ಬೆಳ್ತಂಗಡಿ: ಮಂಗಳೂರು, ವಿಲ್ಲುಪುರಂ ರಾಷ್ಟ್ರೀಯ ಹೆದ್ದಾರಿಯ ಚಾರ್ಮಾಡಿ ಘಾಟಿಯ ಏಳನೇ ತಿರುವಿನಲ್ಲಿ ಮೇ 17 ರಂದು ಸಂಜೆ ಒಂಟಿ ಸಲಗ ರಸ್ತೆಯಲ್ಲಿಯೇ ನಿಂತು ಪ್ರಯಾಣಿಕರಿಗೆ ವಾಹನ ಸವಾರರಿಗೆ ಭಯ ಸೃಷ್ಟಿಸಿದೆ. ಸಂಜೆ ಮಂಗಳೂರು ಹಾಸನ ಸರ್ಕಾರಿ ಬಸ್ ಸಂಚರಿಸುವ ವೇಳೆ ಕೂದಲೆಳೆ ಅಂತರದಲ್ಲಿ ಕಾಡಾನೆಯಿಂದ ಬಸ್ ಪಾರಾಗಿದೆ.
ಬಸ್ ಸಮೀಪವೇ ಕಾಡಾನೆ ಕಂಡು ಚಾಲಕ ಬಸ್ ನಿಲ್ಲಿಸಿದ್ದರಿಂದ ಅಲ್ಲೆ ನಿಂತಿದ್ದ ಆನೆ ನಂತರ ಏಳನೇ ತಿರುವಿನ ಮತ್ತೊಂದು ಭಾಗದಲ್ಲಿ ಹೋಗಿ ನಿಂತಿತು. ಬಸ್ ನ ಹಿಂದೆ ಹಲವು ವಾಹನಗಳು ಅರ್ಧ ಗಂಟೆಗೂ ಅಧಿಕ ಹೊತ್ತು ಸಾಲುಗಟ್ಟಿ ನಿಂತಿದ್ದು ನಂತರ ವಾಹನಗಳು ನಿಧಾನವಾಗಿ ಚಲಿಸಲಾರಂಭಿಸಿತು.ಕಳೆದ ಕೆಲವು ಸಮಯಗಳಿಂದ ಈ ಪ್ರದೇಶದಲ್ಲಿ ಕಾಡಾನೆ ಕಂಡು ಬರುತಿದ್ದು ವಾಹನ ಸವಾರರು ಆತಂಕ ಪಡುವಂತಾಗಿದೆ.ಅರಣ್ಯ ಇಲಾಖೆ ಈ ಬಗ್ಗೆ ಕ್ರಮ ಕೈಗೊಳ್ಳದಿದ್ದಲ್ಲಿ ಮುಂದೆ ದೊಡ್ಡ ಅನಾಹುತ ಸಂಭವಿಸಬಹುದು.ಅದ್ದರಿಂದ ಅಧಿಕಾರಿಗಳು ಚಾರ್ಮಾಡಿ ಘಾಟಿನಲ್ಲಿ ರಾತ್ರಿ ಹೊತ್ತು ವಾಹನ ಸಂಚಾರ ನಿರ್ಬಂಧಿಸಿ ಕಾಡಾನೆಯನ್ನು ಸ್ಥಳಾಂತರಿಸಬೇಕು ಎಂದು ಸಾರ್ವಜನಿಕರು ಆಗ್ರಹಿಸಿದ್ದಾರೆ.