ಬೆಳ್ತಂಗಡಿ: ಬೆಳ್ತಂಗಡಿ ವಿಧಾನಸಭಾ ಕ್ಷೇತ್ರದ ಶಾಸಕ ಹರೀಶ್ ಪೂಂಜ ಚುನಾವಣೆ ಗೆದ್ದು ಅಭಿನಂದನಾ ಸಭೆಯಲ್ಲಿ ನನ್ನ ಹಿಂದುತ್ವದ ಬಗ್ಗೆ, ಹಿಂದೂ ಧರ್ಮದ ರಕ್ಷಣೆ ಬಗ್ಗೆ ಪ್ರಶ್ನಿಸಿದ್ದಾರೆ.ಹಿಂದೂ ಧರ್ಮದ ರಕ್ಷಣೆ ಬಗ್ಗೆ ಶಾಸಕ ಹರೀಶ್ ಪೂಂಜರಿಂದ ಕಲಿಯಬೇಕಾಗಿಲ್ಲ ಎಂದು ರಾಷ್ಟ್ರೀಯ ಹಿಂದೂ ಜಾಗರಣ ವೇದಿಕೆ ಸಂಸ್ಥಾಪಕ ಮಹೇಶ್ ಶೆಟ್ಟಿ ತಿಮರೋಡಿ ಹೇಳಿದರು.ಅವರು ಮೇ.26 ರಂದು ಬೆಳ್ತಂಗಡಿ ಶ್ರೀ ಗುರುನಾರಾಯಣ ಸಂಕೀರ್ಣದಲ್ಲಿ ಕರೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದರು.
1992 ರಿಂದ ಸುಮಾರು 31 ವರ್ಷಗಳಿಂದ ಹಿಂದುತ್ವದ ಪರವಾಗಿ ನಿರಂತರವಾಗಿ ಹೋರಾಟ ಮಾಡಿಕೊಂಡು ಬಂದಿದ್ದು.ನಾನು ಹಿಂದೂ ಜಾಗರಣ ವೇದಿಕೆಯಲ್ಲಿ ಸಕ್ರಿಯವಾಗಿ ಭಾಗವಹಿಸುವ ಪ್ರಾರಂಭದಲ್ಲಿ ನನ್ನಲ್ಲಿ ಯಾವುದೇ ವಾಹನವಿಲ್ಲದೆ ಇದ್ದರೂ ಕೂಡ ತಾಲೂಕಿನ ಮೂಲೆ ಮುಲೆಗೂ ಸಂಚರಿಸಿ ಸಂಘಟನೆಯನ್ನು ಕಟ್ಟಿ ಬೆಳಸಿದ್ದು, ಸಂಘಟನೆಯ ಹಲವು ಜವಾಬ್ದಾರಿಯನ್ನು ಸಮರ್ಥವಾಗಿ ನಿರ್ವಹಿಸಿ ನ್ಯಾಯ ಒದಗಿಸಿದ್ದು ಸಂಘದ ಜವಾಬ್ದಾರಿಯಿಂದ ವಿಮುಕ್ತವಾದ ನಂತರದ ದಿನಗಳಲ್ಲಿಯೂ ಕೂಡ ಸಂಘ ನೀಡಿದ ಶಿಕ್ಷಣದಿಂದ ನನ್ನದೇ ರೀತಿಯಲ್ಲಿ ಹಿಂದುತ್ವ ಹೋರಾಟ ಮಾಡಿಕೊಂಡು ಬಂದಿದ್ದು, ಧರ್ಮದ ವಿಷಯದಲ್ಲಿ ಯಾವುದೇ ರೀತಿಯಲ್ಲಿ ರಾಜಿಯಾಗದ, ಧರ್ಮ ನಿಷ್ಠೆಯನ್ನು ಹೊಂದಿ ದೇಶದ ಯಾವುದೇ ಮೂಲೆಯಲ್ಲಿ ಹಿಂದೂ ಧರ್ಮಕ್ಕೆ ಅಪಮಾನ ಮತ್ತು ಅನ್ಯಾಯವಾದಾಗ ಸಾವಿರಾರು ಕಾರ್ಯಕರ್ತರನ್ನು ಸೇರಿಸಿಕೊಂಡು ಹೋರಾಟ ಮಾಡಿ ಧರ್ಮ ಜಾಗೃತಿಯನ್ನು ಮಾಡಿದ್ದು ಹಾಗೂ ಹಿಂದೂ ಹೆಣ್ಣು ಮಕ್ಕಳಿಗೆ ಅನ್ಯಧರ್ಮೀಯರಿಂದ ಅನ್ಯಾಯವಾದಾಗ ಸಂತ್ರಸ್ತ ಹೆಣ್ಣು ಮಕ್ಕಳ ಪರವಾಗಿ ನಿಂತು ಉಗ್ರವಾಗಿ ಪ್ರತಿಭಟಿಸಿ ಹಲವಾರು ಹೆಣ್ಣುಮಕ್ಕಳಿಗೆ ನ್ಯಾಯ ಒದಗಿಸಿದ್ದೇನೆ. ಇಷ್ಟೆಲ್ಲಾ ಹಿಂದುತ್ವ ಪರವಾದ ಹೋರಾಟದಲ್ಲಿ ನನಗೆ ದಕ್ಕಿದ್ದು ಸುಮಾರು 35 ಕ್ಕೂ ಹೆಚ್ಚು ಕೇಸುಗಳು ಮಾತ್ರ. ನನ್ನ ಜೀವನದ ಬಹುಪಾಲು ಪೊಲೀಸ್ ಸ್ಟೇಷನ್ ಮತ್ತು ಕೋರ್ಟ್ ಗೆ ಅಲೆದಾಡಿದ್ದು, ನನ್ನ ವೈಯಕ್ತಿಕ ಕಾರಣಕ್ಕಾಗಿ ಅಲ್ಲ, ಕೇವಲ ಹಿಂದೂ ಧರ್ಮದ ರಕ್ಷಣೆಯ ಸಲುವಾಗಿ ಅನ್ಯ ಧರ್ಮೀಯರು ಮಾರಕಾಸ್ತ್ರ ಹಿಡಿದು ನನ್ನ ವಿರುದ್ಧ ನಿಂತಾಗಲೂ ಕೂಡ ಎದೆಗುಂದದೆ ತನ್ನ ಪ್ರಾಣವನ್ನು ಪಣಕ್ಕಿಟ್ಟು ಹೋರಾಟ ಮಾಡಿದ್ದು ನನ್ನ ಹಿಂದುತ್ವವಾಗಿದೆ.ಈ ಬಗ್ಗೆ ಪ್ರಶ್ನಿಸುವ ಯಾವುದೇ ಹಕ್ಕು ಶಾಸಕ ಹರೀಶ್ ಪೂಂಜರಿಗೆ ಇಲ್ಲ ಎಂದರು.
ಪತ್ರಿಕಾ ಗೋಷ್ಠಿಯಲ್ಲಿ ಮನೋಜ್ ಕುಂಜರ್ಪ, ಪುರಂದರ ಸುರ್ಯ, ಸಂತೋಷ್ ಕಡಂಬು, ಅಶ್ವಥ್ ಕುಕ್ಕೆಡಿ, ವೆಂಕಪ್ಪ ಕೋಟ್ಯಾನ್ ಇಂದಬೆಟ್ಟು, ಪ್ರಜ್ವಲ್ ಕಲ್ಮಂಜ ಉಪಸ್ಥಿತರಿದ್ದರು.