ಬೆಳ್ತಂಗಡಿ: ಬೆಳ್ತಂಗಡಿಯ ಮಾಜಿ ಶಾಸಕ ವಸಂತ ಬಂಗೇರ ಇಂದು ಸುದ್ದಿಗೋಷ್ಠಿ ನಡೆಸಿ ಹಲವು ವಿಚಾರಗಳ ಬಗ್ಗೆ ಮಾತನಾಡಿದರು.ಚುನಾವಣೆಯಲ್ಲಿ ಗೆದ್ದ ಕಾಂಗ್ರೆಸ್ ಸರಕಾರದ ಮುಖ್ಯಮಂತ್ರಿ ಮತ್ತು ಉಪ ಮುಖ್ಯಮಂತ್ರಿಗಳಿಗೆ ಅಭಿನಂದನೆ ಸಲ್ಲಿಸಿದರು.ಕಾಂಗ್ರೆಸ್ ಪಕ್ಷದ ಗ್ಯಾರಂಟಿಗಳ ಬಗ್ಗೆ ಅನುಮಾನ ಬೇಡ.ಮುಂದಿನ ಸಚಿವ ಸಂಪುಟ ಸಭೆಯ ನಂತರ ಎಲ್ಲವೂ ಸಿಗುತ್ತದೆ. ಕಾಂಗ್ರೆಸ್ ಪಕ್ಷದ ಗ್ಯಾರಂಟಿ ಕಾರ್ಡ್ ಬಗ್ಗೆ ಯಾರಿಗೂ ಯಾವುದೇ ಅನುಮಾನ ಬೇಡ. ಗ್ಯಾರಂಟಿ ಬಗ್ಗೆ ನಮಗಿಲ್ಲದ ಟೆನ್ಶನ್ ಬಿಜೆಪಿಯವರಿಗಿದೆ, ಯಾಕೆ?, ಕಾಂಗ್ರೆಸ್ ಗ್ಯಾರಂಟಿಗಳು ಜನರಿಗೆ ಸಿಗುತ್ತದೆ. ಮುಂದಿನ ಸಚಿವ ಸಂಪುಟ ಸಭೆಯ ನಂತರ ಗ್ಯಾರಂಟಿಗಳು ಜನರಿಗೆ ಸಿಗುತ್ತದೆ. ಅದರ ಬಗ್ಗೆ ಯಾವುದೇ ಅನುಮಾನ ಬೇಡ, ಆತಂಕ ಪಡುವ ಅಗತ್ಯವಿಲ್ಲ ಎಂದರು.
ಸಿದ್ಧರಾಮಯ್ಯ ವಿರುದ್ಧ 24 ಹಿಂದೂಗಳ ಹತ್ಯೆ ಆರೋಪ ಮಾಡಿದ ಶಾಸಕ ಶಾಸಕರ ವಿರುದ್ಧ ಕಾರ್ಯಕರ್ತರು ದೂರು ನೀಡಿದ್ದಾರೆ.ಬೆಳ್ತಂಗಡಿ ಶಾಸಕ ಹರೀಶ್ ಪೂಂಜರವರು ಮುಖ್ಯಮಂತ್ರಿ ಸಿದ್ಧರಾಮಯ್ಯನವರು 24 ಜನ ಹಿಂದೂ ಕಾರ್ಯಕರ್ತರನ್ನು ಕೊಂದಿದ್ದಾರೆ ಎನ್ನುವಂತಹ ಮಾತನ್ನು ಸಾರ್ವಜನಿಕವಾಗಿ ಹೇಳಿದ್ದು, ಇದನ್ನು ನಾನು ಖಂಡಿಸುತ್ತೇನೆ ಎಂದರು. ಈ ಬಗ್ಗೆ ಕಾರ್ಯಕರ್ತರು ಪೊಲೀಸರಿಗೆ ದೂರು ನೀಡಿದ್ದು ಶಾಸಕ ಹರೀಶ್ ಪೂಂಜ ಮತ್ತು ಬಿಜೆಪಿ ಮಂಡಲಾಧ್ಯಕ್ಷ ಜಯಂತ್ ಕೋಟ್ಯಾನ್ ವಿರುದ್ಧ ಬೆಳ್ತಂಗಡಿ ಠಾಣಾಧಿಕಾರಿಗಳು ಪ್ರಕರಣ ದಾಖಲಿಸಿಕೊಂಡಿದ್ದಾರೆ ಎಂದರು.