Site icon Suddi Belthangady

ಹರೀಶ್ ಪೂಂಜ ಮತದಾರರ ಮನೆ-ಮನೆಗೆ ತೆರಳಿ ಹಣ ಹಂಚುತ್ತಿದ್ದಾರೆ – ಪತ್ರಿಕಾಗೋಷ್ಠಿಯಲ್ಲಿ ವಸಂತ ಬಂಗೇರ

ಬೆಳ್ತಂಗಡಿ: ಚುನಾವಣೆಗೆ ಕೆಲವೇ ದಿನಗಳು ಬಾಕಿ ಇದ್ದು, ಪ್ರಚಾರ ಭರದಿಂದ ಸಾಗುತ್ತಿದೆ.ಈ ಸಂದರ್ಭದಲ್ಲಿ ಕ್ಷೇತ್ರದ ಶಾಸಕ ಬಿಜೆಪಿ ಅಭ್ಯರ್ಥಿ ಹರೀಶ್ ಪೂಂಜರು ಮತದಾರರ ಮನೆ-ಮನೆಗೆ ತೆರಳಿ ಪ್ರತೀದಿನ ಮೂರರಿಂದ ಮೂರುವರೆ ಕೋಟಿ ರೂಪಾಯಿ ಹಣ ಹಂಚುತ್ತಿದ್ದಾರೆ ಎಂದು ಮಾಜಿ ಶಾಸಕ ಕೆ.ವಸಂತ ಬಂಗೇರ ಆರೋಪಿಸಿದರು.ಅವರು ಎ.೨೬ರಂದು ಬೆಳ್ತಂಗಡಿ ಶ್ರೀ ಗುರುನಾರಾಯಣ ಸಂಕೀರ್ಣದಲ್ಲಿ ಕರೆದ ಪತ್ರಿಕಾಗೋಷ್ಠಿಯಲ್ಲಿ ಹೇಳಿದರು.ಪೂಂಜರು ಚುನಾವಣಾ ಪ್ರಚಾರಕ್ಕೆ ಹೋಗುವ ಸಂದರ್ಭ ಪೂಂಜರ ಜೊತೆಗೆ ನಾಲ್ಕು ಕಾರುಗಳು ಹೋಗುತ್ತಿದ್ದು, ಒಂದು ಕಾರಲ್ಲಿ ದೊಡ್ಡ ಮೊತ್ತದ ಹಣವನ್ನು ರವಾನಿಸುತ್ತಾರೆ.ಪ್ರತೀ ಮನೆ-ಮನೆಗೆ ರೂ.ಇಪ್ಪತ್ತೈದು ಸಾವಿರ, ಐವತ್ತು ಸಾವಿರ, ಒಂದು ಲಕ್ಷ, ಐದು ಲಕ್ಷದವರೆಗೂ ಹಂಚುತ್ತಾರೆ.ಮನೆಯವರು ಬೇಡ ಎಂದು ಹೇಳಿದರೂ ಮೇಜಿನ ಮೇಲೆ ಇಟ್ಟು ಹೋಗುತ್ತಾರೆ.ಕಾರ್ಯಕರ್ತರು ಪರಿಶಿಷ್ಟ ಜಾತಿ ಮತ್ತು ಪಂಗಡದವರ ಮನೆಗೆ ಹೋಗಿ ದೇವರ ಫೋಟೋ ಮುಟ್ಟಿಸಿ ಪ್ರತೀ ಮತ ಒಂದಕ್ಕೆ ಒಂದು, ಎರಡು ಸಾವಿರ ನೀಡಿ ಪ್ರಮಾಣ ಮಾಡುತ್ತಾರೆ.ಪೂಂಜರು ಹಂಚುವ ಈ ಎಲ್ಲಾ ಹಣ ಕ್ಷೇತ್ರದ ಅಭಿವೃದ್ಧಿಯ ಕಾಮಗಾರಿಗಳ ೪೦% ಕಮಿಷನ್ ಆಗಿರುತ್ತದೆ.ಚುನಾವಣಾಧಿಕಾರಿಗಳು, ಪೋಲೀಸರು, ಕಂದಾಯಾಧಿಕಾರಿಗಳು ನಮ್ಮ ಕಾಂಗ್ರೆಸ್ ನಾಯಕರುಗಳನ್ನು ತನಿಖೆ ಮಾಡುತ್ತಾರೆ.ಆದರೆ ಶಾಸಕರು ಹಂಚುವ ಈ ಹಣದ ಬಗ್ಗೆ ಯಾವುದೇ ತನಿಖೆ ಗೊತ್ತಾಗುವುದಿಲ್ಲ.ಖುಷಿ ಆಂಬುಲೆನ್ಸ್‌ನಲ್ಲಿ ಹಣ ಸಾಗಾಟ ಮಾಡುತ್ತಿರುವುದು ಕೂಡ ಪೋಲೀಸರಿಗೆ, ಚುನಾವಣಾಧಿಕಾರಿಗಳಿಗೆ ಕಾಣಿಸುವುದಿಲ್ಲ.ಸರಕಾರ ಮತದಾನ ಹೆಚ್ಚು ಆಗಬೇಕು ಎಂದಿದ್ದರೂ, ಶಾಸಕರು ಈ ಸಂದರ್ಭದಲ್ಲಿ ಮುಸಲ್ಮಾನರನ್ನು ಅಜ್ಮೇರ್‌ಗೆ, ಹಿಂದುಗಳನ್ನು ದೇವಸ್ಥಾನಕ್ಕೆ ಕಳಿಸುತ್ತಿದ್ದಾರೆ.ತಾಲೂಕಿನ ದೇವಸ್ಥಾನಗಳಲ್ಲಿ ಆಡಂಬರದ ಬ್ರಹ್ಮಕಲಶ ಮಾಡಿಸಿ, ದೇವಸ್ಥಾನದ ಸಮಿತಿಯ ಪದಾಧಿಕಾರಿಗಳ ತಲೆಗೆ ಬಂದಿದೆ.ವೇಣೂರು ದೇವಸ್ಥಾನದ ಬ್ರಹ್ಮಕಲಶದ ಸಂದರ್ಭದಲ್ಲಿ ಆಡಂಬರದಿಂದಾಗಿ ನಷ್ಟವನ್ನು ಅನುಭವಿಸುವಂತಾಗಿದೆ.ಇಲ್ಲಿಯ ದೇವಸ್ಥಾನಕ್ಕೆ ನಾನು ಶಾಸಕನಾಗಿದ್ದ ಸಂದರ್ಭ ೯೫ ಲಕ್ಷ ರೂಪಾಯಿ ಅನುದಾನಕೊಡಿಸಿದ್ದೆ.ಹರೀಶ್ ಪೂಂಜ ಕೇವಲ ೫ ಲಕ್ಷ ನೀಡಿರುವುದು.
ಕಾಂಗ್ರೆಸ್ ಅಭ್ಯರ್ಥಿ ರಕ್ಷಿತ್ ಶಿವರಾಂ ಹೊರಗಿನವರೆಂದು ಅಪಪ್ರಚಾರ ಮಾಡುತ್ತಾರೆ.ಆದರೆ ಅವರು ಬೆಳ್ತಂಗಡಿಯಲ್ಲೇ ಹುಟ್ಟಿದವರು.ಹೇರಾಜೆಯವರಾಗಿದ್ದು ಮುಗ್ಗ ಗುತ್ತು ಕುಟುಂಬದವರು.ಸುಲ್ಕೇರಿ ಹೊಕ್ಕಳ ಮನೆತನದವರು.ಅವರ ತಂದೆ ಬಂಟ್ವಾಳದವರು ಎಂದರು.

