ಬೆಳ್ತಂಗಡಿ: ಬೆಳ್ತಂಗಡಿ ವಿಧಾನಸಭಾ ಕ್ಷೇತ್ರದ ಬಿಜೆಪಿ ಪ್ರಭಾರಿಯಾಗಿ ಯತೀಶ್ ಆರ್‍ವಾರ ಅವರನ್ನು ನೇಮಕ ಮಾಡಲಾಗಿದೆ.
ಬೆಳ್ತಂಗಡಿ ಬಿಜೆಪಿ ಪ್ರಭಾರಿಯಾಗಿದ್ದ ಜಿ.ಪಂ. ಮಾಜಿ ಅಧ್ಯಕ್ಷೆ ಆಶಾ ತಿಮ್ಮಪ್ಪ ಗೌಡರವರು ಪುತ್ತೂರು ವಿಧಾನಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿಯಾಗಿ ಕಣಕ್ಕಿಳಿದಿರುವ ಹಿನ್ನೆಲೆಯಲ್ಲಿ ನೂತನ ಪ್ರಭಾರಿ ಜವಾಬ್ದಾರಿಯನ್ನು ಯತೀಶ್ ಆರ್‍ವಾರರವರಿಗೆ ವಹಿಸಲಾಗಿದೆ.
ಮೂಲತಃ ಬೆಳ್ಳಾರೆ ಸಮೀಪದ ಕೊಡಿಯಾಲ ಗ್ರಾಮದ ಆರ್‍ವಾರ ನಿವಾಸಿಯಾಗಿರುವ ಯತೀಶ್ ಅವರು ಬಿ.ಎ. ಎಲ್‌ಎಲ್‌ಬಿ ಪದವೀಧರರಾಗಿದ್ದಾರೆ. ಅಖಿಲ ಭಾರತ ವಿದ್ಯಾರ್ಥಿ ಪರಿಷತ್‌ನ ಪೂರ್ಣಾವಧಿ ಕಾರ್ಯಕರ್ತರಾಗಿ ೨೦೦೪ರಿಂದ ೨೦೦೯ರವರೆಗೆ ಕಾರ್ಯ ನಿರ್ವಹಿಸಿದ್ದ ಇವರು ಎಬಿವಿಪಿ ಚಿತ್ರದುರ್ಗ ನಗರ ಸಂಘಟನಾ ಕಾರ್ಯದರ್ಶಿಯಾಗಿ ೨೦೦೪ರಿಂದ ೨೦೦೬ರವರೆಗೆ, ಚಿತ್ರದುರ್ಗ ಜಿಲ್ಲಾ ಸಂಘಟನಾ ಕಾರ್ಯದರ್ಶಿಯಾಗಿ ೨೦೦೬ರಿಂದ ೨೦೦೮ರವರೆಗೆ ಮತ್ತು ದಾವಣಗೆರೆ ಹಾಗೂ ಚಿತ್ರದುರ್ಗ ಜಿಲ್ಲೆಯ ಸಂಘಟನಾ ಕಾರ್ಯದರ್ಶಿಯಾಗಿ ೨೦೦೮-೦೯ರವರೆಗೆ ಕಾರ್ಯ ನಿರ್ವಹಿಸಿದ್ದರು. ಬಳಿಕ ೨೦೧೨ರಿಂದ ೨೦೧೯ರವರೆಗೆ ಭಾರತೀಯ ಜನತಾ ಪಾರ್ಟಿಯ ಪೂರ್ಣಾವಧಿ ಕಾರ್ಯಕರ್ತರಾಗಿ ಜವಾಬ್ದಾರಿ ನಿರ್ವಹಿಸಿದ್ದ ಯತೀಶ್ ಆರ್‍ವಾರ ಅವರು ೨೦೧೨-೧೩ರಲ್ಲಿ ರಾಜ್ಯ ಬಿಜೆಪಿ ಕಛೇರಿಯಲ್ಲಿ ಕಾರ್ಯ ನಿರ್ವಹಿಸಿದ್ದರು. ರಾಮನಗರ ಮತ್ತು ಕೋಲಾರ ಜಿಲ್ಲಾ ಬಿಜೆಪಿ ಸಂಘಟನಾ ಪ್ರಧಾನ ಕಾರ್ಯದರ್ಶಿಯಾಗಿ ೨೦೧೩ರಿಂದ ೨೦೧೬ರವರೆಗೆ ಕಾರ್ಯ ನಿರ್ವಹಿಸಿದ್ದ ಇವರು ಮಂಗಳೂರು ವಿಭಾಗ ಬಿಜೆಪಿಯ ಸಹ ಸಂಘಟನಾ ಪ್ರಧಾನ ಕಾರ್ಯದರ್ಶಿಯಾಗಿ ೨೦೧೬ರಿಂದ ೨೦೧೯ರವರೆಗೆ ಜವಾಬ್ದಾರಿ ನಿರ್ವಹಿಸಿದ್ದರು.
ಕೊಡಿಯಾಲ ಹಿ.ಪ್ರಾ.ಶಾಲೆ, ಚೊಕ್ಕಾಡಿ ಕುಕ್ಕಿನಡ್ಕ ಪ್ರೌಢಶಾಲೆ, ಬೆಳ್ಳಾರೆ ಪದವಿಪೂರ್ವ ಕಾಲೇಜು ಮತ್ತು ಪೆರುವಾಜೆಯಲ್ಲಿರುವ ಶಿವರಾಮ ಕಾರಂತ ಸರಕಾರಿ ಪದವಿ ಕಾಲೇಜ್‌ನಲ್ಲಿ ವಿದ್ಯಾಭ್ಯಾಸ ಪೂರೈಸಿದ್ದ ಇವರು ನಂತರ ಚಿತ್ರದುರ್ಗದ ಎಸ್‌ಜೆಎಂ ಕಾನೂನು ಕಾಲೇಜ್‌ನಲ್ಲಿ ಎಲ್‌ಎಲ್‌ಬಿ ಪದವಿ ಪಡೆದಿದ್ದರು. ಪ್ರಸ್ತುತ ಇವರು ಪುತ್ತೂರಿನ ಆರಾಧ್ಯ ಲೇಔಟ್ ನಿವಾಸಿಯಾಗಿದ್ದಾರೆ. ಇವರನ್ನು ಬೆಳ್ತಂಗಡಿ ಬಿಜೆಪಿಯ ಪ್ರಭಾರಿಯನ್ನಾಗಿ ಬಿಜೆಪಿ ರಾಜ್ಯಾಧ್ಯಕ್ಷರಾದ ಸಂಸದ ನಳಿನ್ ಕುಮಾರ್ ಕಟೀಲ್ ನೇಮಕ ಮಾಡಿದ್ದಾರೆ.