ಉಜಿರೆ: ಬೇಸಿಗೆಯ ಬಿಸಿಲ ತಾಪಮಾನ ದಿನದಿಂದ ದಿನಕ್ಕೆ ಏರುತ್ತಿರುವ ಈ ದಿನಗಳಲ್ಲಿ ಪ್ರಕೃತಿಯ ಸೂಕ್ಷ್ಮ ಜೀವ ಪ್ರಭೇದಗಳಾದ ಪಕ್ಷಿಗಳು ನೀರು ಮತ್ತು ಆಹಾರದ ಕೊರತೆಯಿಂದಾಗಿ ಬವಣೆ ಅನುಭವಿಸುವಂಥಾಗಿದೆ.
ನದಿ, ಕೆರೆ, ಜಲಮೂಲಗಳು ಬತ್ತಿ ಹೋಗುತ್ತಿರುವ ಈ ಸಂದರ್ಭದಲ್ಲಿ ಜನರೇ ಪರದಾಡುತ್ತಿರುವಾಗ ಬಾನಾಡಿಗಳು ಆಹಾರ ಮತ್ತು ನೀರಿನ ಕೊರತೆಯಿಂದ ತೀರ ಸಂಕಷ್ಟವನ್ನು ಎದುರಿಸುವ ಹಾಗಾಗಿದೆ.
ಪಕ್ಷಿಗಳ ಈ ಬವಣೆಯನ್ನು ನೀಗಲು ಉಜಿರೆಯ ಎಸ್.ಡಿ.ಎಮ್ ಕಾಲೇಜಿನ ಸಸ್ಯಶಾಸ್ತ್ರ ವಿಭಾಗದ ವತಿಯಿಂದ ಬಾನಾಡಿಗಳ ಬಾಯಾರಿಕೆ ಇಂಗಿಸುವ ಒಂದು ವಿಶೇಷ ಯೋಜನೆಯನ್ನ ರೂಪಿಸಲಾಗಿದ್ದು ಆ ಪ್ರಕಾರ ಕಾಲೇಜಿನ ಆವರಣದಲ್ಲಿರುವ ಮರಗಳಲ್ಲಿ ಹಾಗೂ ವಿದ್ಯಾರ್ಥಿಗಳ ಮನೆಗಳಲ್ಲಿ ಬರ್ಡ ಫೀಡರ್ ಗಳನ್ನು ಅಳವಡಿಸಿ ಅದರಲ್ಲಿ ನೀರು ಮತ್ತು ಧಾನ್ಯವನ್ನು ಹಾಕಿ ಹಕ್ಕಿಗಳಿಗೆ ತಮ್ಮ ಕೈಲಾದ ಸಹಾಯ ಮಾಡುವ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ.
ಬರ್ಡ್ ಫೀಡರ್ಗಳಿಗೆ ನೀರನ್ನು ತುಂಬಿ ಆಹಾರದ ಕಾಳುಗಳನ್ನ ಹಾಕುವುದರ ಮೂಲಕ ಕಾಲೇಜಿನ ಪ್ರಾಂಶುಪಾಲರಾದ ಡಾ. ಬಿ ಏ ಕುಮಾರ ಹೆಗ್ಡೆ ಅವರು ಈ ಯೋಜನೆಯನ್ನು ಉದ್ಘಾಟಿಸಿ ಪ್ರಕೃತಿ, ಪರಿಸರ, ಪಕ್ಷಿಗಳು ಮತ್ತು ಮನುಷ್ಯರ ನಡುವೆ ಇರುವ ಸಂಬಂಧವನ್ನು ಅವರು ವಿದ್ಯಾರ್ಥಿಗಳಿಗೆ ವಿವರಿಸಿ ಹೇಳಿದರು.
ಸಸ್ಯ ಶಾಸ್ತ್ರ ವಿಭಾಗದ ಪ್ರಾಧ್ಯಾಪಕರು ಮತ್ತು ವಿದ್ಯಾರ್ಥಿ ಪ್ರತಿನಿಧಿಗಳು ಈ ಉಪಸ್ಥಿತರಿದ್ದರು.