ಬೆಳ್ತಂಗಡಿ: ಜೆಡಿಎಸ್ ಪಕ್ಷದಿಂದ ಮಾತ್ರ ಜನ ಸಾಮಾನ್ಯರ ಸಂತೃಪ್ತಿಯ ಬದುಕು ನಿರ್ಮಾಣ ಸಾಧ್ಯ. ಆರೋಗ್ಯ, ಉದ್ಯೋಗ ಮತ್ತು ಶಿಕ್ಷಣಕ್ಕೆ ಒತ್ತು ನೀಡಿ ಕರ್ನಾಟಕದ ಸಮಗ್ರ ಅಭಿವೃದ್ಧಿಯೇ ಪಕ್ಷದ ಉದ್ದೇಶವಾಗಿದೆ. ಚುನಾವಣಾ ಫಲಿತಾಂಶ ಘೋಷಣೆಯಾದ ಬಳಿಕ ಮೇ.18 ರಂದು ಹೆಚ್.ಡಿ.ಕುಮಾರಸ್ವಾಮಿ ಈ ರಾಜ್ಯದ ಮುಖ್ಯಮಂತ್ರಿಯಾಗುವುದು ಖಚಿತ. ಆ ನಿಟ್ಟಿನಲ್ಲಿ ನಮ್ಮ ಅಭ್ಯರ್ಥಿ ಅಶ್ರಫ್ ಆಲಿಕುಂಞಿ ಅವರನ್ನು ಬೆಂಬಲಿಸಿ ಎಂದು ಜೆಡಿಎಸ್ ಪಕ್ಷದ ಜಿಲ್ಲಾಧ್ಯಕ್ಷ ಜಾಕೆ ಮಾಧವ ಗೌಡ ವಿನಂತಿಸಿಕೊಂಡರು.ಅವರು ಭಾನುವಾರ ಬೆಳ್ತಂಗಡಿ ಅಂಬೇಡ್ಕರ್ ಭವನದ ಬಳಿ ಜೆಡಿಎಸ್ ಪಕ್ಷದ ಬೆಳ್ತಂಗಡಿ ವಿಧಾನಸಭಾ ಕ್ಷೇತ್ರದ ಅಭ್ಯರ್ಥಿ ಅಶ್ರಫ್ ಆಲಿಕುಂಞಿ ಅವರ ಪರವಾಗಿ ನಡೆದ ಚುನಾವಣಾ ಪ್ರಚಾರ ಬಹಿರಂಗ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಪಕ್ಷದ ಅಭ್ಯರ್ಥಿ ಅಶ್ರಫ್ ಆಲಿಕುಂಞಿ ಮಾತನಾಡಿ, ‘ಕಳೆದ 23 ವರ್ಷಗಳಿಂದ ಪತ್ರಕರ್ತನಾಗಿ ತಾಲ್ಲೂಕಿನಾದ್ಯಂತ ಓಡಾಡಿ 81 ಗ್ರಾಮಗಳ ಮತ್ತು ಜನರ ಸಮಸ್ಯೆಯನ್ನು ಅರಿತುಕೊಂಡಿದ್ದೇನೆ. ರಾಷ್ಟ್ರೀಯ ಪಕ್ಷವೊಂದು ತಾಲ್ಲೂಕಿನ ಇತಿಹಾಸದಲ್ಲಿಯೇ ಮೊದಲು ಎಂಬಂತೆ ಅಲ್ಪಸಂಖ್ಯಾತ ಸಮುದಾಯದ ನನಗೆ ಬಿ ಫಾರ್ಮ್ ನೀಡಿ ಚುನಾವಣೆಗೆ ಸ್ಪರ್ಧಿಸಲು ಅವಕಾಶ ನೀಡಿದೆ. ಜಾತ್ಯಾತೀತ ಮನೋಭಾವದ ನನಗೆ ಮತ ನೀಡಿ ಆಶೀರ್ವದಿಸಿದಲ್ಲಿ ಜತೆಯಿದ್ದು ಜನ ಸಾಮಾನ್ಯರ ಬದುಕನ್ನು ಬೆಳಗುವ ಕಾರ್ಯ ಮಾಡುತ್ತೇನೆ ಎಂದರು.
ಜೆಡಿಎಸ್ ಮೀನುಗಾರರ ಘಟಕದ ರಾಜ್ಯಾಧ್ಯಕ್ಷ ರತ್ನಾಕರ ಸುವರ್ಣ, ರಾಜ್ಯ ಕಾರ್ಯದರ್ಶಿ ಉಮೇಶ್ ಕುಮಾರ್, ಷಾ ಝಮೀರ್ ಸಭೆಯನ್ನುದ್ದೇಶಿಸಿ ಮಾತನಾಡಿದರು.
ಬಂಟ್ವಾಳ ಕ್ಷೇತ್ರದ ಅಭ್ಯರ್ಥಿ ಪ್ರಕಾಶ್ ರಫಾಯಲ್ ಗೋಮ್ಸ್, ತಾಲ್ಲೂಕು ಕಾರ್ಯಾಧ್ಯಕ್ಷ ರಾಮ ಆಚಾರಿ, ತಾಲ್ಲೂಕು ಸಂಘಟನಾ ಕಾರ್ಯದರ್ಶಿ ಎಚ್.ಎನ್. ನಾಗರಾಜ್, ಅಲ್ಪಸಂಖ್ಯಾತ ಘಟಕದ ಉಪಾಧ್ಯಕ್ಷ ಅಬ್ದುಲ್ ರಹಿಮಾನ್ ಬಂಡಶಾಲೆ, ಕಾರ್ಯದರ್ಶಿ ಶಾಹಿದ್ ಪಾದೆ, ರಾಮಕೃಷ್ಣ ಗೌಡ ನೆರಿಯ, ಜಲೀಲ್ ಜಾರಿಗೆಬೈಲು, ಪ್ರಕಾಶ್ ಹೆಬ್ಬಾರ್ ಅರಸಿನಮಕ್ಕಿ, ಲುಕ್ಮಾನುಲ್ ಹಕೀಂ ಧರ್ಮಸ್ಥಳ ಮೊದಲಾದವರು ಇದ್ದರು.
ಸುಮಾರು 25 ಮಂದಿ ವಿವಿಧ ಪಕ್ಷಗಳಿಂದ ಜೆಡಿಎಸ್ ಪಕ್ಷಕ್ಕೆ ಸೇರ್ಪಡೆಗೊಂಡರು.
ಯುವ ನ್ಯಾಯವಾದಿ ನವಾಝ್ ಶರೀಫ್ ಕಕ್ಕಿಂಜೆ ಪ್ರಸ್ತಾವನೆಗೈದು ಸ್ವಾಗತಿಸಿದರು.