Site icon Suddi Belthangady

ಚಾರ್ಮಾಡಿ, ಕಡಿರುದ್ಯಾವರದಲ್ಲಿ ಕಾಡಾನೆ ಹಾವಳಿ

ಚಾರ್ಮಾಡಿ: ಚಾರ್ಮಾಡಿ ಗ್ರಾಮದ ಹೊಸಮಠ ಪರಿಸರದಲ್ಲಿ ಕಾಡಾನೆಗಳ ಹಿಂಡು ದಾಳಿ ನಡೆಸಿದ ಘಟನೆ ನಡೆದಿದೆ. ಹೊಸಮಠ ಪರಿಸರದ ಚಂದ್ರನ್ ಎಂಬವರ ಕೃಷಿತೋಟದಲ್ಲಿ 114 ಅಡಕೆ ಮರ, ಸಿಂಧೂ ರವಿ ಅವರ ತೋಟದ 36 ಅಡಕೆ ಮರ ಹಾಗೂ ಪುರುಷೋತ್ತಮ್ ಎಂಬುವರ ತೋಟದ 33 ಅಡಕೆ ಮರಗಳನ್ನು ಮುರಿದು ಹಾಕಿದೆ.

ಕಾಡಾನೆಗಳು ಚಾರ್ಮಾಡಿ-ಕನಪಾಡಿ ಮೀಸಲು ಅರಣ್ಯದಿಂದ ಮೃತ್ಯುಂಜಯ ನದಿ ಮೂಲಕ ಆಗಮಿಸಿ, ಕೃಷಿ ನಾಶಗೊಳಿಸಿದ ಬಳಿಕ ಅದೇ ಹಾದಿಯಲ್ಲಿ ಅರಣ್ಯದ ಕಡೆ ನಿರ್ಗಮಿಸಿರುವ ಕುರುಹುಗಳು ಪತ್ತೆಯಾಗಿವೆ. ಈ ಬಗ್ಗೆ ಅರಣ್ಯ ಇಲಾಖೆ ಸಿಬ್ಬಂದಿ ಪರಿಸರದಲ್ಲಿ ಪರಿಶೀಲನೆ ನಡೆಸಿ ಪರಿಹಾರ ಮಂಜೂರಾತಿಗೆ ಅರ್ಜಿ ಸಲ್ಲಿಸಲು ಮಾಹಿತಿ ನೀಡಿದೆ.

ಕಡಿರುದ್ಯಾವರದಲ್ಲಿ ಬುಧವಾರ ತಡರಾತ್ರಿ ಸಿರಿಬೈಲು ಕಿರಣ ಹೆಬ್ಬಾರ್ ರವರ ತೋಟಕ್ಕೆ ದಾಳಿ ನಡೆಸಿದ ಒಂಟಿ ಸಲಗ ಸುಮಾರು 15ಕ್ಕಿಂತ ಅಧಿಕ ಬಾಳೆ ಗಿಡಗಳನ್ನು ಧ್ವಂಸಗೈದಿದೆ. ಕಳೆದ ಎರಡು ದಿನಗಳ ಹಿಂದೆ ಇಲ್ಲಿಗೆ ಸಮೀಪದ ಇನ್ನೊಬ್ಬ ಕೃಷಿಕರ ತೋಟಕ್ಕೆ ಒಂಟಿ ಸಲಗ ಆಗಮಿಸಿದ್ದು ಹೆಚ್ಚಿನ ಕೃಷಿ ನಾಶ ಮಾಡಿರಲಿಲ್ಲ.

ಬುಧವಾರ ಸಂಜೆ ಚಾರ್ಮಾಡಿ ಘಾಟಿಯಲ್ಲಿ ರಸ್ತೆ ಬದಿ ಕಂಡು ಬಂದ ಒಂಟಿ ಸಲಗ ಹಲವು ಹೊತ್ತು ಟ್ರಾಫಿಕ್ ಜಾಮ್ ಗೆ ಕಾರಣವಾಗಿತ್ತು.

Exit mobile version