ಧರ್ಮಸ್ಥಳ: ರೋಟರಿ ಕ್ಲಬ್ ಬೆಳ್ತಂಗಡಿಯ ವಾರದ ಸಭೆಯು ಮೇ.23 ರಂದು ಶ್ರೀ ಕ್ಷೇತ್ರ ಧರ್ಮಸ್ಥಳದ ಸನ್ನಿಧಿಯಲ್ಲಿ ನಡೆಯಿತು.ಕ್ಲಬ್ ನ ಗೌರವ ಸದಸ್ಯರು ಧರ್ಮಾಧಿಕಾರಿ ಡಾ.ಡಿ. ವೀರೇಂದ್ರ ಹೆಗ್ಗಡೆಯವರು ವಾರದ ಸಭೆಯಲ್ಲಿ ಸಂಪೂರ್ಣವಾಗಿ ಭಾಗಿಯಾಗಿದ್ದರು.
ಡಾ.ಹೆಗ್ಗಡೆಯವರು ರೋಟರಿಯಲ್ಲಿ ಸೇವೆಯ ಮಹತ್ವದ ಬಗ್ಗೆ ವಾರದ ವಿಶೇಷ ಉಪನ್ಯಾಸವನ್ನು ನೀಡಿದರು. ಸದಸ್ಯರು ತಮ್ಮ ವ್ಯಕ್ತಿತ್ವವನ್ನು ಉನ್ನತೀಕರಿಸಿಕೊಂಡು ಸಮರ್ಪಣಾ ಭಾವದಲ್ಲಿ ಸೇವೆಯಲ್ಲಿ ತೊಡಗಿಸಿಕೊಳ್ಳಲು ರೋಟರಿ ಸಂಸ್ಥೆಯಲ್ಲಿ ಉತ್ತಮ ಅವಕಾಶವಿದೆಯೆಂದು ಅವರು ಅಭಿಪ್ರಾಯಪಟ್ಟರು.
ಸಂಸ್ಥೆಯ ಸೇವಾಚಟುವಟಿಕೆಗಳ ಬಗ್ಗೆ ಹೆಗ್ಗಡೆಯವರು ಮೆಚ್ಚುಗೆ ವ್ಯಕ್ತಪಡಿಸಿ ಸಂಸ್ಥೆಗೆ ಶುಭ ಹಾರೈಸಿದರು.ನಂತರದಲ್ಲಿ ತಮ್ಮ ರಾಜ್ಯಸಭೆಯ ಅನುಭವವೂ ಸೇರಿದಂತೆ ವಿವಿಧ ವಿಷಯಗಳ ಕುರಿತಾಗಿ ಸಂವಾದದಲ್ಲಿ ಪಾಲ್ಗೊಂಡರು.
ರೋಟರಿಯ ಹಿರಿಯ ಸದಸ್ಯರಾಗಿದ್ದ ದಿ.ಡಾ.ಯಶೋವರ್ಮರ ಪ್ರಥಮ ಪುಣ್ಯ ತಿಥಿಯ ಸಂದರ್ಭವಾಗಿ ಅವರ ಸೇವೆಯನ್ನು ಗೌರವಪೂರ್ವಕವಾಗಿ ಸ್ಮರಿಸಲಾಯಿತು.
ರೊ. ಡಾ. ಪ್ರಕಾಶ್ ಪ್ರಭುರವರು ಪ್ರಾರ್ಥನೆಯನ್ನು ಮಾಡಿದರು. ರೊ. ತ್ರಿವಿಕ್ರಮ ಹೆಬ್ಬಾರವರು ರೋಟರಿ ಮಾಹಿತಿಯನ್ನು ನೀಡಿದರು. ನಿಯೋಜಿತ ಅಧ್ಯಕ್ಷ ರೊ. ಅನಂತ ಭಟ್ ಮಚ್ಚಿಮಲೆ ಧನ್ಯವಾದವಿತ್ತರು.
ಸಭೆಯ ಅಧ್ಯಕ್ಷತೆಯನ್ನು ರೋಟರಿ ಕ್ಲಬ್ ಅಧ್ಯಕ್ಷೆ ರೊ. ಮನೋರಮಾ ಭಟ್ ವಹಿಸಿದ್ದರು. ಸಭೆಯಲ್ಲಿ ರೋಟರಿ ಸಹಾಯಕ ಗವರ್ನರ್ ರೊ. ಮೇಜರ್ ಡೋನಾರ್ ನಿವೃತ್ತ ಮೇಜರ್ ಜನರಲ್ ಎಂ ವಿ ಭಟ್,ವಿಧಾನ ಪರಿಷತ್ ಸದಸ್ಯ ರೊ. ಪ್ರತಾಪ ಸಿಂಹ ನಾಯಕ್, ಜೋನಲ್ ಲೆಫ್ಟಿನೆಂಟ್ ರೊ. ಶರತ್ ಕೃಷ್ಣ ಪಡ್ವೆಟ್ಣಾಯ, ಕಾರ್ಯದರ್ಶಿ ರೊ. ರಕ್ಷಾ ರಾಗ್ನೀಶ್, ನಿಯೋಜಿತ ಕಾರ್ಯದರ್ಶಿ ರೊ. ವಿದ್ಯಾ ಕುಮಾರ್ ಕಾಂಚೋಡು,ಆ್ಯನ್ಸ್ ಕ್ಲಬ್ ಅಧ್ಯಕ್ಷೆ ಶ್ರೀಮತಿ ಸುಜಾತಾ ಅಣ್ಣಿ ಪೂಜಾರಿ ಹಾಗೂ ಕ್ಲಬ್ ನ ಪೂರ್ವಾಧ್ಯಕ್ಷರುಗಳು ಸದಸ್ಯರು ಭಾಗವಹಿಸಿದ್ದರು.