ಕಾಂಗ್ರೆಸ್ ವಕ್ತಾರ ಮನೋಹರ್ ಕುಮಾರ್ ಮಾತನಾಡಿ ತಾಲೂಕಿನ ಅಕ್ರಮ ಮರಳುಗಾರಿಕೆ ಬಗ್ಗೆ ಮಾಜಿ ಶಾಸಕರು ವಸಂತ ಬಂಗೇರರು ಇಲಾಖೆಗೆ ತಾಲೂಕಿನ ಅಕ್ರಮ ಮರಳುಗಾರಿಕೆಯ ತನಿಖೆಗೆ ಮನವಿ ಮಾಡಿದ್ದರೂ, ಇಲಾಖೆ ಯಾವುದೇ ಸ್ಪಂದನೆ ನೀಡುತ್ತಿಲ್ಲ.ತಾಲೂಕಿನ ಗುತ್ತಿಗೆದಾರರಿಗೆ ಯಾವುದೇ ಗುತ್ತಿಗೆಯನ್ನು ನೀಡುತ್ತಿಲ್ಲ.ಇದರಲ್ಲಿ ಶಾಸಕರ ಕೈವಾಡವಿದೆ ಎಂದು ಆರೋಪಿಸಿದರು.
ದಲಿತ ನಾಯಕ ಚಂದು.ಎಲ್ ಮಾತನಾಡಿ ಶಿಬಾಜೆ ಶ್ರೀಧರ ಕೊಲೆ ಪ್ರಕರಣದಲ್ಲಿ ಆರೋಪಿಗಳನ್ನು ಶಾಸಕರು ರಕ್ಷಣೆ ಮಾಡಿ, ಇದೀಗ ಅದೇ ದಲಿತರ ಮನೆಗಳಿಗೆ ಮತ ಕೇಳಲು ತೆರಳುತ್ತಾರೆ.ದಲಿತರಿಗೆ ಕಳೆದ ಐದು ವರ್ಷಗಳಿಂದ ಯಾವುದೇ ಹಕ್ಕು ಪತ್ರ ಸವಲತ್ತುಗಳನ್ನು ನೀಡಲಿಲ್ಲ ಎಂದು ಆರೋಪಿಸಿದರು.
ಪತ್ರಿಕಾಗೋಷ್ಠಿಯಲ್ಲಿ ಚುನಾವಣಾ ಉಸ್ತುವಾರಿ ಕೇರಳ ಶಾಸಕ ಜೋಸೆಫ್, ಮುಖಂಡರಾದ ವಕೀಲ ಸಂತೋಷ್ ಲಾಯಿಲ, ಲೋಕೇಶ್ ಗೌಡ ಕೊಯ್ಯೂರು, ಚುನಾವಣಾ ಉಸ್ತುವಾರಿ ಸತೀಶ್ ಕಾಶಿಪಟ್ಣ, ಜಿಲ್ಲಾ ಎಸ್‌ಸಿ ಘಟಕದ ಅಧ್ಯಕ್ಷ ಶೇಖರ ಕುಕ್ಕೇಡಿ, ಬಿ.ಕೆ.ವಸಂತ ಉಪಸ್ಥಿತರಿದ್ದರು.

Exit mobile version