ಹಣ ಹಂಚಿಕೆ ವಿಚಾರದಲ್ಲಿ ಅಧಿಕಾರಿಗಳು ಬಿಜೆಪಿಯೊಂದಿಗೆ ಶಾಮೀಲು, ಚುನಾವಣೆಯ ಹಿಂದಿನ ದಿನ ಘಟನೆಯಲ್ಲಿ ನಾನು ಬಂದ ನಂತರ ಹಣ ಸಿಕ್ಕಿದು ಹೇಗೆ?, ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿ ಹರೀಶ್ ಪೂಂಜರವರು ಮತದಾರರಿಗೆ ಹೇರಳವಾಗಿ ಹಣ ಹೆಂಡ ಹಂಚಿ ವಿಜೇತರಾಗಿದ್ದಾರೆ. ಹಣ ಹಂಚುವುದಕ್ಕೆ ಚುನಾವಣಾಧಿಕಾರಿಗಳು, ಸರಕಾರಿ ಅಧಿಕಾರಿಗಳು, ಪೊಲೀಸ್ ಇಲಾಖಾಧಿಕಾರಿಗಳು ಹರೀಶ್ ಪೂಂಜರವರ ಜೊತೆ ಶಾಮೀಲಾಗಿದ್ದಾರೆ ಎಂದು ನೇರವಾಗಿ ಆರೋಪಿಸಿದರು.ಬೆಳ್ತಂಗಡಿಯ ಕೆಲ್ಲಗುತ್ತುವಿನಲ್ಲಿ ಹಣ ಹಂಚುವಾಗ ನಗರ ಪಂಚಾಯತ್ ಉಪಾಧ್ಯಕ್ಷ ಜಯಾನಂದ ಗೌಡ, ಸದಸ್ಯ ಶರತ್ ಶೆಟ್ಟಿ, ಮತ್ತು ಸಂಕೇತ್ ಶೆಟ್ಟಿ ಎಂಬವರುಗಳು ನಮ್ಮ ಕಾರ್ಯಕರ್ತರ ಕೈಗೆ ಸಿಕ್ಕಿಬಿದ್ದಿದ್ದು ನಂತರ ನಾನು ಅಲ್ಲಿಗೆ ತೆರಳಿದ ನಂತರ ನಮ್ಮ ಒತ್ತಾಯಕ್ಕೆ ಮೂರನೇ ಬಾರಿ ತಪಾಸಣೆ ನಡೆಸಿದರು. ನಾನು ಹೋದಾಗ ಮೊದಲೆರಡು ಸಲ ತಪಾಸಣೆ ನಡೆದಿದೆ ಏನೂ ಸಿಕ್ಕಿಲ್ಲ ಅಂತ ಹೇಳಿದ ಅಧಿಕಾರಿ, ಮೂರನೇ ಸಲ ನನ್ನ ಸಮಕ್ಷಮದಲ್ಲಿ ತಪಾಸಣೆ ಮಾಡಿದಾಗ 61,500 ರೂಪಾಯಿ ಸಿಕ್ಕಿದ್ದು ಹೇಗೆ ಎಂದು ಪ್ರಶ್ನಿಸಿದರು. ಬಿಜೆಪಿಯವರು ಹಣ ಹಂಚುವ ಬಗ್ಗೆ ಹಲವು ಕಡೆಗಳ ಮಾಹಿತಿ ನೀಡಿದರೂ ಅಧಿಕಾರಿಗಳು ಕಣ್ಣು ಮುಚ್ಚಿ ಕುಳಿತರು.ಕೆಲ್ಲಗುತ್ತುವಿನ ಘಟನೆಯಲ್ಲಿ ಜಯಾನಂದ್ ಗೌಡ, ಶರತ್ ಶೆಟ್ಟಿ, ಸಂಕೇತ್ ಶೆಟ್ಟಿ ಎಂಬವರ ಮೇಲೆ ಎಫ್ ಐ ಆರ್ ದಾಖಲಾಗಿದೆ. ಆದರೆ ಇದನ್ನು ಬಿ ರೀಪೋರ್ಟ್ ಹಾಕಲು ಶಾಸಕ ಹರೀಶ್ ಪೂಂಜ ಒತ್ತಡ ಹೇರುತ್ತಿದ್ದು, ಅಂತಹ ದುಸ್ಸಾಹಸಕ್ಕೆ ಪೊಲೀಸರು ಕೈ ಹಾಕಬಾರದು ಎಂದು ವಸಂತ ಬಂಗೇರ ಎಚ್ಚರಿಕೆ ನೀಡಿದರು.