Site icon Suddi Belthangady

ಜೀವ ಬೆದರಿಕೆ, ಹಲ್ಲೆ, ಜಾತಿ ನಿಂದನೆ ಆರೋಪ: ಕೊಯ್ಯೂರಿನ ಗಿರೀಶ್ ವಿರುದ್ಧ ದೂರು

ಬೆಳ್ತಂಗಡಿ: ಚುನಾವಣೆಯ ದಿನ ಬಿ. ಜೆ. ಪಿ ಕಾರ್ಯಕರ್ತ ಗಿರೀಶ್ ಎಂಬವರು ಹಲ್ಲೆ ನಡೆಸಿ ಜೀವ ಬೆದರಿಕೆ ಒಡ್ಡಿ ಜಾತಿ ನಿಂದನೆ ಮಾಡಿದ್ದಾರೆ ಎಂದು ಆರೋಪಿಸಿ ಕೊಯ್ಯೂರು ಗ್ರಾಮದ ದರ್ಖಾಸು ಮನೆಯ ಅಮ್ಮು ಎಂಬವರ ಪುತ್ರ ಅಣ್ಣಿ ಎಂಬವರು ಬೆಳ್ತಂಗಡಿ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.
ನಾನು ಕಾಂಗ್ರೇಸ್ ಪಕ್ಷದ ಕಾರ್ಯಕರ್ತನಾಗಿ ಹಲವಾರು ವರ್ಷಗಳಿಂದ ದುಡಿಯುತ್ತಿದ್ದೇನೆ. ಮೇ.10ರಂದು ನಡೆದ ಬೆಳ್ತಂಗಡಿ ವಿಧಾನಸಭಾ ಕ್ಷೇತ್ರದ ಚುನಾವಣೆಯಲ್ಲಿ ನಮ್ಮ ಅಭ್ಯರ್ಥಿ ರಕ್ಷಿತ್ ಶಿವಾರಾಮ್‌ರವರ ಪರವಾಗಿ ಕೊಯ್ಯೂರು ಗ್ರಾಮದ ಮಲೆಬೆಟ್ಟು ಶಾಲೆಯ ಬಳಿಯಲ್ಲಿ ನಮ್ಮ ಪಕ್ಷದ ಬೂತ್‌ನಲ್ಲಿ ಕುಳಿತುಕೊಂಡಿದ್ದೆ. ಆ ದಿನ ಸಂಜೆ 4 ಗಂಟೆಯ ಹೊತ್ತಿಗೆ ಮಳೆ ಬಂದ ಕಾರಣ ನಾನು ಪಕ್ಕದಲ್ಲಿದ್ದ ರಿಕ್ಷಾ ಸ್ಟ್ಯಾಂಡ್‌ನಲ್ಲಿ ಹೋಗಿ ನಿಂತಿದ್ದೆ. ಆ ಸಮಯ ಅಲ್ಲಿಗೆ ಬಂದ ಬಿ.ಜೆ.ಪಿ ಕಾರ್ಯಕರ್ತರಾದ ಕೊಯ್ಯೂರು ಗ್ರಾಮದ ಮರಿಯ ಮನೆಯ ಗಿರೀಶ್ ಎಂಬವರು ನನ್ನನ್ನು ಉದ್ದೇಶಿಸಿ ಇದು ನಮ್ಮ ಪಕ್ಷದ ಶಾಸಕ ಹರೀಶ್ ಪೂಂಜರವರು ಕಟ್ಟಿಸಿದ ರಿಕ್ಷಾ ನಿಲ್ದಾಣ. ನೀನು ಯಾವ ಮುಖ ಇಟ್ಟುಕೊಂಡು ಇಲ್ಲಿ ನಿಲ್ಲುತ್ತೀಯಾ. ಹೋಗು ಇಲ್ಲಿಂದ ಎಂದು ಹೇಳಿ ನನ್ನ ಎದೆಗೆ ಕೈ ಹಾಕಿ ದೂಡಿರುತ್ತಾರೆ. ಆಗ ನಾನು ಕೆಳಗೆ ಬಿದ್ದಿದ್ದು ಅಲ್ಲಿ ನನ್ನ ಹೊಟ್ಟೆಗೆ ಕಾಲಿನಿಂದ ತುಳಿದು ಕೈಯಿಂದ ಹೊಡೆದಿರುತ್ತಾರೆ. ಅಲ್ಲದೆ ಜಾತಿ ನಿಂದನೆಗೈದು ಇನ್ನು ಮುಂದೆ ಹರೀಶ್ ಪೂಂಜ ಕಟ್ಟಿಸಿದ ರಿಕ್ಷಾ ನಿಲ್ದಾಣಕ್ಕೆ ಬಂದರೆ ಮತ್ತು ಹಲ್ಲೆಗೈದ ವಿಚಾರವನ್ನು ಯಾರಿಗಾದರೂ ಹೇಳಿದರೆ ಜೀವ ಸಹಿತ ಬಿಡುವುದಿಲ್ಲ ಎಂದು ಜೀವ ಬೆದರಿಕೆ ಒಡ್ಡಿದ್ದಾರೆ ಎಂದು ದೂರಿನಲ್ಲಿ ತಿಳಿಸಿರುವ ಅಣ್ಣಿಯವರು ಗಿರೀಶ್ ಅವರು ಬಲಾಢ್ಯನಾಗಿದ್ದು ದೂರು ನೀಡಿದರೆ ಜೀವ ತೆಗೆಯುವುದಾಗಿ ಬೆದರಿಕೆ ಒಡ್ಡಿರುವುದರಿಂದ ಹೆದರಿಕೆಯಲ್ಲಿ ನಾನು ತಕ್ಷಣ ದೂರು ನೀಡಿಲ್ಲ. ಪಸ್ತುತ ನಾನು ನಮ್ಮ ದಲಿತ ಸಂಘಟನೆಗಳ ಸದಸ್ಯರಲ್ಲಿ ಈ ವಿಚಾರ ತಿಳಿಸಿದ್ದು ಅವರು ನನಗೆ ಧೈರ್ಯ ತುಂಬಿದ್ದಾರೆ ಎಂದು ದೂರಿನಲ್ಲಿ ತಿಳಿಸಿದ್ದಾರೆ.

Exit mobile version