ಉಜಿರೆ: ಮೇ.10 ಮತದಾನವೆಂದು ಚುನಾವಣಾ ಸಮಿತಿ ಘೋಷಣೆ ಮಾಡಿದ್ದೆ ತಡ ರಾಜ್ಯರಣ ರಂಗವಾಗಿದೆ.ಈ ಹಿನ್ನಲೆಯಲ್ಲಿ ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಕಾಲೇಜು, ಉಜಿರೆಯ ರಾಷ್ಟ್ರೀಯ ಸೇವಾ ಯೋಜನಾ ಘಟಕದ ಸ್ವಯಂಸೇವಕರು, ದಕ್ಷಿಣ ಕನ್ನಡ ಜಿಲ್ಲೆ ಸ್ವೀಪ್ ಸಮಿತಿ, ತಾಲೂಕು ಆಡಳಿತ, ಬೆಳ್ತಂಗಡಿ, ಗ್ರಾಮ ಪಂಚಾಯತ್, ಉಜಿರೆ, ಆಂತರಿಕ ಗುಣಮಟ್ಟದ ಭರವಸೆಯ ಕೋಶ, ಸಾಮಾಜಿಕ ಜವಾಬ್ದಾರಿಗಳ ಉಪಕ್ರಮಗಳ ಸಮಿತಿ, ವಾಣಿಜ್ಯ ವಿಭಾಗ ಮತ್ತು ಗಣಕ ವಿಜ್ಞಾನ ವಿಭಾಗದ ಸಹಯೋಗದೊಂದಿಗೆ, ಮೇ 5 ಶುಕ್ರವಾರದಂದು ಚುನಾವಣೆ ನಾವೇ ಹೊಣೆ ಎಂಬ ಶೀರ್ಷಿಕೆ ಅಡಿಯಲ್ಲಿ ಬೀದಿ ನಾಟಕವನ್ನು ಉಜಿರೆಯ ಬಸ್ ನಿಲ್ದಾಣದ ಮುಂದೆ ಪ್ರದರ್ಶಿಸಿದರು.
ನಾಟಕದಲ್ಲಿ ಮತದಾನದ, ಉದ್ದೇಶ, ಮಹತ್ವದ ಬಗ್ಗೆ ಹಾಗೂ ಜಾತಿ ನೋಡಿ ಮತ ಹಾಕಬಾರದೆಂದು ಚುನಾವಣೆಯ ಸಂದರ್ಭದಲ್ಲಿ ನಡೆಯುವ ವ್ರತ್ತಾಂತಗಳನ್ನು ಪಾತ್ರಗಳನ್ನು ಆಗಿ ಮಾಡಿ ಸಾರ್ವಜನಿಕರಲ್ಲಿ ಅರಿವು ಮೂಡಿಸಿದರು. ಪಾತ್ರಾಭಿನಯಗಳ ಮೂಲಕ ವೋಟರ್ ಐಡಿ ಬಗ್ಗೆ, 18 ವರ್ಷ ಮೇಲ್ಪಟ್ಟವರು ಒಂದು ವೇಳೆ ಓಟರ್ ಐಡಿ ಇಲ್ಲದಿದ್ದಲ್ಲಿ ಆಧಾರ್ ಕಾರ್ಡ್ ಮೂಲಕ ಮತ ಚಲಾಯಿಸಬಹುದೆಂದು ಹಾಗೂ ಚುನಾವಣೆಯಲ್ಲಿ ನಿಂತ ಅಭ್ಯರ್ಥಿಗಳಾರು ಇಷ್ಟವಿಲ್ಲದೆ ಹೋದಲ್ಲಿ ನೋಟ ಎಂಬ ಆಯ್ಕೆಯನ್ನಾದರೂ ಒತ್ತಬೇಕು, ಆಗ ಅಭ್ಯರ್ಥಿಗಳ ಮೇಲೆ ಜನರಿಗೆ ವಿಶ್ವಾಸವಿಲ್ಲವೆಂದು ಸರ್ಕಾರಕ್ಕೆ ತಿಳಿಯುತ್ತದೆ ಎಂದೂ, ತಮ್ಮ ಅಮೂಲ್ಯವಾದ ಮತವನ್ನು ಒಂದು ಶಸ್ತ್ರವಾಗಿ ಬಳಸಬೇಕು ಎಂದು ಜಾಗೃತಿ ಮೂಡಿಸಿದರು. ಸ್ವಯಂ ಸೇವಕರ ಈ ಬೀದಿ ನಾಟಕ ಪ್ರದರ್ಶನ ಸ್ಥಳದಲ್ಲಿದ್ದ ಪ್ರೇಕ್ಷಕರ ಅಪಾರ ಮೆಚ್ಚುಗೆಗೆ ಪಾತ್ರವಾಯಿತು.
ಈ ಸಂದರ್ಭದಲ್ಲಿ ರಾಷ್ಟ್ರೀಯ ಸೇವಾ ಯೋಜನೆಯ ಯೋಜನಾಧಿಕಾರಿಗಳಾದ ಶ್ರೀಮತಿ ದೀಪ ಆರ್.ಪಿ ಹಾಗೂ ವಾಣಿಜ್ಯ ವಿಭಾಗದ, ಗಣಕ ವಿಜ್ಞಾನ ವಿಭಾಗದ ಪ್ರಾಧ್ಯಾಪಕರುಗಳು, ಗ್ರಾಮ ಪಂಚಾಯಿತಿಯ ಆಡಳಿತ ವರ್ಗದವರು, ಸಾರ್ವಜನಿಕರು ಉಪಸ್ಥಿತರಿದ್ದರು.