ಮಡಂತ್ಯಾರು:ಮಡಂತ್ಯಾರು ಸೇಕ್ರೆಡ್ ಹಾರ್ಟ್ ಚರ್ಚ್‌ನಲ್ಲಿ ಧರ್ಮಗುರುಗಳಾಗಿ ಸೇವೆಸಲ್ಲಿಸಿ ವರ್ಕಾಡಿ ಚರ್ಚ್‌ಗೆ ನಿಯುಕ್ತಿಗೊಂಡ ವಂ.ಬೇಸಿಲ್ ವಾಸ್ ಅವರಿಗೆ ಮಡಂತ್ಯಾರು ಸೇಕ್ರೆಡ್ ಹಾರ್ಟ್ ವಿದ್ಯಾಸಂಸ್ಥೆ ಹಾಗೂ ಸ್ಥಳೀಯ ಸಂಘ-ಸಂಸ್ಥೆಗಳಿಂದ ಸನ್ಮಾನ ಸಮಾರಂಭ ಮೇ.18ರಂದು ಸೇಕ್ರೆಡ್ ಹಾರ್ಟ್ ಸಭಾಭವನದಲ್ಲಿ ನಡೆಯಿತು.
ಮಂಗಳೂರು ಬಿಷಪ್ ರೈ| ರೆ| ಡಾ| ಪೀಟರ್ ಪಾವ್ಲ್ ಸಲ್ದಾನ್ಹಾ ಅವರು ಸನ್ಮಾನಿಸಿ ಮಾತನಾಡಿ, ತನ್ನ ಅಚ್ಚುಕಟ್ಟಾದ ಸೇವೆಯ ಮೂಲಕ ಎಲ್ಲರ ಪ್ರೀತಿಗೆ ಪಾತ್ರರಾಗಿದ್ದ ವಂ। ಬೇಸಿಲ್ ವಾಸ್ 6 ವರ್ಷಗಳ ಕಾಲ ಮಡಂತ್ಯಾರು ಚರ್ಚ್‌ನಲ್ಲಿ ಕಾರ್ಯ ನಿರ್ವಹಿಸಿದ್ದು, ಎಲ್ಲರನ್ನೂ ವಿಶ್ವಾಸಕ್ಕೆ ತೆಗೆದುಕೊಂಡು ಸಾಕಷ್ಟು ಅಭಿವೃದ್ಧಿ ಕಾರ್ಯಗಳನ್ನು ಅನುಷ್ಠಾನ ಮಾಡಿದ್ದರು. ಕೋವಿಡ್ ಕಾಲದಲ್ಲೂ ವಿಶೇಷ ಸೇವೆಯ ಮೂಲಕ ಗುರುತಿಸಿಕೊಂಡ ಅವರು ಮಕ್ಕಳ ಭವಿಷ್ಯದ ದೃಷ್ಟಿಯಿಂದ ಚರ್ಚ್ ಅಧೀನದ ವಿದ್ಯಾಸಂಸ್ಥೆಗಳ ವಿದ್ಯಾರ್ಥಿಗಳ ಅನುಕೂಲಕ್ಕಾಗಿ ಒಳಾಂಗಣ ಕ್ರೀಡಾಂಗಣದ ನವೀಕರಣವನ್ನೂ ಮಾಡಿದ್ದರು ಎಂದರು.
ಈ ಸಂದರ್ಭದಲ್ಲಿ ಮಡಂತ್ಯಾರು ಗ್ರಾ.ಪಂ. ಅಧ್ಯಕ್ಷೆ ಶಶಿಪ್ರಭಾ ಮಾತನಾಡಿ, ಗ್ರಾ.ಪಂ.ನ ಹಲವು ಕಾರ್ಯಕ್ರಮಗಳಿಗೆ ವಿಶೇಷ ಸಹಕಾರ ನೀಡಿದ್ದ ಧರ್ಮಗುರುಗಳು ಹಲವು ಪಠ್ಯಕ್ರಮಗಳನ್ನೂ ಸಂಘಟಿಸಿದ್ದರು. ಸ್ವಚ್ಛತೆಯ ಕಾರ್ಯದಲ್ಲೂ ಪಂಚಾಯತ್ ಜತೆ ಕೈ ಜೋಡಿದ್ದಾರೆಂದರು. ಕಾರ್ಯಕ್ರಮದಲ್ಲಿ ಸೇಕ್ರೆಡ್ ಹಾರ್ಟ್ ವಿದ್ಯಾಸಂಸ್ಥೆ ಮಡಂತ್ಯಾರು ಗ್ರಾ.ಪಂ., ಜೇಸಿಐ ಮಡಂತ್ಯಾರು ಘಟಕ, ರೋಟರಿ ಕ್ಲಬ್ ಮಡಂತ್ಯಾರು ವತಿಯಿಂದ ಧರ್ಮಗುರುಗಳನ್ನು ಸಮ್ಮಾನಿಸಲಾಯಿತು. ಸಮಾರಂಭದಲ್ಲಿ ಮಂಗಳೂರು ಕೆಥೋಲಿಕ್ ಶಿಕ್ಷಣ ಮಂಡಳಿಯ ಕಾರ್ಯದರ್ಶಿ ವಂ। ಅಂಟೋನಿ ಮೈಕಲ್ ಸೇರ, ಸೇಕ್ರೆಡ್ ಹಾರ್ಟ್ ಪ್ರಾಂಶುಪಾಲ ಜೋಸೆಫ್ ಎನ್.ಎಂ., ಹಿರಿಯ ವಿದ್ಯಾರ್ಥಿ ಸಂಘದ ಅಧ್ಯಕ್ಷ ಫ್ರಾನ್ಸಿಸ್ ವಿ.ವಿ., ಜೇಸಿಐ ಮಡಂತ್ಯಾರು ಘಟಕದ ಅಧ್ಯಕ್ಷ ಅಶೋಕ್ ಗುಂಡ್ಯಲ್ಕೆ, ರೋಟರಿ ಕ್ಲಬ್ ಮಡಂತ್ಯಾರು ಘಟಕದ ಅಧ್ಯಕ್ಷ ರೊನಾಲ್ಡ್ ಸಿಕ್ವೇರಾ , ಚರ್ಚ್ ಪಾಲನ ಸಮಿತಿಯ ಜೆರಾಲ್ಡ್ ಮೋರಸ್, ಮಡಂತ್ಯಾರು ವರ್ತಕರ ಸಂಘದ ಅಧ್ಯಕ್ಷ ಜಯಂತ್ ಶೆಟ್ಟಿ ಉಪಸ್ಥಿತರಿದ್ದರು.
ವಿದ್ಯಾರ್ಥಿ ಕ್ಷೇಮಪಾಲನಾಧಿಕಾರಿ ಪ್ರೊ| ಪ್ರಕಾಶ್ ಕ್ರಮಧಾರಿ ಸ್ವಾಗತಿಸಿದರು. ಪ್ರೊ| ಅಲೆಕ್ಸ್ ಐವನ್ ಡಿ’ಸೋಜಾ ಅಭಿನಂದನ ಭಾಷಣ ಮಾಡಿದರು. ಪ್ರೊ| ಪೌಲ್ ಮೆನೇಜಸ್ ವಂದಿಸಿದರು. ಪ್ರೊ| ನೆಲ್ಸನ್ ಮೋನಿಸ್ ಕಾರ್ಯಕ್ರಮ ನಿರ್ವಹಿಸಿದರು.