ವಿಜಯೋತ್ಸವದ ವೇಳೆ ಬಿಜೆಪಿಯವರಿಂದ ದಬ್ಬಾಳಿಕೆ, ಚುನಾವಣೆಯ ಬಳಿಕ ಬಿಜೆಪಿಯವರು ವಿಜಯೋತ್ಸವ ನಡೆಸುವ ಸಂದರ್ಭದಲ್ಲಿ ತಾಲೂಕಿನ ಹಲವಾರು ಕಡೆ ನಮ್ಮ ಪಕ್ಷದ ಕಾರ್ಯಕರ್ತರ ಮನೆಯ ಅಂಗಳಕ್ಕೆ ಮತ್ತು ದನದ ಹಟ್ಟಿಯೊಳಗಡೆ ಪಟಾಕಿ ಸಿಡಿಸಿದ್ದು ಅಂತಹ ಎಲ್ಲಾ ಕಡೆ ನಮ್ಮ ಕಾರ್ಯಕರ್ತರು ಬಿಜೆಪಿಯವರ ದಬ್ಬಾಳಿಕೆಯನ್ನು ಸಮರ್ಥವಾಗಿ ಎದುರಿಸಿದ್ದು ಎಲ್ಲಾ ಕಡೆ ತಪ್ಪಿತಸ್ಥರ ವಿರುದ್ಧ ಎಪ್ ಐ ಆರ್ ಆಗಿದೆ. ನಾವೂ ಕೂಡ ವಿಜಯೋತ್ಸವ ಆಚರಿಸಿದ್ದೇವೆ, ಆದರೆ ಯಾವುದೇ ಇಂತಹ ವರ್ತನೆ ತೋರಿಲ್ಲ ಅಂತ ಬಂಗೇರ ತಮ್ಮ ಕಾರ್ಯಕರ್ತರನ್ನು ಸಮರ್ಥಿಸಿಕೊಂಡರು.
ಕಾಂಗ್ರೆಸ್ ಅಭ್ಯರ್ಥಿ ನಾಮಪತ್ರ ಸಲ್ಲಿಕೆ ವೇಳೆ ಆಂಬ್ಯುಲೆನ್ಸ್ ಯಾಕೆ ಓಡಾಡಿತು? ಕಾಂಗ್ರೆಸ್ ಅಭ್ಯರ್ಥಿ ರಕ್ಷಿತ್ ಶಿವರಾಂ ನಾಮಪತ್ರ ಸಲ್ಲಿಸುವ ಮೆರವಣಿಗೆಗೆ ಹರೀಶ್ ಪೂಂಜ ಬೆಂಬಲಿಗ ಆಂಬ್ಯುಲೆನ್ಸ್ ನವರು ವಿನಾಕಾರಣ ಅತ್ತಿಂದಿತ್ತ ಓಡಾಡಿದ್ದಾರೆ. ಇದಕ್ಕೆ ದೂರು ನೀಡಲಾಗಿತ್ತು. ಅದಕ್ಕಾಗಿ ಖುಷಿ ಆಂಬ್ಯುಲೆನ್ಸ್ ನವರು 17-04-2023ರಂದು 12.30 ಗಂಟೆಗೆ ಗುರುವಾಯನಕೆರೆಯ ಅಭಯ ಆಸ್ಪತ್ರೆಯಿಂದ ಉಜಿರೆ ಎಸ್ ಡಿ ಎಂ ಆಸ್ಪತ್ರೆಯ ವೈದ್ಯರಾದ ಡಾ. ಪ್ರಿಯಾಂಕ ಎಂಬವರನ್ನು ಕರೆದುಕೊಂಡು ಉಜಿರೆಗೆ ಬಿಟ್ಟು ನಂತರ ಉಜಿರೆಯಿಂದ ಕರೆದುಕೊಂಡು ಸುಮಾರು 1.30ಕ್ಕೆ ಅಭಯಾ ಆಸ್ಪತ್ರೆಗೆ ಕರೆದುಕೊಂಡು ಬಳಿಕ ಅದೇ ಆಂಬ್ಯುಲೆನ್ಸ್ ನಲ್ಲಿ ಸುಮಾರು 2.30ಗಂಟೆಗೆ ವಾಪಾಸ್ ಬಿಟ್ಟಿರುತ್ತೇನೆ ಅಂತ ತಿಳಿಸಿದ್ದಾರೆ. ಆ ವೈದ್ಯನಿಗೆ ನಾಚಿಕೆ ಆಗಲ್ವ, ಆಂಬ್ಯುಲೆನ್ಸ್ ಇರುವುದು ವೈದ್ಯರ ಓಡಾಟಕ್ಕಾ ಅಂತ ಬಂಗೇರರು ಪ್ರಶ್ನಿಸಿದರು. ಅಲ್ಲದೇ, ಅವತ್ತು ನಿಯಮವನ್ನು ಮೀರಿ, ಬಿಜೆಪಿಯವರಿಗೆ ಮೀಸಲಿಟ್ಟ ಮಾರ್ಗ ಬಳಸದೇ ನಮ್ಮ ಮೆರವಣಿಗೆಯ ಮಾರ್ಗದಲ್ಲೇ ಸಾಗಿ ವಿವಾದ ಎಬ್ಬಿಸಲು ಪ್ರಯತ್ನಿಸಿದ್ದಾರೆ ಎಂದು ಆರೋಪಿಸಿದರು.ನಮ್ಮವರ ಮೇಲೆ ನಮಗೆ ಬೇಸರ ನಾನು ಬಾವಲಿ ಆಗಲು ಇಚ್ಛಿಸಲ್ಲ.
ಸುದ್ದಿಗೋಷ್ಠಿಯ ವೇಳೆ ಬಂಗೇರರೇ ಕಾಂಗ್ರೆಸ್ ಪರವಾಗಿ ನೀವ್ಯಾಕೆ ಒಬ್ಬರೇ ಪ್ರೆಸ್ ಮೀಟ್, ಹೋರಾಟ ಎಲ್ಲಾ ಮಾಡ್ತಿದ್ದೀರಿ, ಉಳಿದ ನಾಯಕರು ಇಲ್ಲವೇ ಅಂತ ಕೇಳಿದ ಪ್ರಶ್ನೆಗೆ ಉತ್ತರಿಸಿದ ಬಂಗೇರರು, ಈ ಬಗ್ಗೆ ನನಗೂ ಬೇಸರವಿದೆ. ಪತ್ರಕರ್ತರಿಗೂ ಇದರ ಬಗ್ಗೆ ತಿಳಿದಿದೆ. ನಾನು ಹಿರಿಯ ನಾಯಕ. ಇಲ್ಲಿಯವರೆಗೆ ಬಾಯಿ ಬಿಟ್ಟಿಲ್ಲ. ಹೇಳುವಾಗ ಹೇಳುತ್ತೇನೆ. ಅದೆಷ್ಟೇ ದೊಡ್ಡ ಜನ ಇರಲಿ.ನನಗೆ ಗೊತ್ತಿದೆ ಏನು ಮಾಡಬೇಕು ಅಂತ. ಏನು ಮಾಡುವುದು ನನ್ನ ಸ್ಥಿತಿ ಹಾಗಿದೆ, ನಾನು ಮುದುಕನಾಗಿದ್ದೇನೆ. ನನ್ನ ಬಗ್ಗೆ ಜಾಗೃತಿ ಮಾಡ್ಬೇಕಲ್ವಾ, ಆಚೆಯಿಂದ ಈಚೆಯಿಂದ ಬಂದು ದಡಬಡ ಮಾಡಿದ್ರೆ ಏನ್ಮಾಡುವುದು ಅಂತ ಪ್ರಶ್ನಿಸಿದರು.ಈಗ ಕಾಲ ಬದಲಾಗಿದೆ. ಗೌರವ ಸ್ಥಾನ ಮಾನ ಯಾವುದೂ ಇಲ್ಲ. ಹಿರಿಯತನಕ್ಕೆ ಗೌರವ ಇಲ್ಲ. ದುಡ್ಡಿಗೆ ಮಾತ್ರ ಗೌರವ ಎಂದು ಮಾರ್ಮಿಕವಾಗಿ ಉತ್ತರಿಸಿದರು. ನಿಮ್ಮ ಪ್ರಶ್ನೆಗೆ ಮುಂದಿನ ದಿನಗಳಲ್ಲಿ ಉತ್ತರ ನೀಡುತ್ತೇನೆ. ಮತದಾರರಿಗೆ ಅಭಿನಂದನೆ ಸಲ್ಲಿಸುವ ಸಂದರ್ಭದಲ್ಲಿ ಕೆಲ ವಿಚಾರಗಳ ಬಗ್ಗೆ ಪ್ರಸ್ತಾಪ ಮಾಡುತ್ತೇನೆ. ಈಗ ಪ್ರಸ್ತಾಪ ಮಾಡಲ್ಲ ಕ್ಷಮಿಸಿ ಎಂದು ತಿಳಿಸಿದರು.
