Site icon Suddi Belthangady

ಧರ್ಮಸ್ಥಳದಲ್ಲಿ 51ನೇ ವರ್ಷದ ಉಚಿತ ಸಾಮೂಹಿಕ ವಿವಾಹ ಸಂಭ್ರಮ, ಸಡಗರ ನಾಳೆ: ಇನ್ನೂರ ಒಂದು ಜೋಡಿ ಗೃಹಸ್ಥಾಶ್ರಮಕ್ಕೆ ಪಾದಾರ್ಪಣೆ

ಉಜಿರೆ: ನಾಡಿನ ಪವಿತ್ರ ಕ್ಷೇತ್ರ ಧರ್ಮಸ್ಥಳದಲ್ಲಿ ಇದೀಗ ಮದುವೆ ಮನೆಯ ಸಂಭ್ರಮ, ಸಡಗರ.ಬುಧವಾರ ಸಂಜೆ ಗಂಟೆ 6.40ಕ್ಕೆ ಗೋಧೂಳಿ ಲಗ್ನ ಸುಮುಹೂರ್ತದಲ್ಲಿ ಇನ್ನೂರ ಒಂದು ಜೊತೆ ವಧೂ-ವರರು ದಾಂಪತ್ಯ ಜೀವನಕ್ಕೆ ಪಾದಾರ್ಪಣೆ ಮಾಡಲು ಈಗಾಗಲೇ ಹೆಸರು ನೋಂದಾಯಿಸಿದ್ದಾರೆ.


ಇಂದು ಮಂಗಳವಾರ ಅವರ ದಾಖಲೆಗಳನ್ನೆಲ್ಲಾ ಪರಿಶೀಲಿಸಿ ವಧುವಿಗೆ ಸೀರೆ ಮತ್ತು ರವಿಕೆ ಕಣ ಹಾಗೂ ವರನಿಗೆ ಧೋತಿ-ಶಾಲು ನೀಡಲಾಗುವುದು.
ಬುಧವಾರ ಸಂಜೆ 5 ಗಂಟೆಯಿಂದ ಭವ್ಯ ಮೆರವಣಿಗೆಯಲ್ಲಿ ವಧೂ-ವರರು ದೇವಸ್ಥಾನಕ್ಕೆ ಪ್ರದಕ್ಷಿಣೆ ಬಂದು ಅಮೃತವರ್ಷಿಣಿ ಸಭಾಭವನಕ್ಕೆ ಹೋಗುವರು.
ಅಲ್ಲಿ ಧರ್ಮಾಧಿಕಾರಿ ಡಿ.ವೀರೇಂದ್ರ ಹೆಗ್ಗಡೆಯವರು, ಹೇಮಾವತಿ ವಿ. ಹೆಗ್ಗಡೆಯವರು, ಚಲನಚಿತ್ರ ನಟ ತೂಗುದೀಪ ದರ್ಶನ್ ಮೊದಲಾದ ಗಣ್ಯರು ಮಂಗಲಸೂತ್ರ ವಿತರಿಸುವರು. ವೇದ-ಮಂತ್ರ ಘೋಷ ಪಠಣದೊಂದಿಗೆ ಗೋಧೂಳಿ ಲಗ್ನ ಸುಮುಹೂರ್ತದಲ್ಲಿ ವಿವಾಹ ಸಮಾರಂಭವು ಅವರವರ ಜಾತಿ ಸಂಪ್ರದಾಯದಂತೆ ನಡೆಯುತ್ತದೆ. ಬಳಿಕ ದೇವರದರ್ಶನ ಮಾಡಿ ಅನ್ನಪೂರ್ಣ ಭೋಜನಾಲಯದಲ್ಲಿ ಮದುವೆ ಊಟ ಮಾಡಿ ನೂತನ ದಂಪತಿಗಳು ಅವರ ಊರಿಗೆ ತೆರಳುವರು.


ವರದಕ್ಷಿಣೆ ಹಾಗೂ ಮದುವೆಗಾಗಿ ಆಗುವ ದುಂದುವೆಚ್ಚವನ್ನು ತಡೆಯುವ ಉzಶದಿಂದ ಧರ್ಮಸ್ಥಳದಲ್ಲಿ ಧರ್ಮಾಧಿಕಾರಿ ಡಿ. ವೀರೇಂದ್ರ ಹೆಗ್ಗಡೆಯವರು 1972ರಲ್ಲಿ ಉಚಿತ ಸಾಮೂಹಿಕ ವಿವಾಹ ಸಮಾರಂಭವನ್ನು ಪ್ರಾರಂಭಿಸಿದ್ದು ಪ್ರತಿವರ್ಷ ನಡೆಸಲಾಗುತ್ತಿದೆ. ಕಳೆದ ವರ್ಷದವರೆಗೆ 12,576 ಜೊತೆ ಧರ್ಮಸ್ಥಳದಲ್ಲಿ ವಿವಾಹವಾಗಿದ್ದು ಸುಖ-ಶಾಂತಿ, ನೆಮ್ಮದಿಯ ಜೀವನ ನಡೆಸುತ್ತಿದ್ದಾರೆ.

Exit mobile version