಕ್ಷಣ ಪಡೆದು ಸ್ವತಂತ್ರರಾಗಿ ಸಮಾಜದಲ್ಲಿ ಬದುಕುವಂತರಾಗಬೇಕು. ಸಮಾಜ ಗುರುತಿಸುವಂತಹ ಕೆಲಸ ಕಾರ್ಯಗಳನ್ನು ನಡೆಸಲು ಎಲ್ಲರೂ ಜೊತೆಯಾಗಿ ಕೆಲಸ ಮಾಡುವುದರ ಮುಖಾಂತರ ಮಾದರಿ ಸಂಘಟನೆ ಎಂಬ ಕೀರ್ತಿಗೆ ಪಾತ್ರರಾಗಲು ಎಲ್ಲರ ಸಹಕಾರ ಅಗತ್ಯ ಎಂದರು.
ಸ್ಥಾಪಕ ಅಧ್ಯಕ್ಷ ಸತೀಶ್ ಕೆರಿಯರ್ ಮಾತನಾಡಿ, ಯಾವುದೇ ಟೀಕೆ ಟಿಪ್ಪಣಿಗಳಿಗೆ ಕಿವಿ ಕೊಡದೆ ಮಕ್ಕಳು ಶಿಕ್ಷಣದಲ್ಲಿ ಉನ್ನತ ಸ್ಥಾನಮಾನ ಗಳಿಸಿ ಕೀರ್ತಿವಂತರಾಗಬೇಕು ಎಂದು ಕರೆ ನೀಡಿದರು.
ವೇದಿಕೆಯಲ್ಲಿ ಯಶಲತಾ ಅಮ್ಮಾಜಿ ಉಪಸ್ಥಿತರಿದ್ದರು. ಅನನ್ಯ ಎ. ಪೂಜಾರಿ ಇವರ ಭಕ್ತಿ ಗೀತೆಯೊಂದಿಗೆ ಪ್ರಾರಂಭಗೊಂಡ ಕಾರ್ಯಕ್ರಮದಲ್ಲಿ ಅಮ್ಮಾಜಿ ಕೋಟ್ಯಾನ್ ಪ್ರಾಸ್ತಾವಿಕವಾಗಿ ಮಾತನಾಡಿ ಸ್ವಾಗತಿಸಿದರು. ನವೀನ್ ಬುಲೆಕ್ಕರ ಕಾರ್ಯಕ್ರಮ ನಿರೂಪಿಸಿದರು. ಸಂಘದ ಪದಾಧಿಕಾರಿಗಳು ಸರ್ವ ಸದಸ್ಯರು ಉಪಸ್ಥಿತರಿದ್ದರು. ಸಂಘದ ಕಾರ್ಯದರ್ಶಿ ರವಿ ಉಲ್ತುರ್ ವಂದಿಸಿದರು.