ಎಂ ಎಲ್ ಸಿ ಸ್ಥಾನದ ಬಗ್ಗೆ ಬಂಗೇರ ಏನಂದ್ರು? – ಸಾಮಾಜಿಕ ಜಾಲತಾಣದಲ್ಲಿ ಬಂಗೇರರಿಗೆ ಎಂ ಎಲ್ ಸಿ ಸ್ಥಾನ ನೀಡಿ ಸಚಿವ ಸ್ಥಾನ ಸಿಗುತ್ತೆ ಅಂತ ಬರೆಯಲಾಗಿದೆ ಅಂತ ಕೇಳಿದ ಪ್ರಶ್ನೆಗೆ ಉತ್ತರಿಸಿದ ಬಂಗೇರರು, ಇದ್ರಲ್ಲೂ ಕುತಂತ್ರವಿದೆ, ಬಿಜೆಪಿಯವರೂ ಮಾಡಿರಲೂಬಹುದು ಅಥವಾ ಇನ್ಯಾರಾದ್ರೂ ಮಾಡಿರಲೂ ಬಹುದು. ಆದರೆ ಇದು ಬೇಕಾದವರು ಮಾಡಿದ್ದಲ್ಲ ಅಂತ ಹೇಳಲಿಕ್ಕೆ ಇಚ್ಚಿಸುತ್ತೇನೆ. ನಾನು ಯಾವುದೇ ಸ್ಥಾನಮಾನವನ್ನು ಬಯಸಿಲ್ಲ ಎಂದರು.ಪ್ರಮಾಣವಚನ ಕಾರ್ಯಕ್ರಮಕ್ಕೆ ನಾನು ಹೋಗಬೇಕಿತ್ತು. ಕೆಲವರು ಅಲ್ಲಿ ಹೋಗಿ ಬಾವಲಿಗಳ ಥರಾ ನೇತಾಡುತ್ತಿದ್ದಾರೆ. ನನಗೆ ನಾಚಿಕೆಯಾಗುತ್ತೆ. ನಮ್ಮ ಪಕ್ಷದವರೇ ಆಗಲಿ ಯಾರೇ ಆಗಲಿ ನಮಗೆ ಗೌರವ ಉಂಟು.ಆ ರೀತಿ ಅಗೌರವದ ಕೆಲಸ ನನ್ನಿಂದ ಸಾಧ್ಯವಿಲ್ಲ ಎಂದು ತಿಳಿಸಿದರು. ಮುಂದಿನ ವಾರ ನಾನು ಸಿಎಂ, ಡಿಸಿಎಂ, ಉಳಿದ ಸಚಿವರಿಗೆ ಗೌರವ ಸಲ್ಲಿಸುತ್ತೇನೆಂದು ತಿಳಿಸಿದರು. ಫೋನ್ ನಲ್ಲಿಯೂ ಯಾರಿಗೂ ಮಾತಾಡಿಲ್ಲ, ಇಂದು ಬೆಳಗ್ಗೆ ಸ್ಪೀಕರ್ ಖಾದರ್ ರವರಿಗೆ ಅಭಿನಂದನೆ ಸಲ್ಲಿಸಿದ್ದೇನೆಂದು ತಿಳಿಸಿದರು.